ಹೊಟೇಲ್, ಬೀದಿ ಬದಿ ಆಹಾರ ಸೇವಿಸುವುದು ಕೆಲವರಿಗೆ ಅನಿವಾರ್ಯವಾದರೆ, ಇನ್ನು ಕೆಲವರಿಗೆ ಚಟ. ಆದರೆ ಈ ಆಹಾರ ಎಷ್ಟು ಸುರಕ್ಷಿತ ಅನ್ನೋದೇ ಪ್ರಶ್ನೆ. ಇತ್ತೀಚೆಗೆ ರಾಜ್ಯ ಸರ್ಕಾರ ಸಾರ್ವಜನಿಕರು ಸೇವಿಸುವ ಆಹಾರಗಳ ಮೇಲೆ ಹೆಚ್ಚಿನ ನಿಗಾ ಇರಿಸಿದೆ. ಅಲ್ಲಲ್ಲಿ, ಆಗಾಗ ಹೋಟೇಲ್, ಫುಡ್ ಸ್ಟಾಲ್, ಬೀದಿ ಬದಿ ಆಹಾರದ ಗುಣಮಟ್ಟ ಪರೀಕ್ಷೆಯನ್ನು ಮಾಡುತ್ತಿದೆ.

ಆಹಾರ ಸುರಕ್ಷತೆ ಇಲಾಖೆ ವಿವಿಧ ಹೊಟೇಲ್‌ಗಳಲ್ಲಿ ನೀಡುವ ಪನ್ನೀರ್ ನ 221 ಮಾದರಿಯ ಸ್ಯಾಂಪಲ್ ಟೆಸ್ಟ್ ಮಾಡಿಸಿದೆ. ಈ ವೇಳೆ 220 ಮಾದರಿಯ ಆಹಾರ ಪದಾರ್ಥಗಳು ತಿನ್ನೋಕೆ ಯೋಗ್ಯ ಎಂದು ದೃಢಪಟ್ಟಿದೆ. ಕೇವಲ ಒಂದು ಮಾದರಿ ಮಾತ್ರ ಕೆಳಗುಣಮಟ್ಟದ್ದು(substandard) ಅಂತ ವರದಿಯಲ್ಲಿ ಪತ್ತೆಯಾಗಿದ್ದು ಸಮಾಧಾನ ತಂದಿದೆ.
ಇನ್ನು ಕೇಕ್ ನ 225 ಆಹಾರ ಮಾದರಿಗಳನ್ನು ಕೂಡ ಇಲಾಖೆ ಸಂಗ್ರಹಿಸಿ ಟೆಸ್ಟ್ ಗೆ ಒಳಪಡಿಸಿದೆ. ಇದರಲ್ಲಿ 12 ಆಹಾರ ಮಾದರಿಗಳು ತಿನ್ನಲು ಯೋಗ್ಯವಲ್ಲ ಅಂತ ರಿಪೋರ್ಟ್ ಬಂದಿದೆ. ಹಾಗೇ ಕೋವಾದ 65 ಆಹಾರದ ಮಾದರಿಗಳನ್ನ ಪರಿಶೀಲಿಸಿದ ವೇಳೆ ಒಂದು ಮಾದರಿ ತಿನ್ನಲು ಯೋಗ್ಯವಲ್ಲ ಎಂದು ವರದಿ ಹೇಳಿದೆ. ಹಾಗಾಗಿ ಇನ್ನು ಮುಂದೆ ಹೊರಗಡೆ ತಿನ್ನುವಾಗ ಆಹಾರದ ಗುಣಮಟ್ಟದ ಬಗ್ಗೆ ಯೋಚಿಸಿ ತಿನ್ನಿ.
ಇದೀಗ ಹಾನಿಕಾರಕ ಆಹಾರ ಪದಾರ್ಥಗಳ ವಿರುದ್ದ ಆಹಾರ ಸುರಕ್ಷತೆ ಇಲಾಖೆ ಸಮರ ಸಾರಲು ಮುಂದಾಗಿದೆ. ಸಾರ್ವಜನಿಕರು ಸೇವಿಸುವ ವಿವಿಧ ಪದಾರ್ಥಗಳ ಗಣಮಟ್ಟ ಪರಿಶೀಲನೆ ಮಾಡಲು ತಯಾರಿ ನಡೆಸಿದೆ. ಎಲ್ಲೆಂದರಲ್ಲಿ ಸ್ವಚ್ಛತೆ ಬಗ್ಗೆ ಗಮನ ಕೊಡದೆ ತಿನ್ನುವುವರಿಗೆ ಶಾಕಿಂಗ್ ಸುದ್ದಿಯನ್ನು ನೀಡಿದೆ ಆಹಾರ ಸುರಕ್ಷತೆ ಇಲಾಖೆ. ಇನ್ಮೇಲೆ ಪನ್ನೀರ್ ಹಾಗೂ ಕೇಕ್ ತಿನ್ನುವ ಮುನ್ನ ಎಚ್ಚರ ವಹಿಸಿ ಎಂದು ಹೇಳಿದೆ.

ಕೇವಲ ಹೊಟೇಲ್, ಬೀದಿ ಬದಿ ಆಹಾರ ಸ್ಟಾಲ್‌ಗಳನ್ನು ಮಾತ್ರವಲ್ಲದೆ ರೈಲ್ವೆ ಇಲಾಖೆಗಳಲ್ಲಿ ಆಹಾರ ಸುರಕ್ಷತೆ ಬಗ್ಗೆ ಇಲಾಖೆ ಪರಿಶೀಲನೆ ನಡೆಸಿದೆ. ರೈಲಿನಲ್ಲಿ ದಿನಕ್ಕೆ ಲಕ್ಷಾಂತರ ಮಂದಿ ಪ್ರಯಾಣಿಸುತ್ತಾರೆ. ಅವರಲ್ಲಿ ಬಹುತೇಕರು ತಮ್ಮ ಆಹಾರವನ್ನು ರೈಲಿನಲ್ಲೇ ಆರ್ಡರ್ ಮಾಡಬೇಕಾಗುತ್ತದೆ. ಇದರ ಸ್ವಚ್ಛತೆ ಬಗ್ಗೆ ಸಾರ್ವಜನಿಕರು ಪರಿಶೀಲಿಸಲು ಆಗುವುದಿಲ್ಲ. ರೈಲುಗಳಲ್ಲಿ ಆಹಾರ ಸಪ್ಲೈ ಮಾಡುವ 142 ಆಹಾರ ಮಳಿಗೆಗಳನ್ನ ಅಧಿಕಾರಿಗಳು ತಪಾಸಣೆ ಮಾಡಿ ಪರಿಶೀಲನೆ ಮಾಡಿದ್ದಾರೆ.
ಹಾಗೆ ಪ್ರವಾಸೋದ್ಯಮ ಪ್ರಮುಖ ಪ್ರವಾಸಿ ತಾಣಗಳ 35 ಹೋಟೆಲ್ ಘಟಕಗಳಲ್ಲಿಯೂ ಕೂಡ ಇಲಾಖೆ ತಪಾಸಣೆ ನಡೆಸಿದೆ. ಸೆ.4- 5 ರಂದು ಪ್ರವಾಸೋದ್ಯಮ ಬಳಿಯ ಹೋಟೆಗಳಲ್ಲಿ ಆಹಾರ ಗುಣಮಟ್ಟ ಪರಿಶೀಲನೆ ನಡೆದಿದೆ. ಸಾರ್ವಜನಿಕರ ಆರೋಗ್ಯವನ್ನ ಕಾಪಾಡುವ ನಿಟ್ಟಿನಲ್ಲಿ ಆಹಾರ ಸುರಕ್ಷತೆ ಇಲಾಖೆ ಈ ಕ್ರಮವನ್ನು ತೆಗೆದುಕೊಂಡಿದೆ. ಈ ಬಗ್ಗೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯಿಂದ ಮಾಧ್ಯಮ ಪ್ರಕಟಣೆಯನ್ನು ಹೊರಡಿಸಿದೆ.