Parasurama theme park : ಬೆಂಗಳೂರು : ಕಾರ್ಕಳದ ಪರಶುರಾಮ ಮೂರ್ತಿ ವಿವಾದ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಇದೀಗ ಕಾಂಗ್ರೆಸ್ ಮುಖಂಡ ಮುನಿಯಾಲು ಉದಯ್ ಕುಮಾರ್ ಶೆಟ್ಟಿ ವಿರುದ್ದ ಇದೀಗ ಪರಶುರಾಮನ ಶಿಲ್ಪಿ ಕೃಷ್ಣ ನಾಯ್ಕ್ ಅವರು ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ತನಗೆ ಸುಳ್ಳು ಹೇಳಿಕೆ ನೀಡುವಂತೆ ಮುನಿಯಾಲು ಒತ್ತಡ ಹೇರಿದ್ದಾರೆ ಅಂತಾ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಅಗಸ್ಟ್ 3 ರಂದು ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಶಿಲ್ಪಿ ಕೃಷ್ಣ ನಾಯ್ಕ್ ಅವರಿಗೆ ಸೇರಿದ ಕ್ರಿಶ್ ಆರ್ಟ್ ವರ್ಕ್ಸ್ ನಲ್ಲಿ ನಿರ್ಮಾಣಗೊಳ್ಳುತ್ತಿದ್ದ ಪರಶುರಾಮನ ಮೂರ್ತಿಯನ್ನು ಕಾರ್ಕಳ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಕಾರ್ಕಳ ಪೊಲೀಸರ ಜೊತೆಗೆ ಸ್ಥಳಕ್ಕೆ ಬಂದಿದ್ದ ಕಾಂಗ್ರೆಸ್ ಮುಖಂಡ ಮುನಿಯಾಲು ಉದಯ್ ಕುಮಾರ್ ಶೆಟ್ಟಿ ವಿರುದ್ದ ದೂರು ದಾಖಲಾಗಿದೆ.
ಸಂಜೆ 4.30ರ ಸುಮಾರಿಗೆ ತನ್ನ ವರ್ಕ್ ಶಾಪ್‌ಗೆ ಅಕ್ರಮವಾಗಿ ಪ್ರವೇಶಿಸಿರುವ ಕಾಂಗ್ರೆಸ್ ಮುಖಂಡ ತನಗೆ ಬೆದರಿಕೆಯೊಡ್ಡಿದ್ದಾರೆ. ಅಲ್ಲದೇ ಪರಶುರಾಮ ಮೂರ್ತಿಯ ವಿಚಾರದಲ್ಲಿ ಪ್ರತಿಮೆ ನಿರ್ಮಾಣದಲ್ಲಿ ಕಳಪೆ ಆಗಿದೆ ಎಂದು ಕಾರ್ಕಳ ಶಾಸಕ ಸುನಿಲ್ ಕುಮಾರ್ ಅವರ ವಿರುದ್ದ ಸುಳ್ಳು ಹೇಳಿಕೆಯನ್ನು ನೀಡಬೇಕು ಎಂದು ಮುನಿಯಾಲು ಉದಯ್ ಕುಮಾರ್ ಶೆಟ್ಟಿ ಒತ್ತಡ ಹೇರಿದ್ದಾರೆ. ಶಾಸಕ ಸುನಿಲ್ ಕುಮಾರ್ ವಿರುದ್ದ ಹೇಳಿಕೆ ನೀಡದೇ ಇದ್ದಲ್ಲಿ, ರಾಜ್ಯದಲ್ಲಿ ನಮ್ಮದೇ ಸರಕಾರವಿದೆ, ನಿಮಗೆ ಯಾವುದೇ ರೀತಿಯಲ್ಲಿಯೂ ತೊಂದರೆ ನೀಡುತ್ತೇವೆ, ಹಣ ಬಲ, ರಾಜಕೀಯ ಪ್ರಭಾವ ನಮಗಿದೆ ಎಂದು ಬೆದರಿಕೆ ಒಡ್ಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಶಿಲ್ಪಿ ಕೃಷ್ಣ ನಾಯ್ಕ್ ಅವರು ತಮ್ಮ ಪರ ವಕೀಲರಾದ ಹರ್ಷ ಮುತಾಲಿಕ್ ಅವರ ಜೊತೆಗೆ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ದೂರು ಪಡೆದುಕೊಂಡಿರುವ ಠಾಣೆಯ ಪಿಎಸ್‌ಐ ಸದ್ಯಕ್ಕೆ ಎಫ್‌ಐಆರ್ ದಾಖಲು ಮಾಡೋದಿಲ್ಲ. ಈ ಕುರಿತು ವಿಚಾರಣೆಯನ್ನು ನಡೆಸುತ್ತೇವೆ ಎಂದಿದ್ದಾರೆ. ಅಲ್ಲದೇ ಅಗತ್ಯ ದಾಖಲೆಗಳನ್ನು ನೀಡುವಂತೆ ಕೇಳಿದ್ದಾರೆ. ಈ ವೇಳೆಯಲ್ಲಿ ಉದಯ್ ಕುಮಾರ್ ಅವರು ಬೆದರಿಕೆ ಒಡ್ಡಿರುವ ಕುರಿತ ದಾಖಲೆಗಳನ್ನು ನೀಡಿದ್ದೇವೆ. ಪೊಲೀಸರು ಎರಡು ದಿನಗಳ ಒಳಗಾಗಿ ಎಫ್‌ಐಆರ್ ದಾಖಲು ಮಾಡದೇ ಇದ್ರೆ ಹಿರಿಯ ಅಧಿಕಾರಿಗಳು ಅಥವಾ ನ್ಯಾಯಾಲಯದ ಮೊರೆ ಹೋಗುವುದಾಗಿಯೂ ಹರ್ಷ ಮುತಾಲಿಕ್ ಅವರು ತಿಳಿಸಿದ್ದಾರೆ.
ಇದನ್ನೂ ಓದಿ :ಭೂಕುಸಿತ ಹೆಚ್ಚಳ, LSM ಮ್ಯಾಪಿಂಗ್‌ಗೆ ಹೆಚ್ಚಿನ ಬಜೆಟ್ ಮೀಸಲಿಡಿ : ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಮನವಿ
ಸರಕಾರಕ್ಕೆ ಒತ್ತಡಕ್ಕೆ ಮಣಿತಾರಾ ? ಇಲ್ಲಾ ಎಫ್‌ಐಆರ್ ದಾಖಲಿಸ್ತಾರಾ ಪೊಲೀಸರು
ಕಾರ್ಕಳದ ಪರಶುರಾಮ ಥೀಮ್ ಪಾರ್ಕ್ ವಿಚಾರದಲ್ಲಿ ರಾಜಕೀಯದ ಒತ್ತಡ ಇರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಸರಕಾರ ಹಾಗೂ ಕಾಂಗ್ರೆಸ್ ನಾಯಕರು ಪೊಲೀಸರ ವಿರುದ್ದ ಒತ್ತಡ ಹೇರುತ್ತಿರುವುದು ಸ್ಪಷ್ಟವಾಗುತ್ತಿದೆ. ಕಾರ್ಕಳ ಪೊಲೀಸರು ಉದಯ್ ಕುಮಾರ್ ಶೆಟ್ಟಿ ಮುನಿಯಾಲು ಅವರ ಒತ್ತಡಕ್ಕೆ ಮಣಿದು ಪ್ರತಿಮೆ ಶಿಫ್ಟ್ ಮಾಡಿದ್ದಾರೆಂಬ ಆರೋಪವಿದೆ.
ಇದೀಗ ಅನ್ನಪೂರ್ಣೇಶ್ವರಿ ನಗರ ಠಾಣೆಯ ಖಡಕ್ ಪೊಲೀಸ್ ಅಧಿಕಾರಿ ಕೂಡ ಸರಕಾರದ ಒತ್ತಡಕ್ಕೆ ಮಣಿಯುತ್ತಾರಾ ? ಇಲ್ಲಾ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಎಫ್‌ಐಆರ್ ದಾಖಲಿಸುತ್ತಾರಾ ಅನ್ನೋದನ್ನು ಕಾದು ನೋಡಬೇಕಾಗಿದೆ. ಒಟ್ಟಿನಲ್ಲಿ ಕಾರ್ಕಳದ ಪರಶುರಾಮನ ಪ್ರತಿಮೆ ಕಾರ್ಕಳದಲ್ಲಿ ಸದ್ಯಕ್ಕೆ ನೆಲೆ ನಿಲ್ಲುವುದು ಕಷ್ಟ ಸಾಧ್ಯ.
Artist Krisha Naik has filed a complaint against Muniyalu Udaya Kumar Shetty in the case of Parasurama theme park in Karkala