ಬೆಂಗಳೂರು : ತಮಿಳುನಾಡಿಗೆ ಕಾವೇರಿ ನೀರು (Cauvery Water Dispute )ಬಿಟ್ಟಿರುವುದನ್ನು ಖಂಡಿಸಿ ನಾಳೆ ಹಲವು ಸಂಘಟನೆಗಳು ಬೆಂಗಳೂರು ಬಂದ್‌ಗೆ ಕರೆ ಕೊಟ್ಟಿವೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಬೆಂಗಳೂರು (Bengaluru) ನಗರ ಜಿಲ್ಲೆಯ ಶಾಲೆಗಳಿಗೆ ರಜೆ (School Holiday) ಘೋಷಿಸಿ ಜಿಲ್ಲಾಧಿಕಾರಿ ದಯಾನಂದ್ ಅವರು ಆದೇಶ ಹೊರಡಿಸಿದ್ದಾರೆ.
ಬೆಂಗಳೂರು ಬಂದ್ ಗೆ ಹಲವು ಸಂಘಟನೆಗಳು ಕರೆ ಕೊಟ್ಟಿವೆ. ಖಾಸಗಿ ಸಾರಿಗೆ ಒಕ್ಕೂಟದ ಸುಮಾರು 37ಸಂಘಟನೆಗಳು ಬಂದ್‌ಗೆ ಬೆಂಬಲ ನೀಡಿವೆ. ಖಾಸಗಿ ಬಸ್ ಚಾಲಕರು ಬಂದ್‌ಗೆ ಬೆಂಬಲ ನೀಡಿರುವ ಹಿನ್ನೆಲೆಯಲ್ಲಿ ನಾಳೆ ಖಾಸಗಿ ಬಸ್ಸುಗಳು ರಸ್ತೆಗೆ ಇಳಿಯುವುದಿಲ್ಲ.
ಜೊತೆಗೆ 2 ಸಾವಿರಕ್ಕೂ ಅಧಿಕ ಚಾಲಕರು ನಾಳೆ ನ್ಯಾಷನಲ್ ಕಾಲೇಜಿನಿಂದ ಟೌನ್ ಹಾಲ್‌ವರೆಗೆ ರಾಲಿ ನಡೆಸಲಿದ್ದಾರೆ. ಬೆಂಗಳೂರು ನಗರ ವ್ಯಾಪ್ತಿಯಲ್ಲಿನ ಮೂರು ಕಡೆಗಳಲ್ಲಿ ನಾಳೆ ಬೃಹತ್ ರಾಲಿಗಳು ನಡೆಯಲಿವೆ. ಈ ಸಂದರ್ಭದಲ್ಲಿ ಟ್ರಾಫಿಕ್ ಜಾಮ್ ಉಂಟಾಗುವ ಸಾಧ್ಯತೆಯಿದೆ.
ಖಾಸಗಿ ಶಾಲೆಗಳ ಒಕ್ಕೂಟದಿಂದ ರಜೆ ಘೋಷಣೆ :
ಬೆಂಗಳೂರು ನಗರದಲ್ಲಿ ಬಂದ್ ಬಿಸಿ ತಟ್ಟುವ ಹಿನ್ನೆಲೆಯಲ್ಲಿ ಖಾಸಗಿ ಶಾಲೆಗಳ ಒಕ್ಕೂಟ ರಜೆಯನ್ನು ಘೋಷಣೆ ಮಾಡಿತ್ತು. ಈ ಕುರಿತು ಖಾಸಗಿ ಶಾಲೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಅವರು ಮಾಹಿತಿ ನೀಡಿದ್ದರು. ಆದರೆ ಗ್ರಾಮಾಂತ ಜಿಲ್ಲೆಗಳಲ್ಲಿ ಎಂದಿನಂತೆಯೇ ಶಾಲೆ, ಕಾಲೇಜುಗಳು ನಡೆಯಲಿವೆ.
ಪರಿಸ್ಥಿತಿಯನ್ನು ನೋಡಿಕೊಂಡು ಕ್ರಮ ಕೈಗೊಳ್ಳಲಾಗುತ್ತದೆ. ಆದರೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಶಿವಶಂಕರ್ ಅವರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಈ ಮಹಿಳೆಯರಿಗೆ ಸಿಗೋದಿಲ್ಲ ಗೃಹಲಕ್ಷ್ಮೀ ಯೋಜನೆಯ 2ನೇ ಕಂತಿನ 2000 ರೂ.
ನಾಳಿನ ವಿವಿ ಪರೀಕ್ಷೆಗಳು ಮುಂದೂಡಿಕೆ :
ಕಾವೇರಿ ನದಿ ನೀರಿನ ವಿಚಾರವಾಗಿ ಕರೆ ನೀಡಿರುವ ಬೆಂಗಳೂರು ಬಂದ್ ಹಿನ್ನೆಲೆಯಲ್ಲಿ ಕಾನೂನು ವಿಶ್ವವಿದ್ಯಾಲಯ ನಾಳೆ ನಡೆಯಲಿರುವ ಎಲ್ಲಾ ಪರೀಕ್ಷೆಗಳನ್ನು ಮುಂದೂಡಿಕೆ ಮಾಡಿದೆ ಕರ್ನಾಟಕ ರಾಜ್ಯ ಕಾನೂನು ವಿವಿ ಮೌಲ್ಯಮಾಪನ ಕುಲಸಚಿವರು ಆದೇಶ ಹೊರಡಿಸಿದ್ದಾರೆ.
