Kundapura Kannada Habba Asadi Habba 2024 : ಬೆಂಗಳೂರು : ಅಷಾಢಾ ಅಮಾವಾಸೆ ಅಂದ್ರೆ ಕುಂದಾಪ್ರ ಭಾಗದ ಜನರಿಗೆ ಅದೇನೋ ಖುಷಿ, ಸಂಭ್ರಮ. ಕುಂದಾಪ್ರ ಕರಾವಳಿ ಭಾಗದಲ್ಲಿ ಅಸಾಡಿ ಹಬ್ಬವನ್ನು ವಿಶಿಷ್ಟವಾಗಿ ಆಚರಿಸುತ್ತಾರೆ. ಆದ್ರೀಗ ಟೀಮ್ ಕುಂದಾಪುರಿಯನ್ಸ್ (Team Kundapurians )ತಂಡ ಸಿಲಿಕಾನ್ ಸಿಟಿ ಬೆಂಗಳೂರಿನ ಮಂದಿಗೆ ಕುಂದಾಪುರದ ಭಾಷೆ, ಸಂಸ್ಕೃತಿ, ಸೊಡಗನ್ನು ಆಸಾಡಿ ಹಬ್ಬದ ಮೂಲಕ ಅನಾವರಣಗೊಳಿಸಿದೆ.

ಬೆಂಗಳೂರಿನ ಬಸವೇಶ್ವರ ನಗರದಲ್ಲಿರುವ ನೇತಾಜಿ ಗ್ರೌಂಡ್‌ನಲ್ಲಿ ಹಬ್ಬದ ಸಂಭ್ರಮ. ಎಲ್ಲೆಲ್ಲೂ ಕುಂದಾಪ್ರ ಭಾಷೆಯ ಸೊಗಡು, ಸಂಸ್ಕೃತಿ, ಆಚಾರ ವಿಚಾರ, ಕಲೆ ಸೇರಿದಂತೆ ಕುಂದಾಪುರವೇ ಬೆಂಗಳೂರಲ್ಲಿ ಅನಾವರಣಗೊಂಡಂತೆ ಭಾಸವಾಗಿತ್ತು. ವಿಶ್ವ ಕುಂದಾಪುರ ಕನ್ನಡ ದಿನಾಚರಣೆಯ ಅಂಗವಾಗಿ ನಡೆದ ಆಸಾಡಿ ಹಬ್ಬವನ್ನು ಖ್ಯಾತನಟ ರಮೇಶ್ ಭಟ್ ಅವರು ಉದ್ಘಾಟಿಸಿದರು.

ಬದುಕು ಕಟ್ಟಿಕೊಳ್ಳುವ ಸಲುವಾಗಿ ಕುಂದಾಪುರ ಬಿಟ್ಟು ಬೆಂಗಳೂರಿಗೆ ಬಂದ ಒಂದಿಷ್ಟು ಮಂದಿ ಊರಿನ ಆಸಾಡಿ ಹಬ್ಬವನ್ನು ಮಿಸ್ ಮಾಡಿಕೊಳ್ಳಬಾರದು. ಇಂದಿನ ಮಕ್ಕಳಿಗೂ ಕೂಡ ಕುಂದಾಪುರದ ಸೊಗಡವನ್ನು ಪರಿಚಯಿಸಬೇಕು ಅನ್ನೋ ಕಾರಣಕ್ಕೆ ಟೀಂ ಕುಂದಾಪುರಿಯನ್ಸ್ ತಂಡ ಅದ್ಬುತವಾಗಿ ಕಾರ್ಯಕ್ರಮ ವನ್ನು ಆಯೋಜನೆ ಮಾಡಿತ್ತು.
ಇದನ್ನೂ ಓದಿ : ಗೃಹಲಕ್ಷ್ಮೀ ಯೋಜನೆ ಹಣ ಯಾವಾಗ ಬಿಡುಗಡೆ ಆಗುತ್ತೆ ? ಇಲ್ಲಿದೆ ಮಹತ್ವದ ಸುದ್ದಿ

ಕರಾವಳಿಯ ಮೀನುಗಳು, ಮಂಗಳೂರು ಮಲ್ಲಿಗೆ, ಕುಂದಾಪ್ರದ ಅಪರೂಪದ ಸೊಪ್ಪು, ತರಕಾರಿ ಸೇರಿದಂತೆ ಹಲವು ವಸ್ತುಗಳ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಕುಂದಾಪ್ರದ ಗಂಜಿ ಊಟದ ಜೊತೆಗೆ ಕುಂದಾಪ್ರ ಭಾಷೆಯ ಹಾಡು, ಕೋಳಿ ಪಡೆ, ಕಂಗೀಲು ನೃತ್ಯ, ಮಹಿಷವಧೆ ಯಕ್ಷಗಾನ ಹೊಸ ಲೋಕವನ್ನೇ ಸೃಷ್ಟಿಸಿತ್ತು.

