ಬೆಂಗಳೂರು : ಕೇಂದ್ರ ಸಚಿವ ಸಂಪುಟ ವಿಸ್ತರಣೆ ಮಾಡಲು ಸಿದ್ದತೆ ನಡೆದಿದೆ. ಇದರ ಬೆನ್ನಲ್ಲೇ ಇದೀಗ ಮಾಜಿ ಮುಖ್ಯಮಂತ್ರಿ, ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಅವರಿಗೂ ಸಿ.ಡಿ. ಭೀತಿ ಎದುರಾದಂತಿದೆ. ಈ ಹಿನ್ನೆಲೆಯಲ್ಲಿ ಅವರು ನ್ಯಾಯಾಲಯದಿಂದ ನಿರ್ಬಂಧಕಾಜ್ಞೆ ತಂದಿದ್ದಾರೆ.

ಸದಾನಂದ ಗೌಡ ಅವರು, ತಮ್ಮ ವಿರುದ್ಧ ಸುಳ್ಳುಸುದ್ದಿ ಪ್ರಸಾರ ಮಾಡುವ ಸಾಧ್ಯತೆ ಇದೆ. ಕಿಡಿಗೇಡಿಗಳು ನಕಲಿ ಸಿಡಿ ಸೃಷ್ಟಿಸಿ ಮಾಧ್ಯಮ ಗಳಲ್ಲಿ ಹರಿಬಿಡುವ ಸಾಧ್ಯತೆಯೂ ಇದೆ ಎಂದು ಕಾರಣ ನೀಡಿ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ನಿಂದ ತಮ್ಮ ವಿರುದ್ದ ಮಾನಹಾನಿಕರ ವರದಿ ಮಾಡದಂತೆ ಮಾಧ್ಯಮಗಳ ವಿರುದ್ಧ ನಿರ್ಬಂಧಕಾಜ್ಞೆ ತಂದಿದ್ದಾರೆ.

ಅಮೆರಿಕದ ಅಧ್ಯಕ್ಷರಾಗಿದ್ದ ಬರಾಕ್ ಒಬಾಮಾ, ಬ್ರಿಟನ್ ರಾಣಿ ಕ್ವೀನ್ ಎಲಿಜಬೆತ್ ಕುರಿತು ನಕಲಿ ವಿಡಿಯೋ ಮಾಡಲಾಗಿತ್ತು ಎಂಬ ಉದಾಹರಣೆ ಯನ್ನು ಡಿ.ವಿ. ಸದಾನಂದ ಗೌಡ ಅವರು ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ಒಂದೊಮ್ಮೆ ಇಂತಹ ವಿಡಿಯೋ ಪ್ರಸಾರ ಮಾಡಿದರೆ ಘನತೆಗೆ ಧಕ್ಕೆ ಆಗಲಿದೆ. ಅಲ್ಲದೇ ಚಾರಿತ್ರ್ಯ ವಧೆಯಾಗಲಿದೆ. ತಮ್ಮ ಬಗ್ಗೆ ಕೂಡ ಇಂತಹ ವಿಡಿಯೋ ಪ್ರಸಾರ ಮಾಡುವ ಅಪಾಯವಿದೆ ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಸದಾನಂದ ಗೌಡ ಅವರ ಅರ್ಜಿಯನ್ನು ಮಾನ್ಯ ಮಾಡಿದ ಕೋರ್ಟ್, ಮಾನಹಾನಿಕರ ವರದಿ ಮಾಡದಂತೆ ನಿರ್ಬಂಧ ವಿಧಿಸಿದೆ.

ರಮೇಶ್ ಜಾರಕಿಹೊಳಿ ರಾಸಲೀಲೆ ಪ್ರಕರಣದ ಬೆನ್ನಲ್ಲೇ ಆರು ಸಚಿವರು ನ್ಯಾಯಾಲಯದ ಮೊರೆ ಹೋದಾಗ ಡಿ.ವಿ.ಸದಾನಂದ ಗೌಡ ಅವರು ವಿರೋಧ ಮಾಡಿದ್ದರು. ಇದೀಗ ಖುದ್ದು ಡಿ.ವಿ. ಸದಾನಂದ ಗೌಡ ಅವರೇ ನ್ಯಾಯಾಲಯದ ಮೆಟ್ಟಿಲೇರಿವುದು ಕುತೂಹಲ ಮೂಡಿಸಿದೆ.