ಗೋವಾ : ದೇಶದ ಬೊಕ್ಕಸಕ್ಕೆ ಅತೀ ಹೆಚ್ಚು ಆದಾಯವನ್ನು ತಂದುಕೊಡುತ್ತಿರೋದು ಅಬಕಾರಿ. ಸಾಮಾನ್ಯವಾಗಿ ಜನರು ಬಾರ್, ಪಬ್ ಗಳಲ್ಲಿ ಕುಳಿತು ಆಲ್ಕೋಹಾಲ್ ಕುಡಿಯೋದು ಮಾಮೂಲು. ಇನ್ನು ಇತ್ತೀಚಿನ ದಿನಗಳಲ್ಲಿ ಮದ್ಯದ ಶೋ ರೂಂಗಳು ಆರಂಭಗೊಂಡಿದ್ದವು. ಆದ್ರೀಗ ಪ್ರವಾಸಿಗರ ನೆಚ್ಚಿನ ತಾಣವೆನಿಸಿಕೊಂಡಿರುವ ಗೋವಾದಲ್ಲಿ ಆಲ್ಕೋಹಾಲ್ ಮ್ಯೂಸಿಯಂ ಆರಂಭಗೊಂಡಿದೆ. ಈ ಮ್ಯೂಸಿಯಂನಲ್ಲಿ ಕಾಣ ಸಿಗದ ಬ್ರ್ಯಾಂಡ್‌ಗಳೇ ಇಲ್ಲಾ.

ಭಾರತದ ಪ್ರಮುಖ ಪ್ರವಾಸಿ ತಾಣಗಳ ಪೈಕಿ ಅತೀ ಹೆಚ್ಚು ಜನರು ಇಷ್ಟ ಪಡೋದು ಗೋವಾಗೆ (Goa) ಮೊದಲ ಸ್ಥಾನ. ಮೋಜು ಮಸ್ತಿಗಾಗಿ ಜನ ಗೋವಾಕ್ಕೆ ತೆರಳುತ್ತಾರೆ. ದೇಶ ಮಾತ್ರವಲ್ಲದೇ ವಿದೇಶಗಳಿಂದಲೂ ಅತೀ ಹೆಚ್ಚು ಸಂಖ್ಯೆಯಲ್ಲಿ ಪ್ರವಾಸಿಗರು ಗೋವಾಕ್ಕೆ ಆಗಮಿಸುತ್ತಿದ್ದಾರೆ. ಇಂತಹ ಗೋವಾದಲ್ಲೀಗ ದೇಶದ ಮೊತ್ತ ಮೊದಲ ಆಲ್ಕೋಹಾಲ್ ಮ್ಯೂಸಿಯಂ ಆರಂಭಗೊಂಡಿದ್ದು, ಅಪರೂಪದ ಮದ್ಯದ ಕಲೆಕ್ಷನ್‌ಗಳು ಲಭ್ಯವಿದೆ.

ಉತ್ತರ ಗೋವಾದಲ್ಲಿರುವ ಕ್ಯಾಂಡೋಲಿಯಂ ವಿಲೇಜ್‌ನಲ್ಲಿ ಈ ಹೊಸ ಮ್ಯೂಸಿಯಂ ಆರಂಭಗೊಂಡಿದೆ. ಇಲ್ಲಿ ಗೋವಾದ ಸ್ಥಳೀಯ ಫೆನ್ನಿಯಿಂದ ಹಿಡಿದು ವಿದೇಶಿ ದುಬಾರಿ ಸ್ಕಾಚ್ ವರೆಗೂ ಲಭ್ಯವಿದೆ. ಇಷ್ಟು ದಿನ ಬೀಚ್ ನೋಡೋದಕ್ಕೆ ಬರ್ತಿದ್ದ ಪ್ರವಾಸಿಗರು ಇದೀಗ ಆಲ್ಕೋ ಹಾಲ್ ಮ್ಯೂಸಿಯಂಗೆ ಭೇಟಿ ಕೊಟ್ಟು ಅಪರೂಪದ ಮದ್ಯದ ರುಚಿಯನ್ನು ನೋಡುತ್ತಿದ್ದಾರೆ.

ದೇಶದ ಯಾವುದೇ ಭಾಗದಲ್ಲಿಯೂ ಮದ್ಯದ ಮ್ಯೂಸಿಯಂ ಇಲ್ಲ. ಹೀಗಾಗಿ ಅಪರೂಪದ, ವಿಶೇಷವಾಗಿರುವ ಮ್ಯೂಸಿಯಂ ಆರಂಭಿಸಬೇಕು ಅನ್ನೋ ಕನಸು ಕಂಡಿದ್ದಉದ್ಯಮಿ ಕುಡ್ಚಾದ್ಕರ್ ಈ ಮದ್ಯದ ಮ್ಯೂಸಿಯಂ ಆರಂಭಿಸಿದ್ದಾರೆ. ವಿದೇಶಗಳಲ್ಲಿ ಆಲ್ಕೋಹಾಲ್ ಮ್ಯೂಸಿಯಂಗಳಿದ್ದು ಗೋವಾದಲ್ಲಿ ಮೊದಲ ಬಾರಿಗೆ ಅಪರೂಪದ ಮ್ಯೂಸಿಯಂ ಆರಂಭಿಸಲಾಗಿದೆ.

ಇಂದಿನ ಅತ್ಯಾಧುನಿಕ ತಂತ್ರಜ್ಞಾನದಲ್ಲಿ ಮದ್ಯ ತಯಾರಿಕೆಯಿಂದ ಹಿಡಿದು ಪೂರ್ವಜರು ಮದ್ಯವನ್ನು ಹೇಗೆ ತಯಾರಿಸುತ್ತಿದ್ದರು ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಲಾಗುತ್ತಿದೆ. ಇನ್ನು ಮ್ಯೂಸಿಯಂಗೆ ಎಂಟ್ರಿ ಕೊಟ್ರೆ ಸಾಕು ಗೋವಾದ ವೆಲ್‌ಕಮ್ ಡ್ರಿಂಕ್ಸ್ ಗೋವಾ ಫೆನ್ನಿ ನಿಮ್ಮನ್ನು ಸ್ವಾಗತಿಸುತ್ತೆ.

ಒಟ್ಟಿನಲ್ಲಿ ಗೋವಾದಲ್ಲಿ ಆರಂಭಗೊಂಡಿರೋ ಈ ಅಪರೂಪದ ಮ್ಯೂಸಿಯಂ ಜನಾಕರ್ಷಣೆಯ ಕೇಂದ್ರವಾಗಿ ಹೊರಹೊಮ್ಮುತ್ತಿದೆ.
( India’s first alcohol museum opens in Goa )