ನವದೆಹಲಿ : ದೇಶದಾದ್ಯಂತ ಟೋಲ್ ಪ್ಲಾಝಾಗಳಲ್ಲಿ ಫಾಸ್ಟ್ಯಾಗ್ ನ್ನು ಕಡ್ಡಾಯಗೊಳಿಸಲಾಗುತ್ತಿದೆ. ಒಂದೊಮ್ಮೆ ಫಾಸ್ಟ್ಯಾಗ್ ಹೊಂದಿಲ್ಲದ ವಾಹನದ ಮಾಲೀಕರು ದುಬಾರಿ ದಂಡವನ್ನು ಪಾವತಿಸಬೇಕಾಗುತ್ತದೆ.
ವಾಹನ ಸವಾರರಿಗೆ ತಡೆ ರಹಿತ ಪ್ರಯಾಣಕ್ಕೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಫಾಸ್ಟ್ಯಾಗ್ ಗಳನ್ನು ವಾಹನಗಳಿಗೆ ಅಳವಡಿಸಲಾಗು ತ್ತಿದೆ. ಕಳೆದೊಂದು ವರ್ಷದ ಹಿಂದೆಯೇ ಫಾಸ್ಟ್ಯಾಗ್ ಕಡ್ಡಾಯಗೊಳಿಸಿದ್ದರೂ ಕೂಡ ಸಂಪೂರ್ಣ ಕ್ಯಾಶ್ ಲೆಸ್ ವ್ಯವಸ್ಥೆ ಜಾರಿಗೆ ಬಂದಿರಲಿಲ್ಲ. ಆದರೆ 2021ರ ಜನವರಿ 1ರಿಂದ ದೇಶದಾದ್ಯಂತ ವಾಹನಗಳಿಗೆ ಫಾಸ್ಟ್ಯಾಗ್ ಕಡ್ಡಾಯಗೊಳಿಸಲಾಗುತ್ತಿದೆ.
ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಈಗಾಗಲೇ ಸುದ್ದಿಗೋಷ್ಠಿಯನ್ನು ನಡೆಸಿ ಫಾಸ್ಟ್ಯಾಗ್ ಕಡ್ಡಾಯಗೊಳಿಸುತ್ತಿರುವುದರ ಕುರಿತು ಅಧಿಕೃತವಾಗಿ ಘೋಷಣೆಯನ್ನು ಮಾಡಿದ್ದಾರೆ. ಫಾಸ್ಟ್ಯಾಗ್ ವ್ಯವಸ್ಥೆಯಿಂದಾಗಿ ಟೋಲ್ ಪ್ಲಾಝಾಗಳಲ್ಲಿ ಸವಾರರು ನಿಲ್ಲುವುದು ತಪ್ಪುವುದರ ಜೊತೆಗೆ ಇಂಧನವು ಉಳಿತಾಯವಾಗಲಿದೆ ಎಂದು ತಿಳಿಸಿದ್ದಾರೆ.
ಜನವರಿ 1ರಿಂದ ಸವಾರರು ಟೋಲ್ ಪ್ಲಾಜಾಗಳಲ್ಲಿ ಕ್ಯಾಶ್ ನೀಡಿ ಸಂಚರಿಸುವಂತಿಲ್ಲ. ಒಂದೊಮ್ಮೆ ಫಾಸ್ಟ್ಯಾಗ್ ಹೊಂದಿಲ್ಲದ ವಾಹನಗಳಿಂದ ದುಬಾರಿ ಪ್ರಮಾಣದಲ್ಲಿ ದಂಡ ವಸೂಲಿ ಮಾಡಲು ಕೂಡ ಕೇಂದ್ರ ಸರಕಾರ ಮುಂದಾಗಿದೆ. ಟೋಲ್ ಪ್ಲಾಜಾಗಳಲ್ಲಿ ಈಗಾಗಲೇ ಫಾಸ್ಟ್ಯಾಗ್ ಕಡ್ಡಾಯಗೊಳಿಸಿರುವ ಕುರಿತು ಮಾಹಿತಿಯನ್ನು ನೀಡಲಾಗುತ್ತಿದೆ.