ಲಗೋರಿ, ಗೋಣಿಚೀಲ ಓಟ ಸೇರಿದಂತೆ ಕುಂದಾಪ್ರ ಭಾಗದಲ್ಲಿ ಕಂಡು ಬರುವ ವಿವಿಧ ಆಟೋಟಗಳು ಬೆಂಗಳೂರಿಗರ ಗಮನ ಸೆಳೆದಿದೆ. ಆಸಾಡಿ ಹಬ್ಬವನ್ನು ಅನಾವರಣಗೊಳಿಸಿದ ನಟ ರಮೇಶ್ ಭಟ್ ಅವರು ಮಾತನಾಡಿ, ಕುಂದಾಪುರ ಕನ್ನಡ ಬದುಕಿನೊಂದಿಗೆ ಬೆಸೆದ ಭಾಷೆಯಾಗಿದೆ. ಇದು ನಮ್ಮ ತಾಯಿಗೆ ನೀಡುವಷ್ಟೇ ಗೌರವವನ್ನು ಭಾಷೆಗೆ ನೀಡಬೇಖು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ :ಕುಂದಾಪುರ ಚಿನ್ನ ಬೆಳ್ಳಿ ಕೆಲಸಗಾರರ ಸಂಘ : ಅಧ್ಯಕ್ಷರಾಗಿ ಕುಶಕುಮಾರ್ ಪದಗ್ರಹಣ

ಕುಂದಾಪ್ರ ಕನ್ನಡ ಬದುಕಿನ ಭಾಷೆಯೇ ಹೊರತು ಉದ್ಯಮದ ಭಾಷೆಯಲ್ಲ. ಹಾಗಾಗಿ ಇಂದಿಗೂ ಕುಂದಾಪುರ ಭಾಷೆ ಜೀವಂತವಾಗಿದೆ. ನಾವು ಎಷ್ಟೇ ದೊಡ್ಡ ವ್ಯಕ್ತಿಗಳಾಗಿದ್ದರೂ ಕೂಡ ಮಾತೃ ಭಾಷೆ ಹಾಗೂ ಮನೆಯ ಮೂಲ ಭಾಷೆಯನ್ನು ಮರೆಯಬಾರದು. ನಮ್ಮ ಭಾಷೆಯ ಮಹತ್ವ ತಿಳಿದುಕೊಂಡು ಪ್ರತಿಯೊಬ್ಬರೂ ವ್ಯವಹರಿಸಬೇಕು ಎಂದು ಅವರು ಕರೆ ಕೊಟ್ಟಿದ್ದಾರೆ.

ಕಲೆ, ಸಂಸ್ಕೃತಿ ವಿಭಾಗದಲ್ಲಿ ಸಾಧನೆ ಮಾಡಿ ಅರೆಹೊಳೆ ಸದಾಶಿವ ರಾವ್, ಚಿತ್ರ ನಿರ್ದೇಶಕ ಯಾಕೂಬ್ ಖಾದರ್ ಅವರಿಗೆ ಕುಂದಾಪುರ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಅಲ್ಲದೇ ಯಕ್ಷಗಾನ ಕಲಾವಿದ ಶ್ರೀನಿವಾಸ ಸಾಸ್ತಾನ, ಗೌರಿ ಕೆ., ಮುಳುಗುತಜ್ಞ ಮಂಜುನಾಥ ಕೊಡ್ಲಾಡಿ, ಅಂತರಾಷ್ಟ್ರೀಯ ಕ್ರೀಡಾಪಟು ವಿಠಲ್, ಹಿರಿಯ ಶಿಕ್ಷಕಿ ಸುಜಾತ, ಸಮಾಜ ಸೇವಕ ದಿನೇಶ್ ಬಾಂಧವ್ಯ, ಪ್ರಗತಿಪರ ಕೃಷಿಕ ಕೃಷ್ಣ ಕುಲಾಲ್ ಆವರ್ಸೆ ಅವರಿಗೆ ಕುಂದಾಪುರ ಸಮಮಾನ್ ಗೌರವ ನೀಡಿ ಗೌರವಿಸಲಾಯಿತು.

ಶಾಸಕ ಗುರುರಾಜ್ ಗಂಟಿಹೊಳೆ, ಮಹಾಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಗೋವಿಂದ ಬಾಬು ಪೂಜಾರಿ, ಖ್ಯಾತ ಕಿರುತೆರೆ ನಟಿ ಅಮೃತಾ ರಾಮಮೂರ್ತಿ, ಟೀಮ್ ಕುಂದಾಪುರಿಯನ್ಸ್ ತಂಡದ ರಂಜಿತ್ ಶಿರಿಯಾರ, ರೂಪೇಶ್ ಪೂಜಾರಿ ಬೈಂದೂರು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಖ್ಯಾತ ನಿರೂಪಕರಾದ ಪ್ರಣೂತ್ ಗಾಣಿಗ ಹಾಗೂ ನವೀನ್ ಶೆಟ್ಟಿ ಅವರು ಕಾರ್ಯಕ್ರಮವನ್ನು ನಿರೂಪಿಸಿದ್ದರು.
Team Kundapurians Kundapura Kannada Habba Asadi Habba 2024