ಬೆಂಗಳೂರು : ಪ್ರತಿಭಾರಿ ರಾಜಾರೋಷವಾಗಿ ಎಲ್ಲರ ಸಮ್ಮುಖದಲ್ಲಿ ಬಜೆಟ್ ಮಂಡಿಸಿ ಅನುಮೋದನೆ ಪಡೆಯುತ್ತಿದ್ದ ಬಿಬಿಎಂಪಿ (BBMP Budget) ಈ ಬಾರಿ ಅಧಿಕಾರಿಗಳ ದರ್ಬಾರಿ ನಲ್ಲಿ ಆರ್ಥಿಕವರ್ಷ ಮುಗಿಯುವ ಕೆಲವೇ ಗಂಟೆಗಳ ಮೊದಲು ಬಜೆಟ್ ಮಂಡಿಸಿ ತರಾತುರಿಯಲ್ಲಿ ಅನುಮೋದನೆ ಪಡೆದು ವಿವಾದಕ್ಕೆ ಮುನ್ನುಡಿ ಬರೆದಿದೆ. ತರಾತುರಿ ಯಲ್ಲಿ 2022-23 ನೇ ಸಾಲಿನ ಬಜೆಟ್ ಮಂಡಿಸಿರುವ ಬಿಬಿಎಂಪಿ ಅಷ್ಟೇ ತರಾತುರಿಯಲ್ಲಿ ಬಜೆಟ್ ಗೆ ಅನುಮೋದನೆ ಪಡೆದು ಬಜೆಟ್ ಪ್ರತಿಯನ್ನು ತನ್ನ ವೆಬ್ ಸೈಟ್ ಗೆ ಬಜೆಟ್ ಪ್ರತಿಯನ್ನು ಅಪ್ಲೋಡ್ ಮಾಡಿದೆ.
10,482.28 ಕೋಟಿ ಆದಾಯ ನೀರಿಕ್ಷೆಯೊಂದಿಗೆ 10,480.93 ಕೋಟಿ ಗಾತ್ರದ ಬಜೆಟ್ ಮಂಡಿಸಿರುವ ಬಿಬಿಎಂಪಿ (BBMP Budget ) ಪಾಲಿಕೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಬಜೆಟ್ ಪ್ರತಿಯನ್ನು ವೆಬ್ ಸೈಟ್ ಗೆ ಅಪ್ಲೋಡ್ ಮಾಡಿದೆ. ಹಣಕಾಸು ವಿಭಾಗದ ವಿಶೇಷ ಆಯುಕ್ತೇ ತುಳಸಿ ಮದ್ದಿನೇನಿ ಬಿಬಿಎಂಪಿ ಬಜೆಟ್ ಮಂಡಿಸಿದ್ದು, ರಾಜ್ಯ ಮತ್ತು ಕೇಂದ್ರ ಸರ್ಕಾರದ ಅನುದಾನ ದಲ್ಲಿ ಕೈಗೆತ್ತಿಕೊಳ್ಳುವ ಯೋಜನೆ ಹೊರತುಪಡಿಸಿ ಬಿಬಿಎಂಪಿ ವ್ಯಾಪ್ತಿಯ ಕಾಮಗಾರಿಗಳಿಗೆ ಬಜೆಟ್ ನಲ್ಲಿ ಅನುದಾನ ನೀಡಲಾಗಿಲ್ಲ.
