ಬೆಂಗಳೂರು : ರಾಸಲೀಲೆ ಸಿಡಿ ಪ್ರಕರಣ ಸ್ಪೋಟಕ ತಿರುವು ಪಡೆದುಕೊಂಡಿದೆ. ಸಿಡಿಯಲ್ಲಿರುವ ಮೂಲ ವಿಡಿಯೋವನ್ನು ನಾನೇ ಚಿತ್ರೀಕರಿಸಿದ್ದೇನೆ ಎಂದು ಯುವತಿ ತನಿಖಾಧಿಕಾರಿಗಳ ಮುಂದೆ ಒಪ್ಪಿಕೊಂಡಿದ್ದಾಳೆ.

ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ಅಧಿಕಾರಿಗಳು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಕಳೆದೆರಡು ದಿನಗಳಿಂದಲೂ ಸಂತ್ರಸ್ತ ಯುವತಿಯನ್ನು ತನಿಖಾಧಿಕಾರಿ ಎಸಿಪಿ ಕವಿತಾ ಅವರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆಯಲ್ಲಿ ಯುವತಿ ತಾನೇ ಸಿಡಿ ಮಾಡಿರುವುದಾಗಿಯೂ ತನಿಖಾಧಿಕಾರಿಗಳ ಮುಂದೆ ಒಪ್ಪಿಕೊಂಡಿದ್ದಾಳೆ ಎನ್ನಲಾಗುತ್ತಿದೆ.

ವಿಚಾರಣೆಯ ವೇಳೆಯಲ್ಲಿ ಯುವತಿ ಸಿ.ಡಿ.ಯಲ್ಲಿರುವ ವಿಡಿಯೊ ಮೂಲದ ಬಗ್ಗೆ ಇಂಚಿಂಚೂ ಮಾಹಿತಿಯನ್ನು ನೀಡಿದ್ದಾಳೆ. ಸಿ.ಡಿ.ಯಲ್ಲಿರುವ ವಿಡಿಯೊ ಅಸಲಿ. ನಾನು ಎಂಜಿನಿಯರಿಂಗ್ ಮುಗಿಸಿದ್ದೇನೆ. ಹೀಗಾಗಿ ನನಗೆ ಕೆಲಸ ಕೊಡಿಸುವ ಭರವಸೆಯನ್ನು ನೀಡಿದ್ದರು. ನಂತರದಲ್ಲಿ ನಾನು ಹೇಳಿದಂತೆ ಸಹಕರಿಸಬೇಕು ಎಂದಿದ್ದರು. ಸಚಿವರಾಗಿದ್ದರಿಂದ ಕೆಲಸ ಸಿಗಬಹುದೆಂಬ ಆಸೆಯಿಂದ ಅವರು ಹೇಳಿದ್ದಕ್ಕೆಲ್ಲ ಒಪ್ಪಿದೆ. ನಂತರದಲ್ಲಿ ಲೈಂಗಿಕವಾಗಿ ನನ್ನನ್ನು ಬಳಸಿಕೊಂಡಿದ್ದಾರೆ.
ಆದರೆ ನಂತರದ ದಿನಗಳಲ್ಲಿ ನನಗೆ ಕೆಲಸ ಕೊಡಿಸುವುದಿಲ್ಲ ಎಂದಿದ್ದ ರಮೇಶ ಜಾರಕಿಹೊಳಿ, ಅಶ್ಲೀಲ ಶಬ್ದಗಳಿಂದ ತನ್ನನ್ನು ನಿಂದಿಸಿ ಜೀವ ಬೆದರಿಕೆಯೊಡ್ಡಿದ್ದರು. ಹೀಗಾಗಿ ನನಗೆ ತುಂಬಾ ನೋವಾಗಿತ್ತು. ಇದೇ ಕಾರಣದಿಂದಲೇ ನಾನು ವಿಡಿಯೋವನ್ನು ಚಿತ್ರೀಕರಣ ಮಾಡಿಕೊಂಡಿದ್ದೆ ಎಂದು ಒಪ್ಪಿಕೊಂಡಿದ್ದಾಳೆ ಎನ್ನಲಾಗುತ್ತಿದೆ.