ದೆಹಲಿ : ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ನೌಶೇರಾ ಸೆಕ್ಟರ್ ನಲ್ಲಿ ಭಾರತ ಸೇನಾ ಸೈನಿಕರೊಂದಿಗೆ ದೀಪಾವಳಿ ಹಬ್ಬವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಆಚರಿಸಿದರು. ಯೋಧರಿಗೆ ಸಿಹಿ ಹಂಚಿ ಸಂಭ್ರಮಿಸಿದ ಮೋದಿ, ಫಾರ್ವರ್ಡ್ ಪೋಸ್ಟ್ ನಲ್ಲಿ ಯೋಧರನ್ನುದ್ದೇಶಿಸಿ ಮಾತನಾಡಿದ್ದಾರೆ.
ಪ್ರಧಾನಿಯಾಗಿ ಅಲ್ಲ “ನಾನು ನಿಮ್ಮ ಕುಟುಂಬದ ಸದಸ್ಯನಾಗಿ ಇಲ್ಲಿಗೆ ದೀಪಾವಳಿ ದೀಪಾವಳಿ ಆಚರಿಸಲು ಬಂದಿದ್ದೇನೆ ಎಂದು ಮೋದಿ ಹೇಳಿದರು. ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದ ದಿನದಿಂದಲೂ ( 2014) ಸೈನಿಕರೊಂದಿಗೆ ತಮ್ಮ ದೀಪಾವಳಿಯನ್ನು ಆಚರಿಸುವುದನ್ನು ಸಂಪ್ರದಾಯವನ್ನಾಗಿ ಮಾಡಿಕೊಂಡಿದ್ದಾರೆ.
ಪ್ರಧಾನ ಮಂತ್ರಿಯವರು ಕಳೆದ ವರ್ಷ ದೀಪಾವಳಿ ಆಚರಿಸಲು ರಾಜಸ್ಥಾನದ ಜೈಸಲ್ಮೇರ್ ನ ಲಾಂಗೆವಾಲಾದ ಗಡಿ ಪ್ರದೇಶಕ್ಕೆ ಪ್ರಯಾಣಿಸಿದ್ದರು. ದೀಪಾವಳಿ ಆಚರಣೆಯ ಸಮಯದಲ್ಲಿ ಮೋದಿ ಯೋಧರೊಂದಿಗೆ ದೀಪಗಳನ್ನು ಬೆಳಗಿಸಿದ್ದರು. ಇದಕ್ಕೂ ಮುನ್ನ ಪ್ರಧಾನಿ ಮೋದಿ ಅವರು ಜನರಿಗೆ ದೀಪಾವಳಿ ಶುಭಾಶಯ ಕೋರಿದರು.
ದೀಪಾವಳಿಯ ಶುಭ ಸಂದರ್ಭದಲ್ಲಿ ದೇಶವಾಸಿಗಳಿಗೆ ಶುಭಾಶಯಗಳು. ಈ ದೀಪಗಳ ಹಬ್ಬವು ನಿಮ್ಮ ಜೀವನಕ್ಕೆ ಸಂತೋಷ, ಸಮೃದ್ಧಿ ಮತ್ತು ಅದೃಷ್ಟವನ್ನು ತರಲಿ ಎಂದು ನಾನು ಬಯಸುತ್ತೇನೆ. ಎಲ್ಲರಿಗೂ ದೀಪಾವಳಿ ಶುಭಾಶಯಗಳು ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.
(Pm Narendra Modi celebrates festival of lights with soldiers)