ನವದೆಹಲಿ : ರಾಷ್ಟ್ರರಾಜಧಾನಿ ನವದೆಹಲಿಯಲ್ಲಿ ಸಿಎಎ ವಿರೋಧಿ ಹೋರಾಟದ ಬೆನ್ನಲ್ಲೇ ನಡೆದ ಹಿಂಸಾಚಾರ, ಕೋಮುಗಲಭೆಯಲ್ಲಿ 27 ಮಂದಿ ಬಲಿಯಾಗಿದ್ದಾರೆ. ಗಲಭೆಯನ್ನು ಹತ್ತಿಕ್ಕಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.

ಇನ್ನೊಂದೆಡೆ ಪ್ರಚೋದನಾಕಾರಿ ಹೇಳಿಕೆ ನೀಡುವವರ ವಿರುದ್ದ ಎಫ್ ಐಆರ್ ದಾಖಲು ಮಾಡುವಂತೆ ದೆಹಲಿ ಹೈಕೋರ್ಟ್ ಪೊಲೀಸರಿಗೆ ಸೂಚನೆಯನ್ನು ನೀಡಿದೆ. ದೆಹಲಿಯಲ್ಲಿ ನಡೆಯುತ್ತಿರೊ ಹಿಂಸಾಚಾರಕ್ಕೆ ಬಲಿಯಾಗುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ದೆಹಲಿ ಪೊಲೀಸರು ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.

ಹಿಂಸಾಚಾರ, ಗಲಭೆಗೆ ಸಂಬಂಧಿಸಿದಂತೆ ಈಗಾಗಲೇ ಒಟ್ಟು 18 ಪ್ರಕರಣ ದಾಖಲಿಸಿಕೊಂಡಿರೋ ಪೊಲೀಸರು 106 ಮಂದಿಯನ್ನು ಬಂಧಿಸಿದ್ದಾರೆ. ಆದರೆ ಬುಧವಾರ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಮನದೀಪ್ ಸಿಂಗ್ ತಿಳಿಸಿದ್ದಾರೆ.

ದೆಹಲಿಯಲ್ಲಿ ಹಿಂಸಾಚಾರ ತಡೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿರೋ ಬೆನ್ನಲ್ಲೇ ರಾಜಕಾರಣಿಗಳು ನೀಡುತ್ತಿರೋ ಹೇಳಿಕೆಯಿಂದ ಗಲಭೆ ಮತ್ತಷ್ಟು ಹಿಂಸಾ ಸ್ವರೂಪವನ್ನು ಪಡೆಯುತ್ತಿರೋ ಕುರಿತು, ದೆಹಲಿ ಹೈಕೋರ್ಟ್ ಪ್ರಚೋದನಾಕಾರಿ ಹೇಳಿಕೆ ನೀಡುವವರ ವಿರುದ್ದ ಪ್ರಕರಣ ದಾಖಲಿಸುವಂತೆ ನಿರ್ದೇಶನ ನೀಡಿದೆ. ಅಲ್ಲದೇ ಬಿಜೆಪಿ ನಾಯಕ ಕಪಿಲ್ ಮಿಶ್ರಾ ನೀಡಿದ್ದಾರೆನ್ನಲಾದ ವಿವಾದಿತ ಹೇಳಿಕೆಗೆ ಸಂಬಂಧಿಸಿದ ವಿಡಿಯೊವನ್ನೂ ಕೋರ್ಟ್ ಪರಿಶೀಲನೆಯನ್ನು ನಡೆಸಿ ಪೊಲೀಸರಿಗೆ ಸೂಚನೆಯನ್ನು ನೀಡಿದೆ.