ನಾಳೆ ನಡೆಯಲಿರುವ ಪರೀಕ್ಷೆಯು ಅಕ್ಟೋಬರ್ 8ರಂದು ನಡೆಯಲಿದೆ. ಉಳಿದಂತೆ ಎಲ್ಲಾ ಪರೀಕ್ಷೆಗಳು ವೇಳಾಪಟ್ಟಿಯಂತೆಯೇ ನಡೆಯಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ನಾಳೆ ಎಂದಿನಂತೆಯೇ ಮೆಟ್ರೋ ಸಂಚಾರ :
ಬೆಂಗಳೂರು ಬಂದ್ ಆಗಿದ್ದರೂ ಕೂಡ ನಮ್ಮ ಮೆಟ್ರೋ ರೈಲುಗಳು ಎಂದಿನಂತೆಯೇ ಸಂಚಾರ ನಡೆಸಲಿವೆ. ಹೀಗಾಗಿ ಪ್ರಯಾಣಿಕರು ನಾಳೆ ಮೆಟ್ರೋ ರೈಲುಗಳನ್ನು ಅವಲಂಭಿಸಬಹುದು. ಇನ್ನು ಬಿಎಂಟಿಸಿ ಬಸ್ಸುಗಳು ಪರಿಸ್ಥಿತಿಯನ್ನು ನೋಡಿಕೊಂಡು ರಸ್ತೆಗೆ ಇಳಿಯುವ ಸಾಧ್ಯತೆಯಿದೆ.
ಬಂದ್‌ಗೆ ಬೆಂಬಲ ವಾಪಾಸ್ ಪಡೆದ ಸಂಘಟನೆಗಳು :
ಬೆಂಗಳೂರು ಬಂದ್‌ಗೆ ಈಗಾಗಲೇ ಹಲವು ಸಂಘಟನೆಗಳು ಬೆಂಬಲ ಸೂಚಿಸಿದ್ದವು. ಆದರೆ ಇದೀಗ ಆಟೋ, ಊಬರ್, ಓಲಾ ಸಂಘಟನೆಗಳು ನಾಳೆ ನಡೆಯುವ ಬೆಂಗಳೂರು ಬಂದ್‌ಗೆ ನೀಡಿದ್ದ ಬೆಂಬಲ ವಾಪಾಸ್ ಪಡೆದಿವೆ. ಸೆಪ್ಟೆಂಬರ್ 29 ರಂದು ಅಖಂಡ ಕರ್ನಾಟಕ ಬಂದ್‌ಗೆ ಬೆಂಬಲ ಸೂಚಿಸಿವೆ.
ಸೆಪ್ಟೆಂಬರ್ 29ರಂದು ಕರ್ನಾಟಕ ಬಂದ್ :
ಕಾವೇರಿ ನೀರು ಬಿಟ್ಟಿರುವ ವಿಚಾರಕ್ಕೆ ಸಂಬಂಧಿಸಿದಂತೆ ನಾಳೆ ಬೆಂಗಳೂರು ಬಂದ್ ನಡೆಯಲಿದೆ. ಆದರೆ ಕೆಲವು ಸಂಘಟನೆಗಳು ನಾಳೆಯ ಬಂದ್‌ಗೆ ಬೆಂಬಲ ಸೂಚಿಸಿಲ್ಲ. ಪ್ರಮುಖವಾಗಿ ಕನ್ನಡಪರ ಸಂಘಟನೆಗಳು ಸೆಪ್ಟೆಂಬರ್ 29ರಂದು ನಡೆಯಲಿರುವ ಕರ್ನಾಟಕ ಬಂದ್‌ಗೆ (karnataka Bandh) ಬೆಂಬಲ ಘೋಷಿಸಿವೆ. ಕರ್ನಾಟಕ ಬಂದ್ ರಾಜ್ಯದಾದ್ಯಂತ ನಡೆಯಲಿದ್ದು, ಹಲವು ಸಂಘಟನೆಗಳು ಬೆಂಬಲ ಸೂಚಿಸಿವೆ.

ಕಾವೇರಿ ನೀರು ಬಿಟ್ಟಿರುವ ವಿಚಾರ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮಂಡ್ಯ, ಮಡಿಕೇರಿ, ಮೈಸೂರು ಜಿಲ್ಲೆಗಳ ರೈತರು ಈಗಾಗಲೇ ರಾಜ್ಯ ಸರಕಾರ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಬಂದ್‌ಗೆ ರಾಜ್ಯದ ಹಲವು ಜಿಲ್ಲೆಗಳಲ್ಲಿಯೂ ವ್ಯಾಪಕ ಬೆಂಬಲ ವ್ಯಕ್ತವಾಗುವ ಸಾಧ್ಯತೆಯಿದೆ.
ಇನ್ನು ಸೆಪ್ಟೆಂಬರ್ 29ರಂದು ನಡೆಯಲಿರುವ ಕರ್ನಾಟಕ ಬಂದ್‌ಗೆ ಶಾಲೆ, ಕಾಲೇಜುಗಳಿಗೆ ರಜೆ ಘೋಷಣೆ ಮಾಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಬೆಂಗಳೂರು ಹೋಟೆಲ್ ಮಾಲೀಕರ ಸಂಘ, ರಾಜ್ಯ ಹೋಟೆಲ್ ಮಾಲೀಕರ ಸಂಘ, ರಿಕ್ಷಾ, ಓಲಾ, ಊಬರ್, ಖಾಸಗಿ ಬಸ್ ಮಾಲೀಕರ ಒಕ್ಕೂಟಗಳು ಈಗಾಗಲೇ ಬಂದ್‌ಗೆ ಬೆಂಬಲ ಸೂಚಿಸಿವೆ.