ನವದೆಹಲಿ : ವಿಶ್ವದಾದ್ಯಂತ ಕೊರೊನಾ ಮಹಾಮಾರಿ ಹರಡೋದಕ್ಕೆ ಚೀನಾವೇ ಕಾರಣ ಅಂತಾ ವಿಶ್ವದ ದೊಡ್ಡಣ್ಣ ಸೇರಿದಂತೆ ಹಲವು ರಾಷ್ಟ್ರಗಳು ಗಂಭೀರ ಆರೋಪ ಮಾಡುತ್ತಿವೆ. ಚೀನಾದಲ್ಲಿ ಕೊರೊನಾಕ್ಕೆ ಬಲಿಯಾದವರ ಸಂಖ್ಯೆಯಲ್ಲೂ ವಿಶ್ವ ಆರೋಗ್ಯ ಸಂಸ್ಥೆ ಸುಳ್ಳು ಹೇಳಿದೆ ಅನ್ನುವ ಆರೋಪವೂ ಇತ್ತು. ಆದ್ರೀಗ ಇದಕ್ಕೆಲ್ಲಾ ಪುಷ್ಟಿ ನೀಡುವಂತೆ ಜರ್ಮನಿ ನಡೆಸಿದ ಬೇಹುಗಾರಿಕಾ ವರದಿಯಲ್ಲಿ ಚೀನಾ WHO ಮೇಲೆ ಒತ್ತಡ ಹೇರಿರುವ ಅಂಶ ಬಹಿರಂಗವಾಗಿದೆ.

ಚೀನಾದ ವುಹಾನ್ ನಗರದಲ್ಲಿ ಕಾಣಿಸಿಕೊಂಡಿದ್ದ ಕೊರೊನಾ ಚೀನಾದಲ್ಲಿ ಮರಣ ಮೃದಂಗವನ್ನೇ ಬಾರಿಸಿತ್ತು. ತಜ್ಞರ ವರದಿಯಲ್ಲಿ ಕೊರೊನಾ ಸೋಂಕು ಮನುಷ್ಯನಿಂದ ಮನಷ್ಯನಿಗೆ ಹರಡುತ್ತೆ ಅನ್ನೋದು ದೃಢಪಟ್ಟಿತ್ತು. ಆದರೆ ಚೀನಾ ಮನುಷ್ಯನಿಂದ ಮನುಷ್ಯನಿಗೆ ಹರಡಬಲ್ಲದು ಅನ್ನೋ ಅಂಶವನ್ನು ಬಹಿರಂಗ ಪಡಿಸದಂತೆ ಚೀನಾದ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ವಿಶ್ವ ಆರೋಗ್ಯ ಸಂಸ್ಥೆ (WHO)ಮೇಲೆ ಒತ್ತಡ ಹೇರಿದ್ದರು ಅನ್ನುವುದನ್ನು ಜರ್ಮನ್ ಗುಪ್ತಚರ ಸಂಸ್ಥೆ BND ಮಂಡಿಸಿರುವ ತನಿಖಾ ವರದಿಯಲ್ಲಿ ಉಲ್ಲೇಖಿಸಿರುವುದಾಗಿ ಜರ್ಮನಿಯ ಖ್ಯಾತ ಅಂತರ್ಜಾಲ ಮಾಧ್ಯಮ ‘ಡೆರ್ ಸ್ಪೀಜೆಲ್’ವರದಿ ಮಾಡಿದೆ.

ಜನವರಿ 21ರಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥರಿಗೆ ಚೀನಾದ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಕರೆ ಮಾಡಿ ಕೊರೋನಾ ಸೋಂಕಿನ ವರದಿಯನ್ನು ಪ್ರಕಟಿಸದಂತೆ ಒತ್ತಡ ಹೇರಿದ್ದರು. ಚೀನಾದ ಒತ್ತಡದಿಂದಾಗಿ ವಿಶ್ವ ಆರೋಗ್ಯ ಸಂಸ್ಥೆಯು ಕೊರೊನಾ ಸೋಂಕಿನ ಗಂಭೀರತೆಯ ಎಚ್ಚರಿಕೆಯನ್ನು 4 ರಿಂದ 6 ವಾರ ತಡವಾಗಿ ಪ್ರಕಟಿಸಿದೆ. ಕೊರೊನಾ ಸೋಂಕು ಕಾಣಿಸಿಕೊಂಡ ಆರಂಭದಿಂದಲೂ ಅಮೇರಿಕಾ ಚೀನಾ ವಿರುದ್ದ ಕಿಡಿಕಾರಿದೆ.

