ಮುಂಬೈ : ವಾಣಿಜ್ಯ ನಗರದಲ್ಲಿ ಕಟ್ಟುನಿಟ್ಟಿನ ಕ್ರಮಗಳ ಮೂಲಕ ಕೊರೊನಾ ಸೋಂಕು ನಿಯಂತ್ರಣಕ್ಕೆ ತಂದ ಮುಂಬೈನಲ್ಲಿ ಅನ್ ಲಾಕ್ ಪ್ರಕ್ರೀಯೆ ಆರಂಭಗೊಂಡಿದೆ. ಇದೀಗ ನಾಳೆಯಿಂದ ( ಜೂನ್ 7) ಬಸ್ ಸಂಚಾರ ಆರಂಭಿಸಲು ಬಿಇಎಸ್ ಟಿ ಮುಂದಾಗಿದೆ.
ಮುಂಬೈನಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಮಾಣ ತೀರಾ ಕಡಿಮೆಯಾಗಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ ಕೇವಲ 866 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದೆ. ದಿನೇ ದಿನೇ ಕೊರೊನಾ ಸೋಂಕು ಇಳಿಕೆಯಾಗುತ್ತಿರೋ ಹಿನ್ನೆಲೆಯಲ್ಲಿ ಈಗಾಗಲೇ ಮಹಾರಾಷ್ಟ್ರ ಸರಕಾರ 5ನೇ ಹಂತದ ಅನ್ ಲಾಕ್ ಪ್ರಕ್ರಿಯೆ ಆರಂಭಿಸಿದೆ. ಅನ್ ಲಾಕ್ ಪ್ರಕ್ರಿಯೆಯ ಭಾಗವಾಗಿ ನಾಳೆಯಿಂದ ಬಸ್ ಗಳು ಸಂಚಾರ ಮಾಡಲಿವೆ.
ಬಸ್ ಗಳಲ್ಲಿ ಇರುವ ಸೀಟ್ ಗಳಷ್ಟೇ ಜನರನ್ನು ಸಾಗಾಟ ಮಾಡಬೇಕು. ಪ್ರಯಾಣಿಕರು ಕೋವಿಡ್ ಮಾರ್ಗಸೂಚಿಯಂತೆ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಜೊತೆಗೆ ಸ್ಯಾನಿಟೈಸರ್ ಬಳಕೆ ಮತ್ತು ಸಾಮಾಜಿಕ ಅಂತರವನ್ನು ಪಾಲನೆ ಮಾಡಬೇಕು ಎಂದು ಬಿಇಎಸ್ ಟಿ ಹೇಳಿದೆ.
ಮುಂಬೈನಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಮಾಣ ಇಳಿಕೆಯಾಗುತ್ತಿದೆ. ಆದರೆ ನೆರೆಯ ರಾಜ್ಯಗಳಲ್ಲಿ ಸೋಂಕು ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿಲ್ಲ. ಹೀಗಾಗಿ ಲಾಕ್ ಡೌನ್ ಏಕಾಏಕಿ ತೆರವು ಮಾಡುವುದು ಬೇಡ. ಬದಲಾಗಿ ಇನ್ನಷ್ಟು ಕಠಿಣ ನಿಯಮಗಳನ್ನು ಜಾರಿಗೆ ತರುವಂತೆ ತಜ್ಞರು ಸೂಚಿಸಿದ್ದಾರೆ. ಆದರೆ ಮಹಾರಾಷ್ಟ್ರ ಸರಕಾರ ಲಾಕ್ ಡೌನ್ ಆದೇಶವನ್ನು ಹಂತ ