ನವದೆಹಲಿ : ಜಮ್ಮು ಏರ್ ಫೋರ್ಸ್ ಸ್ಟೇಶನ್ ಮೇಲಿನ ಡ್ರೋನ್ ದಾಳಿ ಬಳಿಕ ಇಂದು ಮಿಲಿಟರಿ ಸ್ಟೇಶನ್ ಗುರಿಯಾಗಿಟ್ಟುಕೊಂಡು ಇಂದು ದಾಳಿ ನಡೆಸಲಾಗಿದೆ. ಇದರ ಬೆನ್ನಲ್ಲೇ ಭಾರತೀಯ ಯೋಧರು 25 ಸುತ್ತು ಗುಂಡಿನ ದಾಳಿ ನಡೆಸಿದ್ದಾರೆ.
ಕಾಲೂಚಕ್ ಮಿಲಿಟರಿ ಸ್ಟೇಶನ್ ಬಳಿ ಇಂದು ಮುಂಜಾನೆ ಡ್ರೋನ್ ಕಾಣಿಸಿಕೊಂಡಿದೆ. ಇದರ ಬೆನ್ನಲ್ಲೇ ಅಲರ್ಟ್ ಆಗಿದ್ದ ಸೇನೆ 20 ರಿಂದ 25 ಸುತ್ತು ಗುಂಡಿನ ದಾಳಿ ನಡೆಸಿದೆ. ಗುಂಡಿನ ದಾಳಿ ಬಳಿಕ ಡ್ರೋನ್ ಮಾಯವಾಗಿದ್ದು, ಸದ್ಯ ಸೇನೆ ಸರ್ಚ್ ಅಪರೇಷನ್ ನಡೆಸುತ್ತಿದೆ. ಗುಂಡಿನ ದಾಳಿಯಲ್ಲಿ ಡ್ರೋನ್ ನ್ನು ಹೊಡೆದುರಳಿಸಲಾಗಿದೆ ಎಂದು ಹೇಳಲಾಗುತ್ತಿದೆ.
ನಿನ್ನೆಯಷ್ಟೇ ಜಮ್ಮುವಿನ ಏರ್ ಫೋರ್ಸ್ ಬಳಿ ಭಾನುವಾರ ರಾತ್ರಿ ಎರಡು ಬಾರಿ ದಾಳಿ ನಡೆದಿದೆ. ರಾತ್ರಿ 1.37 ಮತ್ತು ಎರಡನೇಯದ್ದು ಐದು ನಿಮಿಷಗಳ ನಂತರ ಸರಿಯಾಗಿ 1.42 ಗಂಟೆಗೆ ದಾಳಿಯಾಗಿದೆ. ಎರಡೂ ದಾಳಿಯ ಇಂಟೆನ್ಸಿಟಿ ಕಡಿಮೆಯಾಗಿದ್ದರಿಂದ ಸ್ಫೋಟದ ತೀವ್ರತೆ ಕ್ಷೀಣವಾಗಿತ್ತು. ಹಾಗಾಗಿ ಮೇಲ್ಛಾವಣಿಗೆ ಹಾನಿಯಾಗಿತ್ತು.
ಎರಡನೇ ದಾಳಿ ಬಯಲು ಪ್ರದೇಶದಲ್ಲಿ ನಡೆದಿತ್ತು. ಇಲ್ಲಿ ಇಬ್ಬರು ಸೈನಿಕರು ಗಾಯಗೊಂಡಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಮೊದಲ ಬಾರಿಗೆ ಉಗ್ರರು ಡ್ರೋನ್ ಮೂಲಕ ದಾಳಿ ನಡೆಸಿದ್ದಾರೆ. ಘಟನಾ ಸ್ಥಳದಲ್ಲಿ ಎನ್‍ಐಎ ತಂಡ ತಲುಪಿದ್ದು, ತನಿಖೆ ನಡೆಸುತ್ತಿದೆ.
ಭಾನುವಾರ ರಾತ್ರಿ ಸುಮಾರು 11 ಗಂಟೆಗೆ ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಉಗ್ರರು ಸ್ಪೆಷಲ್ ಪೊಲೀಸ್ ಆಫಿಸರ್ (ಎಸ್‍ಪಿಓ) ಮನೆಗೆ ನುಗ್ಗಿ ಗುಂಡಿನ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಎಸ್‍ಪಿಓ ಫಯಾಜ್ ಅಹಮದ್ (41) ಮತ್ತು ಅವರ ಪತ್ನಿ ರಾಜಾ ಬೇಗಂ, ಮಗಳು ರಫಿಯಾ (23) ಸಾವನ್ನಪ್ಪಿದ್ದಾರೆ.