ಬಿಬಿಎಂಪಿ ವ್ಯಾಪ್ತಿಯ ಯೋಜನೆಗಳಿಗೆ ಕೇವಲ ನಿರ್ವಹಣಾ ವೆಚ್ಚವನ್ನು ಮಾತ್ರ ಆಧರಿಸಿ ಬಜೆಟ್ ಸಿದ್ಧಪಡಿಸಲಾಗಿದೆ. ಒಟ್ಟಾರೆ ಬಜೆಟ್ ನ ಶೇಕಡಾ 76 ರಷ್ಟು ಅನುದಾನ ನಿರ್ವಹಣಾ ಶುಲ್ಕ ಹಾಗೂ ಕಾಮಗಾರಿಗಳಿಗೆ ಮೀಸಲು. ಯಾವ ಯಾವ ಯೋಜನೆಗಳಿಗೆ ಅನುದಾನ ಮೀಸಲಿರಿಸಲಾಗಿದೆ ಅನ್ನೋದನ್ನು ಗಮನಿಸೋದಾದರೇ,
- ವಿಶೇಷ ಚೇತನ ವ್ಯಕ್ತಿಗಳ ಅಭಿವೃದ್ದಿಗೆ 370 ಕೋಟಿ ಮೀಸಲು
- ಹಿಂದುಳಿದ ವರ್ಗಗಳ ಅಭಿವೃದ್ದಿಗೆ 346 ಕೋಟಿ ಮೀಸಲು
- ಕಲ್ಯಾಣ ಕಾರ್ಯಕ್ರಮಕ್ಕೆ 428 ಕೋಟಿ ಮೀಸಲು
- ಘನತ್ಯಾಜ್ಯ ನಿರ್ವಹಣೆಗೆ 1469 ಕೋಟಿ ಮೀಸಲು
- ಆರೋಗ್ಯ ವಲಯಕ್ಕೆ 75 ಕೋಟಿ ಮೀಸಲಿರಸಲಾಗಿದೆ.
ಬಿಬಿಎಂಪಿ ಕಾಯಿದೆ 2020 ರ ಪ್ರಕಾರ ಆರ್ಥಿಕ ವರ್ಷ ಕೊನೆಗೊಳ್ಳುವ ಮೂರು ವಾರಗಳ ಮುನ್ನವೇ ಬಿಬಿಎಂಪಿ ತನ್ನ ಹೊಸ ಆರ್ಥಿಕ ವರ್ಷದ ಬಜೆಟ್ ಗೆ ಅನುಮತಿ ಪಡೆಯಬೇಕು. ಇಲ್ಲದೇ ಹೋದಲ್ಲಿ ಏಪ್ರಿಲ್ 1 ರಿಂದ ಯಾವುದೇ ಯೋಜನೆಗೆ 1 ರೂಪಾಯಿ ವೆಚ್ಚ ಮಾಡುವಂತಿಲ್ಲ. ಹೀಗಾಗಿ ಅಧಿಕಾರಿಗಳ ದರ್ಬಾರಿನಲ್ಲೇ ಇರುವ ಬಿಬಿಎಂಪಿ ಮಾರ್ಚ್ 30 ರಂದು ತರಾತುರಿಯಲ್ಲಿ ಬಜೆಟ್ ಸಿದ್ದಪಡಿಸಿ ಮಾರ್ಚ್ 31 ರಂದು ಕದ್ದುಮುಚ್ಚಿ ಅನುಮೋದನೆ ಪಡೆದುಕೊಂಡಿದೆ. ಕೇವಲ 9500 ಕೋಟಿಗೆ ಬಿಬಿಎಂಪಿ ಬಜೆಟ್ ಅಂತಿಮಗೊಳಿಸಲು ತೀರ್ಮಾನಿಸಿದ್ದು ಸರ್ಕಾರ ಹಾಗೂ ಕೆಲ ಬಿಜೆಪಿ ಎಮ್ ಎಲ್ ಎ ಗಳ ಒತ್ತಡದಿಂದ ಬಜೆಟ್ ಗಾತ್ರ ಹೆಚ್ಚಿದೆ ಎಂಬ ಆರೋಪವೂ ಕೇಳಿಬಂದಿದೆ.
ಇದನ್ನೂ ಓದಿ : ತಡವಾಗಿ ಎಚ್ಚೆತ್ತ ಬೆಸ್ಕಾಂ : ಟ್ರಾನ್ಸ್‌ಫಾರ್ಮರ್‌ಗಳ ಕ್ಷಮತೆ, ಗುಣಮಟ್ಟ ಸರ್ವೇ ಆರಂಭ
ಇದನ್ನೂ ಓದಿ : ಯುಗಾದಿಗೆ ಸಿಹಿ ಸುದ್ದಿ ಕೊಟ್ಟ ನಮ್ಮ ಮೆಟ್ರೋ, ಕೆಎಸ್‌ಆರ್‌ಟಿಸಿ
Officials who presented the BBMP Budget