ಬೆಂಗಳೂರು : ರಾಜ್ಯದಲ್ಲಿ ಕಾವೇರಿ ನದಿ ನೀರು ಹಂಚಿಕೆ ವಿವಾದ (cauvery water dispute) ಭುಗಿಲೆದ್ದಿದೆ. ತಮಿಳುನಾಡಿಗೆ ನೀರು ಬಿಟ್ಟಿರೋದಿಕ್ಕೆ ಕಾವೇರಿಕೊಳ್ಳದ ರೈತರು ಬೀದಿಗಿಳಿದು ಹೋರಾಟ ನಡೆಸಿದ್ದಾರೆ. ಹೀಗೆ ಮುಂದುವರೆದಲ್ಲಿ ಬೆಳೆಗೆ ನೀರಿಲ್ಲದೇ ರೈತರು ಆತ್ಮಹತ್ಯೆಯ ಎಚ್ಚರಿಕೆಯನ್ನು ನೀಡಿದ್ದಾರೆ. ಇದೆಲ್ಲದಕ್ಕಿಂತ ಮುಖ್ಯವಾಗಿ ರಾಜ್ಯ ರಾಜಧಾನಿ ಬೆಂಗಳೂರಿಗೆ (Bangaluru) ಕಾವೇರಿ ನೀರಿನ (Drinking Water Shortage) ಕೊರತೆ ಎದುರಾಗೋ ಮುನ್ಸೂಚನೆ ಸಿಕ್ಕಿದೆ.
ಹೌದು ಕೋಟ್ಯಾಂತರ ಜನರನ್ನು ಒಡಲಲ್ಲಿಟ್ಟು ಪೊರೆಯುತ್ತಿರುವ ಬೆಂಗಳೂರಿನ ಜನರಿಗೆ ಜಲಕಂಟಕ ಎದುರಾಗಲಿದೆ ಅನ್ನೋ ಆತಂಕಕಾರಿ ಸಂಗತಿ ಹೊರಬಿದ್ದಿದೆ. ರಾಜಧಾನಿಯಲ್ಲಿ ಕಾವೇರಿ ನೀರಿನ ಅಭಾವ ಫಿಕ್ಸ್ ಎನ್ನಲಾಗ್ತಿದ್ದು, ಕಾವೇರಿ ನದಿಯಲ್ಲಿ ದಿನೇ ದಿನೇ ನೀರಿನ ಮಟ್ಟ ಕುಸಿಯುತ್ತಿರೋದರಿಂದ ಇಂತಹದೊಂದು ಆತಂಕ ಎದುರಾಗಿದೆ.

ಕಾವೇರಿ ನೀರಿನ ಕೊರತೆಯಿಂದ ಕಂಗಾಲಾಗಿರುವ ಜಲಮಂಡಳಿ ಈ ವಿಚಾರವನ್ನು ಖಚಿತಪಡಿಸಿದ್ದು, ಈ ಸಮಸ್ಯೆ ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಕಾವೇರಿ ನೀರಾವರಿ ನಿಗಮಕ್ಕೆ ಜಲಮಂಡಳಿ ಪತ್ರ ಬರೆದಿದೆ. ಬೆಂಗಳೂರಿನ ಜನತೆಗೆ ಕುಡಿಯುವ ನೀರು ಉಳಿಸುವಂತೆ ಜಲಮಂಡಳಿ ಮನವಿ ಮಾಡಿದೆ.
ಪ್ರತಿ ತಿಂಗಳು ಬೆಂಗಳೂರಿಗೆ ಕುಡಿಯುವ ನೀರಿಗೆ 1.6 ಟಿಎಂಸಿ ನೀರು ಬೇಕು. ಇದರಲ್ಲಿ ಸ್ವಲ್ಪ ಕಡಿಮೆಯಾದರೂ ಜಲಮಂಡಳಿಗೆ ನೀರಿನ ಹಂಚಿಕೆ ಕಷ್ಟ. ಹೀಗಾಗಿ ಆದ್ಯತೆ ಮೇರೆಗೆ ಮುಂದಿನ ಆರು ತಿಂಗಳಿಗೆ ನೀರು ಸಂಗ್ರಹಿಸಿಡುವಂತೆ ಮನವಿ ಮಾಡಿ ಜಲಮಂಡಳಿ ಕಾವೇರಿ ನೀರಾವರಿ ನಿಗಮಕ್ಕೆ ಪತ್ರ ಬರೆದಿದೆ.
ಇದನ್ನೂ ಓದಿ : ಸೆಪ್ಟೆಂಬರ್ 11 ರಂದು ಬೆಂಗಳೂರು ಬಂದ್ : ಏನಿರುತ್ತೆ ? ಏನಿರಲ್ಲ ?
ಇದೇ ಮೊದಲಲ್ಲ ಇಲ್ಲಿಯವರೆಗೆ ಮೂರು ಬಾರಿ ಜಲಮಂಡಳಿ ಇದೇ ರೀತಿ ಪತ್ರ ಬರೆದಿದ್ದು, ನೀರು ಸಂಗ್ರಹಿಸುವಂತೆ ಮನವಿ ಮಾಡಿತ್ತು. ಈ ಹಿಂದೆ ಮಳೆಯಾಗದೇ ಕೆ ಆರ್ ಎಸ್ ನೀರು ಪ್ರಮಾಣ ಕಡಿಮೆ ಇದ್ದಾಗ ಒಮ್ಮೆ ಪತ್ರ ಬರೆದಿದ್ದ ಜಲಮಂಡಳಿ, ಆಗಲೂ ಕುಡಿಯುವ ನೀರು ಸಂಗ್ರಹಿಸುವಂತೆ ಪತ್ರದಲ್ಲಿ ಕೋರಿತ್ತು.