ಅದ್ರಲ್ಲೂ ವಿಶ್ವ ಆರೋಗ್ಯ ಸಂಸ್ಥೆ ಚೀನಾದ ಜೊತೆಗೆ ಕೈ ಜೋಡಿಸಿ ವಿಶ್ವಕ್ಕೆ ಮೋಸ ಮಾಡಿದೆ ಅಂತಾನೂ ಅಮೇರಿಕಾ ಆರೋಪಿಸಿತ್ತು. ಅಷ್ಟೇ ಯಾಕೆ ಅಮೇರಿಕಾ ವಿಶ್ವ ಆರೋಗ್ಯ ಸಂಸ್ಥೆಗೆ ವರ್ಷಂಪ್ರತಿ ನೀಡುತ್ತಿದ್ದ ನೆರವನ್ನೂ ಸ್ಥಗಿತಗೊಳಿಸಿತ್ತು. ಈ ನಡುವಲ್ಲೇ ಚೀನಾ ಭಾರತ ಸೇರಿದಂತೆ ವಿಶ್ವದ ರಾಷ್ಟ್ರಗಳಿಗೆ ಕೊರೊನಾ ಚೀನಾ ಸೋಂಕು ಅಂತಾ ಕರೆಯಬೇಡಿ ಅಂತಾ ತಾಕೀತು ಮಾಡಿತ್ತು.

ಚೀನಾದಲ್ಲಿ ಕೋಟ್ಯಾಂತರ ಮಂದಿ ಸಾವನ್ನಪ್ಪಿದ್ದರು. 80 ಲಕ್ಷಕ್ಕೂ ಅಧಿಕ ಮಂದಿಯ ಮೊಬೈಲ್ ಸ್ವಿಚ್ ಆಪ್ ಆಗಿತ್ತು. ಅಲ್ಲದೇ 30 ಸಾವಿರಕ್ಕೂ ಅಧಿಕ ಮಂದಿಯನ್ನು ಅಂತ್ಯಕ್ರಿಯೆ ನಡೆಸಿರೊ ಕುರಿತು ಚೀನಾ ಮಾಧ್ಯಮಗಳು ವರದಿ ಮಾಡಿದ್ದವು. ಇಷ್ಟೆಲ್ಲಾ ಇದ್ದರೂ ಕೂಡ ವಿಶ್ವ ಆರೋಗ್ಯ ಸಂಸ್ಥೆ ಚೀನಾದಲ್ಲಿ ಕೊರೊನಾ ಸೋಂಕಿತರು, ಸಾವನ್ನಪ್ಪಿದವರ ವಿಚಾರದಲ್ಲಿ ಸುಳ್ಳು ಹೇಳುತ್ತಿದೆ ಅಂತಾ ವಿಶ್ವವೇ ಮಾತಾಡಿಕೊಂಡಿತ್ತು. ಈ ಹಿನ್ನೆಲೆಯಲ್ಲಿಯೇ ಜರ್ಮನಿ ಈ ಕುರಿತು ಬೇಹುಗಾರಿಕೆ ನಡೆಸಿದೆ.

ಆದರೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂ.ಎಚ್.ಒ) ಬಿ.ಎನ್.ಡಿ ವರದಿಯನ್ನು ನಿರಾಕರಿಸಿದೆ. ಚೀನಾದ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಜತೆ ಡಬ್ಲ್ಯೂ.ಎಚ್.ಒ ಮುಖ್ಯಸ್ಥರು ಜನವರಿ 21ರಂದು ಯಾವುದೇ ಮಾತುಕತೆ ನಡೆಸಿಲ್ಲ. ಕೊರೋನಾ ಸೋಂಕಿನ ಬಗೆಗಿನ ವರದಿಯನ್ನು ಡಬ್ಲ್ಯೂ.ಎಚ್.ಒ ಜನವರಿ 20 ರಂದು ತಯಾರಿಸಿದ್ದು, ಜನವರಿ 22ರಂದು ಅಧಿಕೃತವಾಗಿ ಪ್ರಕಟಿಸಿದೆ.

ಜನವರಿ 21ರಂದು ಜಿನ್ ಪಿಂಗ್ ಡಬ್ಲ್ಯೂ.ಎಚ್.ಒ ಮೇಲೆ ಒತ್ತಡ ಹೇರಿ, ಡಬ್ಲ್ಯೂ.ಎಚ್.ಒ ಒತ್ತಡಕ್ಕೆ ಮಣಿದಿದ್ದು ನಿಜವಾಗಿದ್ದರೆ ಜನವರಿ 22ರಂದು ವರದಿ ಪ್ರಕಟವಾಗುತ್ತಿರಲಿಲ್ಲ ಎಂದು ಹೇಳಿದೆ.