ಸಿಡ್ನಿ: ಈ ಬಾರಿ ಆಸ್ಟ್ರೇಲಿಯಾದಲ್ಲಿ ಬೆಂಕಿ ಭೀಕರವಾಗಿ ಕಾಡಿದ್ದು ವಿಶ್ವದಾದ್ಯಂತ ಸುದ್ದಿಯಾಗಿದೆ. ಆ ದೇಶದ ಸ್ಥಿತಿಗೆ ಜಗತ್ತೇ ಮರುಗಿದೆ.

ಹೀಗೆ ಕಾಡ್ಗಿಚ್ಚು ಪಸರಿಸಿದ ಬೆನ್ನಲ್ಲೇ 10,000 ಒಂಟೆಗಳನ್ನು ಕೊಲ್ಲುವ ನಿರ್ಧಾರವನ್ನು ಅಲ್ಲಿನ ಸರ್ಕಾರ ಮಾಡಿತ್ತು. ಕಾರಣವಿಷ್ಟೇ ಒಂಟೆಗಳು ಅಧಿಕ ನೀರನ್ನು ಕುಡಿಯುತ್ತವೆ. ಈಗಾಗಲೇ ಇಡೀ ಆಸ್ಟ್ರೇಲಿಯಾದಲ್ಲಿ ವಾತಾವರಣ ತೀವ್ರ ಉಷ್ಣವಾಗಿದೆ. ಆದರೆ ಒಂಟೆಗಳು ಕೆಲವು ಕಡೆಯಂತೂ ಮನೆಗಳಿಗೇ ಬಂದು ಏರ್ಕಂಡೀಷನರ್ಗಳ ನೀರನ್ನೂ ಹೀರಿ ಕುಡಿಯುತ್ತವೆ ಎಂದು ಹೇಳಲಾಗಿತ್ತು. ದಕ್ಷಿಣ ಆಸ್ಟ್ರೇಲಿಯಾದ ಕೆಲವು ಬುಡಕಟ್ಟು ಜನಾಂಗದವರಂತೂ ಈ ಒಂಟೆಗಳ ಕಾರಣದಿಂದ ನೀರಿನ ಪ್ರಮಾಣ ತೀವ್ರ ಕಡಿಮೆಯಾಗುತ್ತದೆ. ಬರಗಾಲವೂ ಬರುತ್ತಿದೆ ಎಂದು ದೂರು ನೀಡಿದ್ದರು.

ಹಾಗಾಗಿ ಆಸ್ಟ್ರೇಲಿಯಾ ಸರ್ಕಾರ 5 ದಿನಗಳಲ್ಲಿ 10,000 ಒಂಟೆಗಳನ್ನು ಕೊಲ್ಲುವ ಟಾರ್ಗೆಟ್ನ್ನು ವೃತ್ತಿಪರ ಶೂಟರ್ಗಳಿಗೆ ನೀಡಿತ್ತು. ಅದರಂತೆ ಕಾರ್ಯಾಚರಣೆ ಪ್ರಾರಂಭವಾಗಿ ಒಟ್ಟು 5 ದಿನಗಳಲ್ಲಿ 5000 ಒಂಟೆಗಳನ್ನು ಕೊಲ್ಲಲಾಗಿದೆ ಎಂದು ದಕ್ಷಿಣ ಆಸ್ಟ್ರೇಲಿಯಾ ಆಡಳಿತ ಮಾಹಿತಿ ನೀಡಿದೆ. ದಕ್ಷಿಣ ಆಸ್ಟ್ರೇಲಿಯಾದ ವಾಯುವ್ಯದಲ್ಲಿರುವ ಅನಂಗು ಪಿಟ್ಜಂತ್ಜತ್ಜರಾ ಯಾಂಕುನಿಟ್ಜಾಟ್ಜಾರಾ ಪ್ರದೇಶದಲ್ಲಿರುವ 5000 ಒಂಟೆಗಳ ಬದುಕು ಭಾನುವಾರ ಕೊನೆಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.