ಬೆಂಗಳೂರು : ರಾಜ್ಯದಲ್ಲಿ ನಡೆದಿದ್ದ ಐಎಂಎ ಬಹುಕೋಟಿ ವಂಚನೆ ಪ್ರಕರಣ ಇದೀಗ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್‌ಗೆ ಉರುಳಾಗುವ ಸಾಧ್ಯತೆಯಿದೆ. ಇಂದು ಜಮೀರ್ ಖಾನ್‌ಗೆ ಸೇರಿದ ಮನೆಯ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದು ಪರಿಶೀಲನೆಯನ್ನು ನಡೆಸುತ್ತಿದ್ದಾರೆ.
ಒಂದೆಡೆ ಮಾಜಿ ಸಚಿವ ರೋಷನ್ ಬೇಗ್ ನಿವಾಸದ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದು, ದಾಖಲೆಗಳ ಪರಿಶೀಲನೆಯನ್ನು ನಡೆಸುತ್ತಿದ್ದಾರೆ. ಇನ್ನೊಂದೆಡೆಯಲ್ಲಿ ಜಮೀರ್ ಮನೆ ಮೇಲೆಯೂ ದಾಳಿ ನಡೆದಿದೆ. ಆರಂಭದಲ್ಲಿ ಐಟಿ ದಾಳಿ ಎಂದು ಹೇಳಲಾಗುತ್ತಿದ್ರೂ ಕೂಡ ಇದೀಗ ಐಟಿ ಅಲ್ಲಾ ಇಡಿ ದಾಳಿ ನಡೆಸಿದೆ ಅನ್ನೋ ಮಾಹಿತಿ ಲಭ್ಯವಾಗಿದೆ.
ದೆಹಲಿಯಿಂದ ಬಂದಿದ್ದ ಸುಮಾರು 45 ಮಂದಿ ಇಡಿ ಅಧಿಕಾರಿಗಳ ತಂಡ ಈ ದಾಳಿಯನ್ನು ನಡೆಸಿದೆ. ಜಮೀರ್ ಅಹ್ಮದ್ ಖಾನ್ ಅವರ ಕಟೋನ್ಮೆಂಟ್ ರೈಲ್ವೆ ನಿಲ್ದಾಣದ ಬಳಿಯಲ್ಲಿ ರುವ ಮನೆ, ನ್ಯಾಷನಲ್ ಟ್ರಾವೆಲ್ಸ್ ಕಚೇರಿ, ಆಪ್ತ ಸಹಾಯಕನ ಮನೆ, ಅತ್ಯಾಪ್ತರ ನಿವಾಸ ಸೇರಿದಂತೆ ಒಟ್ಟು ೬ ಕಡೆಗಳಲ್ಲಿ ಈ ದಾಳಿಯನ್ನು ನಡೆಸಲಾಗಿದೆ. ಇತ್ತೀಚೆಗಷ್ಟೇ ಜಮೀರ್ ಅಹ್ಮದ್ ಭವ್ಯ ಬಂಗಲೆಯೊಂದನ್ನು ಕಟ್ಟಿಸಿದ್ದಾರೆ. ಅಲ್ಲೇ ಮಗಳ ಮದುವೆಯನ್ನು ಅದ್ದೂರಿಯಾಗಿ ನಡೆಸಿದ್ದರು. ಅಲ್ಲದೇ ಹಲವು ಕಡೆಗಳಲ್ಲಿ ಆಸ್ತಿಯನ್ನು ಹೊಂದಿದ್ದು 2018ರಲ್ಲಿ ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದ ದಾಖಲೆಯಲ್ಲಿ 41 ಕೋಟಿ ರೂಪಾಯಿ ಆಸ್ತಿಯನ್ನು ಘೋಷಿಸಿಕೊಂಡಿದ್ದರು.
ಇದನ್ನೂ ಓದಿ : ಮಾಜಿ ಸಚಿವ ರೋಶನ್ ಬೇಗ್ ನಿವಾಸ ಮೇಲೆ ಇಡಿ ದಾಳಿ : ದಾಖಲೆ ಪರಿಶೀಲನೆ
ಇನ್ನು ಐಎಂಎ ಪ್ರಕರಣದ ರೂವಾರಿ ಮನ್ಸೂರ್ ಅಲಿಖಾನ್ ಜೊತೆ ಜಮೀರ್ ಅಹ್ಮದ್ ವ್ಯವಹಾರ ನಡೆಸಿರುವ ಕುರಿತು ದಾಖಲೆಗಳು ಲಭ್ಯವಾಗಿದೆಯಾ ಅನ್ನೋ ಪ್ರಶ್ನೆಯೆದ್ದಿದೆ. ಅಲ್ಲದೇ ಜಮೀರ್ ಅಹ್ಮದ್ ಬೆಂಗಳೂರಿನ ಪ್ರತಿಷ್ಠಿತ ಬಡಾವಣೆಯಲ್ಲಿ ನಿವೇಶನವೊಂದನ್ನು ಮಾರಾಟ ಮಾಡಿದ್ದರು. ಜೊತೆಗೆ ವಿದೇಶದಲ್ಲಿ ಕ್ಯಾಸಿನೋ ವ್ಯವಹಾರ ನಡೆಸಿರುವ ಕುರಿತು ಇಡಿ ಅಧಿಕಾರಿಗಳಿಗೆ ದಾಖಲೆಗಳು ಲಭ್ಯವಾಗಿದೆ ಎನ್ನಲಾಗುತ್ತಿದೆ.
ನ್ಯಾಷನಲ್ ಟ್ರಾವೆಲ್ಸ್ ಮುಖ್ಯ ಕಚೇರಿಯ ಮೇಲೆ ದಾಳಿ ನಡೆಸಿರುವ ಇಡಿ ಅಧಿಕಾರಿಗಳು ಮುಂಬೈ ಹಾಗೂ ದೆಹಲಿಯಲ್ಲಿರುವ ನ್ಯಾಷನಲ್ ಟ್ರಾವೆಲ್ಸ್ ಕಚೇರಿ ಮೇಲೆಯೂ ದಾಳಿ ನಡೆಸಿ ಪರಿಶೀಲನೆಯನ್ನು ನಡೆಸುತ್ತಿದ್ದಾರೆ. ಜಮೀರ್ ಅಹ್ಮದ್ ಖಾನ್ ಹೆಸರು ಐಎಂಎ ಬಹುಕೋಟಿ ವಂಚನೆ ಪ್ರಕರಣದಲ್ಲಿ ಕೇಳಿಬಂದಿತ್ತು. ಐಎಂಎ ಪ್ರಕರಣಕ್ಕೆ ಸಿಲುಕಿಕೊಂಡಿರುವ ರೋಷನ್ ಬೇಗ್ ಮನೆ ಮೇಲೆ ಇಡಿ ದಾಳಿ ನಡೆದ ಬೆನ್ನಲ್ಲೇ ಜಮೀರ್ ಅಹ್ಮದ್ ಖಾನ್ ಮನೆಯ ಮೇಲೂ ದಾಳಿ ನಡೆದಿದೆ. ಹೀಗಾಗಿ ಜಮೀರ್ ಗೆ ಐಎಂಎ ಪ್ರಕರಣ ಕಂಟಕವಾಗುವ ಸಾಧ್ಯತೆಯಿದೆ.