ಮುಂಬೈ : ಕೊರೊನಾ ಮಹಾಮಾರಿ ಮಹಾರಾಷ್ಟ್ರವನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಅದ್ರಲ್ಲೂ ವಾಣಿಜ್ಯ ನಗರಿ ಮುಂಬೈ ಕೊರೊನಾ ಆಘಾತದಿಂದ ತತ್ತರಿಸಿ ಹೋಗಿದೆ. ಮುಂಬೈ ನಗರದ ಆಸ್ಪತ್ರೆಗಳಲ್ಲಿ ಶೇ.99 ರಷ್ಟು ಬೆಡ್ ಗಳು ಭರ್ತಿಯಾಗಿದ್ದು, ಆತಂಕವನ್ನು ಮೂಡಿಸಿದೆ.

ದೇಶದಲ್ಲಿ ದಾಖಲಾಗಿರುವ ಕೊರೊನಾ ಪ್ರಕರಣಗಳ ಪೈಕಿ ಮೂರನೇ 1ರಷ್ಟು ಪ್ರಕರಣಗಳು ಮಹಾರಾಷ್ಟ್ರದಲ್ಲಿಯೇ ದಾಖಲಾಗಿದೆ. ಮಹಾರಾಷ್ಟ್ರದಲ್ಲಿ ಇದುವರೆಗೆ 1,01,141 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು ಈ ಪೈಕಿ 3,717 ಮಂದಿ ಸಾವನ್ನಪ್ಪಿದ್ದಾರೆ. ಮಹಾರಾಷ್ಟ್ರದಲ್ಲಿ ದಾಖಲಾಗಿರುವ ಕೊರೊನಾ ಪ್ರಕರಣಗಳ ಪೈಕಿ ಮುಂಬೈ ಮಹಾನಗರ ಮುಂಚೂಣಿಯಲ್ಲಿದೆ. ಮುಂಬೈ ಮಹಾನಗರದಲ್ಲಿಯೇ ಬರೋಬ್ಬರಿ 24,373 ಮಂದಿ ಇಂದಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರ ನಡುವಲ್ಲೇ ಕೊರೊನಾರ್ಭಟ ಹೆಚ್ಚುತ್ತಿರುವುದಕ್ಕೆ ಮುಂಬೈ ಮಂದಿ ಬೆಚ್ಚಿಬಿದ್ದಿದ್ದಾರೆ.

ಕೊರೊನಾ ಸೋಂಕು ಹೆಚ್ಚುತ್ತಿರುವ ನಡುವಲ್ಲೇ ಮುಂಬೈನ ಆಸ್ಪತ್ರೆಗಳಲ್ಲಿ ಬೆಡ್, ವೆಂಟಿಲೇಟರ್ ಕೊರತೆ ಎದುರಾಗಿದೆ. ಮುಂಬೈ ಮಹಾನಗರ ಪಾಲಿಕೆ ಈ ಕುರಿತು ಮಾಹಿತಿಯ ಬಿಡುಗಡೆ ಮಾಡಿದ್ದು, ಮುಂಬೈ ಮಹಾನಗರದಲ್ಲಿ ಒಟ್ಟು 1181 ಐಸಿಯು ಬೆಡ್ ಗಳಿದ್ದು ಈ ಪೈಕಿ 1167 ಬೆಡ್ ಗಳು ಈಗಾಗಲೇ ಭರ್ತಿಯಾಗಿದ್ದು ಕೇವಲ 14 ಬೆಡ್ ಗಳು ಮಾತ್ರವೇ ಉಳಿದಿದೆ.

ಇನ್ನು ಕೋವಿಡ್ ರೋಗಿಗಳಿಗೆ ಕೃತಕ ಉಸಿರಾಟದ ವ್ಯವಸ್ಥೆಯನ್ನು ಕಲ್ಪಿಸುವ 530 ವೆಂಟಿಲೇಟರ್ ಗಳಿದ್ದು ಈ ಪೈಕಿ 497 ವೆಂಟಿಲೇಟರ್ ಈಗಾಗಲೇ ಬಳಕೆಯಲ್ಲಿದೆ. ಇನ್ನು ಆಮ್ಲಜನಕ ಪೂರೈಸುವ 5260 ಬೆಡ್ ಗಳ ಪೈಕಿ 3986 ಬೆಡ್ ಗಳಲ್ಲಿ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.

ಹೀಗಾಗಿ ಹೊಸ ರೋಗಿಗಳಿಗೆ ಬೆಡ್, ವೆಂಟಿಲೇಟರ್ ಕೊರೊತೆ ಎದುರಾಗಿದೆ. ಅಷ್ಟೇ ಯಾಕೆ ಸಾಮಾನ್ಯ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುವ ಸಲುವಾಗಿ ಸುಮಾರು 10,450 ಬೆಡ್ ಗಳನ್ನು ಮೀಸಲಿಡಲಾಗಿತ್ತು. ಆದ್ರೆ ಈ ಬೆಡ್ ಗಳ ಪೈಕಿ ಈಗಾಗಲ ಶೇ.87ರಷ್ಟು ಬೆಡ್ ಗಳು ಕೂಡ ಪುಲ್ ಆಗಿವೆ.

ದಿನೇ ದಿನೇ ಮುಂಬೈನಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವುದರಿಂದಾಗಿ ಆಸ್ಪತ್ರೆಗಳಲ್ಲಿ ಬೆಡ್ ಕೊರತೆ ಎದುರಾಗಿದೆ. ಮುಂಬೈ ಮಹಾನಗರ ಪಾಲಿಕೆ ಆಸ್ಪತ್ರೆಯನ್ನು ಹೊರತುಪಡಿಸಿ ಪರ್ಯಾಯ ವ್ಯವಸ್ಥೆಗಳನ್ನು ಮಾಡಿಕೊಳ್ಳುವತ್ತ ಚಿಂತನೆ ನಡೆಸುತ್ತಿದೆ. ಮುಂಬೈನಲ್ಲಿ ಕೊರೊನಾ ಸೋಂಕು ಇನ್ನಷ್ಟು ಹೆಚ್ಚುವ ಕುರಿತು ತಜ್ಞರು ಹೇಳುತ್ತಿರುವುದು ಮಹಾರಾಷ್ಟ್ರ ಸರಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ.