ನವದಹಲಿ : ಜಮ್ಮು- ಕಾಶ್ಮೀರದಲ್ಲಿ ಸುರಿಯುತ್ತಿರು ಭಾರೀ ಮಳೆಯಿಂದಾಗಿ ಅಪಾರ ಪ್ರಮಾಣದಲ್ಲಿ ಹಾನಿ ಉಂಟಾಗಿದ್ದು, ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರವಾಹದಲ್ಲಿ ಸುಮಾರು 6 ಮಂದಿ ಸಾವನ್ನಪ್ಪಿದ್ದು, 30ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ.
ಜಮ್ಮುಕಾಶ್ಮೀರದ ಪೂಂಜ್, ರಚೌರಿ, ರಿಯಾಸಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗುಡುಗು ಸಹಿತ ಭಾರೀ ಮಳೆ ಸುರಿದಿದೆ. ಭಾರೀ ಮಳೆಯಿಂದ ಉಂಟಾದ ಪ್ರವಾಹದಲ್ಲಿ ಈಗಾಗಲೇ 6ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಪರ್ವತ ಕಿಶ್ತ್ವಾರ್ ಜಿಲ್ಲೆಯ ಡಚನ್ ಬ್ಲಾಕ್‌ನಲ್ಲಿರುವ ಹೊಂಜಾರ್ ಗ್ರಾಮದಲ್ಲಿ ಇಂದು ಮಂಜುಗಡ್ಡೆಯಲ್ಲಿ ಹಲವಾರು ಮನೆಗಳು ಕೊಚ್ಚಿ ಹೋಗಿವೆ. ಹಂಜಾರ್‌ನಲ್ಲಿ ಎಸ್‌ಎಚ್‌ಒ ನೇತೃತ್ವದ ಪೊಲೀಸ್ ತಂಡ ಗಾಯಗೊಂಡ 12 ಜನರನ್ನು ರಕ್ಷಿಸಲಾಗಿದೆ. ಅಲ್ಲದೇ 30ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ. ಹೀಗಾಗಿ ಎನ್‌ಡಿಆರ್‌ಎಫ್ ತಂಡ ರಕ್ಷಣಾ ಕಾರ್ಯವನ್ನು ಕೈಗೊಂಡಿದೆ. ನಾಪತ್ತೆಯಾಗಿರುವ ಜನರಿಗಾಗಿ ಹುಡುಕಾಟ ನಡೆಸುತ್ತಿದೆ.
ಮೇಘ ಸ್ಪೋಟದಿಂದಾಗಿ ಸಾವು ನೋವಿನ ಪ್ರಮಾಣ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ಜಮ್ಮು ಮತ್ತು ಕಾಶ್ಮೀರ ಪೊಲೀಸರು, ಎಸ್‌ಡಿಆರ್‌ಎಫ್ (ವಿಪತ್ತು ಪ್ರತಿಕ್ರಿಯೆ ಪಡೆ) ಮತ್ತು ಸೇನೆಯ ತಂಡಗಳು ಈಗಾಗಲೇ ನೆರವಿಗೆ ಧಾವಿಸಿವೆ. ಆದರೆ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾ ಕಾರ್ಯಾಚರಣೆಗೆ ತೊಡಕಾಗಿದೆ. ಜಮ್ಮು ಕಾಶ್ಮೀರದ ಪೂಂಚ್, ರಾಜೌರಿ, ರಿಯಾಸಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜುಲೈ 30ರ ವರೆಗೆ ಭಾರೀ ಮಳೆ ಸುರಿಯುವ ಕುರಿತು ಕೇಂದ್ರ ಹವಾಮಾನ ಇಲಾಖೆ ಎಚ್ಚರಿಕೆಯನ್ನು ನೀಡಿದೆ. ತಗ್ಗು ಪ್ರದೇಶಗಳಲ್ಲಿ ಮಣ್ಣು ಕುಸಿತ, ಭೂಕುಸಿತ ಮತ್ತು ಜಲಾವೃತವಾಗುವ ಸಾಧ್ಯತೆಯಿದೆ.
ಜಮ್ಮು ಕಾಶ್ಮೀರ ಪ್ರವಾಹದ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಟ್ವೀಟ್ ಮಾಡಿದ್ದಾರೆ. ಕಿಶ್ತ್ವಾರ್ ಮತ್ತು ಕಾರ್ಗಿಲ್ ನಲ್ಲಿ ಮೋಡ ಕವಿದ ವಾತಾವರಣದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಪೀಡಿತ ಪ್ರದೇಶಗಳಲ್ಲಿ ಸಾಧ್ಯವಿರುವ ಎಲ್ಲ ಸಹಾಯವನ್ನು ಮಾಡಲಾಗುತ್ತಿದೆ. ಎಲ್ಲರ ಸುರಕ್ಷತೆ ಮತ್ತು ಯೋಗಕ್ಷೇಮ ಕ್ಕಾಗಿ ನಾನು ಪ್ರಾರ್ಥಿಸುತ್ತೇನೆ ಎಂದಿದ್ದಾರೆ. ಅಲ್ಲದೇ ಗೃಹ ಸಚಿವ ಅಮಿತ್ ಶಾ ಕೂಡ ಲೆಫ್ಟಿನೆಂಟ್ ಗವರ್ನರ್ ಹಾಗೂ ಪೊಲೀಸ್ ಮಹಾನಿರ್ದೇಶಕರ ಜೊತೆ ಚರ್ಚೆ ನಡೆಸಿದ್ದಾರೆ.