Nepal Flood : ಖಠ್ಮಂಡು: ಕಣಿವೆ ರಾಜ್ಯ ನೇಪಾಳದಲ್ಲಿ ಮಳೆ ಮತ್ತು ಭೂ ಕುಸಿತ(Land Slide) ದಿಂದಾಗಿ ನೂರಕ್ಕೂ ಹೆಚ್ಚು ಜನ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ. ಇದರ ಜೊತೆಗೆ 64 ಕ್ಕೂ ಹೆಚ್ಚು ಜನ ನಾಪತ್ತೆಯಾಗಿರುವುದಾಗಿ ತಿಳಿದು ಬಂದಿದೆ.
ನೇಪಾಳ ಪೊಲೀಸ್ ಮೂಲಗಳ ಮಾಹಿತಿ ಪ್ರಕಾರ ಶುಕ್ರವಾರದಿಂದ ಮುಂದುವರಿದಿರುವ ಪ್ರವಾಹ ಮತ್ತು ಭೂ ಕುಸಿತದಿಂದ 79 ಜನ ಇದುವರೆಗೂ ನಾಪತ್ತೆಯಾಗಿದ್ದು, 112 ಜನ ಮೃತಪಟ್ಟಿದ್ದು 45ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಖಠ್ಮಂಡು ಕಣಿವೆಯಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಸಾವು ಸಂಭವಿಸಿದ್ದು, 48 ಜನ ಮೃತಪಟ್ಟಿದ್ದಾರೆ. ಕನಿಷ್ಠ 195 ಮನೆಗಳು ಮತ್ತು ಎಂಟು ಸೇತುವೆಗಳು ಹಾನಿಗೊಳಗಾಗಿವೆ. ಸುಮಾರು 3100 ಕ್ಕೂ ಹೆಚ್ಚು ಜನರನ್ನು ಇದುವರೆಗೆ ಭದ್ರತಾ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.
ಗುರುವಾರದಿಂದ ನೇಪಾಳದಲ್ಲಿ ಮಳೆ ಆರಂಭವಾಗಿದ್ದು, ದೇಶಾದ್ಯಂತ ಒಟ್ಟು 63 ಸ್ಥಳಗಳಲ್ಲಿ ಮುಖ್ಯ ಹೆದ್ದಾರಿಗಳು ಬಂದ್ ಆಗಿವೆ. ನೇಪಾಳ ಪ್ರಧಾನಮಂತ್ರಿ ಪ್ರಕಾಶ್ ಮಾನ್ ಸಿಂಗ್ ಸಚಿವರು ಮತ್ತು ಭದ್ರತಾ ಸಂಸ್ಥೆಗಳ ತುರ್ತು ಸಭೆ ಕರೆದು ರಕ್ಷಣಾ ಕಾರ್ಯಾಚರಣೆ ಕುರಿತು ಚರ್ಚೆ ನಡೆಸಿದ್ದಾರೆ.ನೇಪಾಳದಾದ್ಯಂತ ಮೂರು ದಿನಗಳ ಕಾಲ ಶಾಲೆಗಳನ್ನು ಮುಚ್ಚಲು ಸರ್ಕಾರ ಆದೇಶ ಮಾಡಿದ್ದು, ನಡೆಯುತ್ತಿದ್ದ ಪರೀಕ್ಷೆಗಳನ್ನು ಸ್ಥಗಿತಗೊಳಿಸಲಾಗಿದೆ. ಪ್ರವಾಹದಿಂದಾಗಿ ಶನಿವಾರ ಇಡೀ ದಿನ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿತ್ತು.

ರಕ್ಷಣಾ ಕಾರ್ಯಾಚರಣೆಗಾಗಿ ನೇಪಾಳ ಪೋಲಿಸ್ ನ ಮೂರು ಸಾವಿರ ಭದ್ರತಾ ಸಿಬ್ಬಂದಿಯನ್ನೊಳಗೊಂಡ ತಂಡವನ್ನು ನಿಯೋಜಿಸಲಾಗಿದೆ. ಹೆಲಿಕಾಪ್ಟರ್ ಮತ್ತು ಬೋಟ್ ಗಳನ್ನು ಬಳಸಿಕೊಂಡು ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ. ಇದರ ಜೊತೆಗೆ ದೇಶೀಯ ವಿಮಾನ ಹಾರಾಟವನ್ನು ಕೂಡಾ ಸ್ಥಗಿತಗೊಳಿಸಲಾಗಿದೆ. ರಕ್ಷಣಾ ಕಾರ್ಯಾಚರಣೆಯ ಭಾಗವಾಗಿ ಅವಶೇಷಗಳ ತೆರವುಗೊಳಿಸುವಿಕೆ, ಭೂಕುಸಿತದಿಂದ ಬಂದ್ ಆಗಿದ್ದ ರಸ್ತೆಗಳ ತೆರವು ಕಾರ್ಯ ಮುಂದುವರಿದಿದೆ.
ನದಿ ತೀರದಲ್ಲಿರುವ ಒಂದು ಸಾವಿರಕ್ಕೂ ಹೆಚ್ಚು ಮನೆಗಳು ಮುಳುಗಡೆಯಾಗಿದ್ದು, ಹಲವು ನಿವಾಸಿಗಳು ಮನೆಗಳ ಛಾವಣಿಯ ಮೇಲೆ ಕುಳಿತು ರಕ್ಷಣೆಗಾಗಿ ಕಾಯ್ದಿದ್ದಾರೆ. ಪೂರ್ವ ಖಠ್ಮಂಡುವಿನ ಭಕ್ತಪುರ್ ನಲ್ಲಿ ಭೂ ಕುಸಿತದಿಂದ ಗರ್ಭಿಣಿ ಸೇರಿದಂತೆ ಐವರು ಸಿಲುಕಿದ್ದು, ದಾಡಿಂಗ್ ಎಂಬಲ್ಲಿ ಬಸ್ ಮೇಲೆ ಭೂ ಕುಸಿತ ಆಗಿದೆ.
ಖಠ್ಮಂಡು ಕಣಿವೆಯ ಕೆಲವು ಭಾಗದಲ್ಲಿ 12.68 ಇಂಚುಗಳಷ್ಟು ಮಳೆಯಾಗಿದ್ದು, ಭಾನುವಾರ ಕೂಡಾ ಮಳೆ ಮುಂದುವರಿಯುವ ಬಗ್ಗೆ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
Massive landslide in Nepal death toll crossed 100