Maharashtra Deputy Speaker high drama; ಮುಂಬೈ: ಮೀಸಲಾತಿ ವಿಚಾರದಲ್ಲಿ ಮಹಾರಾಷ್ಟ್ರದಲ್ಲಿ ಡೆಪ್ಯುಟಿ ಸ್ಪೀಕರ್ ಮತ್ತು ಶಾಸಕರಿಂದ ಹೈಡ್ರಾಮಾ ನಡೆದಿದೆ. ಮೀಸಲಾತಿ ನೀಡುವುದನ್ನು ವಿರೋಧಿಸಿ ಮಹಾರಾಷ್ಟ್ರ(Maharastra) ವಿಧಾನಸಭೆಯ ಡೆಪ್ಯುಟಿ ಸ್ಪೀಕರ್ ಮತ್ತು ಇಬ್ಬರು ಶಾಸಕರು ಸಚಿವಾಲಯ ಕಟ್ಟಡದಿಂದ ಕೆಳಕ್ಕೆ ಹಾರಿದ್ದಾರೆ.
ಧಂಗರ್ ಸಮುದಾಯವನ್ನು ಪರಿಶಿಷ್ಟ ವರ್ಗದ ಮೀಸಲಾತಿಗೆ ಒಳಪಡಿಸುವುದನ್ನು ವಿರೋಧಿಸುತ್ತಿರುವ ಡೆಪ್ಯುಟಿ ಸ್ಪೀಕರ್ ನರಹರಿ ಜೀರ್ವಾಲ್ (Narhari Zirwal)ಮತ್ತು ಇತರ ಇಬ್ಬರು ಬುಡಕಟ್ಟು ಸಮುದಾಯದ ಶಾಸಕರು ಇಂದು ಪ್ರತಿಭಟನೆ ವೇಳೆ ಸಚಿವಾಲಯ ಕಟ್ಟಡದ ಮೂರನೇ ಮಹಡಿಯಿಂದ ಕೆಳಕ್ಕೆ ಜಿಗಿದಿದ್ದಾರೆ.

Image Credit to Original Source
ಕಟ್ಟಡದಿಂದ ಹಾರಿದ್ದ ಡೆಪ್ಯುಟಿ ಸ್ಪೀಕರ್ ಮತ್ತು ಇಬ್ಬರು ಶಾಸಕರು ಸಚಿವಾಲಯದಲ್ಲಿ ಅಳವಡಿಸಿದ್ದ ಸುರಕ್ಷತಾ ಬಲೆಯಲ್ಲಿ ಸಿಲುಕಿಕೊಂಡಿದ್ದು, ಬಳಿಕ ತಾವೇ ಮೇಲೆದ್ದು ಬಲೆಯ ಮೂಲಕ ಹತ್ತಿ ಮೂರನೇ ಮಹಡಿಗೆ ತಲುಪಿದ್ದಾರೆ.
ಜಿಗಿದ ವೇಳೆ ಶಾಸಕರು ಯಾರಿಗೂ ಗಂಭೀರ ಸ್ವರೂಪದ ಗಾಯಗಳು ಏನೂ ಆಗದೇ ಪಾರಾಗಿದ್ದು, ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 2018ರ ಫೆಬ್ರವರಿ ತಿಂಗಳ ನಂತರ ಸಚಿವಾಲಯ ಕಟ್ಟಡದಲ್ಲಿ ಸರಣಿ ಆತ್ಮಹತ್ಯಾ ಯತ್ನ ಪ್ರಕರಣಗಳು ಜರುಗಿದ ಬಳಿಕ ಕಟ್ಟಡದ ಆವರಣದಲ್ಲಿ ಸುರಕ್ಷತಾ ಬಲೆಗಳನ್ನು ಅಳವಡಿಸಲಾಗಿತ್ತು.
ಡೆಪ್ಯುಟಿ ಸ್ಪೀಕರ್ ನರಹರಿ ಜೀರ್ವಾಲ್ ಅಜಿತ್ ಪವಾರ್ ಬಣದ ಎನ್ ಸಿಪಿಯ ಸದಸ್ಯರಾಗಿದ್ದು, ಕಳೆದ ತಿಂಗಳಿನಲ್ಲೇ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಅವರಿಗೆ ಪತ್ರ ಬರೆದು ಧಂಗರ್ ಸಮುದಾಯವನ್ನು ಎಸ್ ಟಿ ಮೀಸಲಾತಿಗೆ ಸೇರ್ಪಡೆ ಮಾಡುವ ನಿರ್ಧಾರ ಕೈಗೊಳ್ಳದಂತೆ ಒತ್ತಡ ಹೇರಿದ್ದರು.
ಬುಡಕಟ್ಟು ಪ್ರಾಬಲ್ಯದ ದಿಂಡೋರಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ನರಹರಿ ಜೀರ್ವಾಲ್ ಧಂಗರ್ ಮೀಸಲಾತಿ ಕುರಿತ ಟಿಐಎಸ್ಎಸ್ ವರದಿ ಮಂಡನೆಯಾಗಬೇಕು ಎಂದು ಸಿಎಂ ಏಕನಾಥ ಶಿಂಧೆ ಅವರಿಗೆ ಒತ್ತಾಯಿಸಿದ್ದರು.

Image Credit to Original Source
ಪ್ರಸ್ತುತ ಧಂಗರ್ ಸಮುದಾಯ ನೋಮಾಡಿಕ್ ಬುಡಕಟ್ಟು ಪಟ್ಟಿಯಲ್ಲಿದ್ದು, ಪಶ್ಚಿಮ ಮಹಾರಾಷ್ಟ್ರ ಮತ್ತು ಮರಾಠಾವಾಡಾ ಪ್ರದೇಶದ ಶೆಪರ್ಡ್ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಪರಿಶಿಷ್ಟ ವರ್ಗದ ಮೀಸಲಾತಿಯಡಿ ಧಂಗರ್ ಸಮುದಾಯವನ್ನು ತರಬೇಕು ಎಂಬ ಕೂಗು ಮಹಾರಾಷ್ಟ್ರದಲ್ಲಿ ದೊಡ್ಡ ಮಟ್ಟದಲ್ಲಿಯೇ ಇದೆ.
288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಗೆ ನವೆಂಬರ್ ತಿಂಗಳಿನಲ್ಲಿ ಸಾರ್ವತ್ರಿಕ ಚುನಾವಣೆ ಘೋಷಣೆಯಾಗುವ ನಿರೀಕ್ಷೆಯಿದೆ. ಸದ್ಯ ಬಿಜೆಪಿ ಮತ್ತು ಮುಖ್ಯಮಂತ್ರಿ ಏಕನಾಥ ಶಿಂಧೆ ಬಣದ ಶಿವಸೇನೆ ಮಹಾರಾಷ್ಟ್ರದಲ್ಲಿ ಅಧಿಕಾರದಲ್ಲಿದೆ.
Maharashtra deputy speaker jumps from secretariat building