ಅಲ್ಲದೇ ಈ ಹಿಂದೆ 2012ರಲ್ಲಿ ಭೀಕರ ಜಲಕ್ಷಾಮ ಎದುರಾದಾಗಲೂ ಪತ್ರ ಬರೆದು ನೀರಿನ ಸಂರಕ್ಷಣೆ ಹಾಗೂ ಅಗತ್ಯವಿದ್ದಷ್ಟು ನೀರು ಪೊರೈಕೆಗೆ ಕ್ರಮಕೈಗೊಳ್ಳುವಂತೆ ಮನವಿ ಮಾಡಿತ್ತು. ಇದಾದ ಬಳಿಕ 2015ರಲ್ಲೂ ಕೆ.ಆರ್.ಎಸ್ ಡ್ಯಾಂ ಖಾಲಿಯಾಗಿ ಹೇಮಾವತಿ ಜಲಾಶಯದಿಂದ ನೀರು ಪೂರೈಕೆ ಮಾಡಲಾಗಿತ್ತು.
ಸದ್ಯ ಕಾವೇರಿ ಪ್ರಾಧಿಕಾರದ ಆದೇಶದಂತೆ ಪ್ರತಿನಿತ್ಯ ತಮಿಳುನಾಡಿಗೆ 5 ಸಾವಿರ ಕ್ಯೂಸೆಕ್ ನೀರು ಹರಿಸಲಾಗುತ್ತಿದೆ. KRS ಡ್ಯಾಂನಲ್ಲಿ ಸದ್ಯ 22 ಟಿಎಂಸಿ ನೀರು ಮಾತ್ರ ಶೇಖರಣೆಯಾಗಿದ್ದು, ಇನ್ನು 9 ದಿನಗಳ ಕಾಲ ಕಾವೇರಿ ನದಿಯಿಂದ ಇದೇ ರೀತಿ ನೀರು ಹರಿಯಲಿದೆ. ಹೀಗಾಗಿ 9 ದಿನಗಳ ಬಳಿಕ ಕಾವೇರಿ ನೀರು 17 ಟಿಎಂಸಿ ಗೆ ಇಳಿಯಲಿದ್ದು, ನೀರಿನ ಸಂಗ್ರಹದಲ್ಲಿ 5 ಟಿಎಂಸಿ ನೀರು ಡೆಡ್ ಸ್ಟೋರೇಜ ಉಳಿದ 12 ಟಿಎಂಸಿ ನೀರು ಮಾತ್ರ ಕುಡಿಯಲು ಬಳಕೆಗೆ ಯೋಗ್ಯವಾಗಲಿದೆ.
ಇನ್ನೂ ಕೆ.ಆರ್.ಸಾಗರ ಅಣೆಕಟ್ಟಿನ (KRS Water Level) ನೀರಿನ ಮಟ್ಟವನ್ನು ನೋಡೋದಾದರೇ
ನೀರಿನ ಮಟ್ಟ: 99.06 ಅಡಿ
ಒಳಹರಿವು : 3988 ಕ್ಯೂಸೆಕ್
ಹೊರಹರಿವು : 6180 ಕ್ಯೂಸೆಕ್
ಸಂಗ್ರಹ. : 22.082 ಟಿಎಂಸಿ
Total Capacity- 124.80 ft
ಇದನ್ನೂ ಓದಿ : ಮನೆಯಲ್ಲಿ ಗಣಪತಿ ಕೂರಿಸುವವರೇ ಎಚ್ಚರ ! ಗಣೇಶ ಚತುರ್ಥಿಗೆ ಹೊಸ ರೂಲ್ಸ್ ಜಾರಿ
ಇನ್ನೂ ನೀರು ಹಂಚಿಕೆ ವಿವಾದ ಇನ್ನೂ ಸುಪ್ರೀಂ ಕೋರ್ಟ್ (Supreme Court) ಅಂಗಳದಲ್ಲಿದ್ದು, ವಿಚಾರಣೆ ಬಳಿಕ ಅದೇಶ ಹೊರಬರಬೇಕಿದೆ. ಅಲ್ಲಿಯವರೆಗೂ ತಮಿಳುನಾಡಿಗೆ ನೀರು ಹರಿದಲ್ಲಿ, ಬೆಂಗಳೂರಿನ ಜನರು ಕುಡಿಯುವ ನೀರಿಗೂ ತತ್ತರಿಸುವ ಸ್ಥಿತಿ ಎದುರಾಗೋದು ಗ್ಯಾರಂಟಿ. ಹೀಗಾಗಿ ಜಲಮಂಡಳಿ ಬೆಂಗಳೂರಿನ ಜನರ ಹಿತ ಕಾಪಾಡುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ಪತ್ರ ಬರೆದು ಮನವಿ ಮಾಡಿದ್ದು, ಒಟ್ಟಿನಲ್ಲಿ ಬೆಂಗಳೂರಿಗರ ನೀರಿನ ಭವಿಷ್ಯ ಸುಪ್ರೀಂ ಅಂಗಳದಲ್ಲಿದೆ ಎಂದರೇ ತಪ್ಪಿಲ್ಲ.
Cauvery water flowed into Tamil Nadu Bengaluru faces water shortage