ದಕ್ಷಿಣ ಕನ್ನಡ : ರಾಜ್ಯದ ಶ್ರೀಮಂತ ದೇಗುಲಗಳಲ್ಲಿ ಒಂದಾಗಿರುವ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವಿರುದ್ದ ಮತ್ತೊಂದು ಆರೋಪ ಕೇಳಿಬಂದಿದೆ. ರಾಜ್ಯ ಮುಜರಾಯಿ ಇಲಾಖೆ ಕಳಂಕಿತ ಕಂಪೆನಿಯೊಂದಕ್ಕೆ ದೇವಸ್ಥಾನದ ಆನ್ ಲೈನ್ ಸೇವೆಗಳ ಆನ್ ಲೈನ್ ಬುಕ್ಕಿಂಗ್ ಹೊಣೆಯನ್ನು ನೀಡಿರುವುದು ಹೊಸ ವಿವಾದವನ್ನು ಹುಟ್ಟುಹಾಕಿದೆ.

ಕುಕ್ಕೆ ಸುಬ್ರಹ್ಮಣ್ಯನ ದೇಗುಲದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ಇದೀಗ ದೇವಸ್ಥಾನದ ಸೇವೆಗಳ ಆನ್ ಲೈನ್ ಬುಕ್ಕಿಂಗ್ ಹೆಸರಿನಲ್ಲಿ ಮುಜರಾಯಿ ಇಲಾಖೆ ದ್ವಿಮುಖ ನೀತಿ ಅನುಸರಿಸಿರುವುದು ಬಯಲಾಗಿದೆ. ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪೂಜೆ ಹಾಗೂ ಸೇವೆಗಳನ್ನು ಆನ್ ಲೈನ್ ಬುಕ್ಕಿಂಗ್ ಆರಂಭಿಸಲಾಗಿತ್ತು. ಆದರೆ ಆನ್ ಲೈನ್ ಬುಕ್ಕಿಂಗ್ ಹೊಣೆಯನ್ನು Pureprayer.com ಅನ್ನುವ ಸಂಸ್ಥೆಗೆ ವಹಿಸಿದೆ. ಆದರೆ ಇದೇ ಸಂಸ್ಥೆ ಈ ಹಿಂದೆ ಕುಕ್ಕೆ ದೇವರ ಮೂಲ ವಿಗ್ರಹ, ಗೋಪುರ, ಉತ್ಸವಗಳ ಫೋಟೋ ಬಳಸಿ ಅಕ್ರಮ ವೆಬ್ ಸೈಟ್ ಮಾಡಿದ್ದ ಆರೋಪ ಕೇಳಿಬಂದಿತ್ತು.

ಕುಕ್ಕೆ ಸುಬ್ರಹ್ಮಣ್ಯ ದೇಗುಲದ ಹೆಸರನ್ನು ಅಕ್ರಮವಾಗಿ ಬಳಸಿಕೊಂಡು ಖಾಸಗಿಯಾಗಿ ದೇವರ ಸೇವೆ ನಡೆಸಿರುವ ಸಂಸ್ಥೆ, ದೇವಸ್ಥಾನಕ್ಕೆ ಬರುತ್ತಿದ್ದ ಲಕ್ಷಾಂತರ ಆದಾಯಕ್ಕೆ ಕುತ್ತು ತಂದಿದೆ ಅನ್ನುವುದು ಬಯಲಾಗಿತ್ತು. ಈ ಹಿನ್ನೆಲೆಯಲ್ಲ 2018ರ ಅಕ್ಟೋಬರ್ 16ರಂದು ಕುಕ್ಕೆ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಮಂಗಳೂರು ಸೈಬರ್ ಕ್ರೈಂಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ Pureprayer.com ವಿರುದ್ದ ಕ್ರಿಮಿನಲ್ ಕೇಸ್ ದಾಖಲಾಗಿತ್ತು. ಕೇವಲ Pureprayer.com ಮಾತ್ರವಲ್ಲ, ಇನ್ನೂ ಎರಡು ವೆಬ್ ಸೈಟ್ ವಿರುದ್ದವೂ ದೂರು ದಾಖಲಿಸಲಾಗಿತ್ತು. ಪ್ರಕರಣ ಸದ್ಯ ನ್ಯಾಯಾಲಯದ ವಿಚಾರಣೆಯ ಹಂತದಲ್ಲಿದ್ದು, ಸಂಸ್ಥೆ ಪ್ರಕರಣದ ಕುರಿತು ತಡೆಯಾಜ್ಞೆ ತಂದಿತ್ತು.

ಪ್ರಕರಣ ಇನ್ನೂ ಇತ್ಯರ್ಥವಾಗುವ ಮೊದಲೇ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಉಸ್ತುವಾರಿಯಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆನ್ ಲೈನ್ ಸೇವೆಯನ್ನು Pureprayer.comಗೆ ವಹಿಸಿದೆ. ಮಾತ್ರವಲ್ಲ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಸಿಎಂ ಯಡಿಯೂರಪ್ಪ ಸಂಸ್ಥೆಯಿಂದ ಸಿದ್ದವಾದ ಆ್ಯಪ್ ಬಿಡುಗಡೆ ಮಾಡಿದ್ದಾರೆ. ಇದೀಗ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿಗಳು ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಪತ್ರವನ್ನು ಬರೆದಿದ್ದಾರೆ. ಈ ಪತ್ರ ಇದೀಗ ಬಯಲಾಗಿದ್ದು, ಮುಜರಾಯಿ ಇಲಾಖೆಯಲ್ಲಿ ನಡೆದಿರುವ ಎಡವಟ್ಟು ಬಯಲಾಗಿದೆ.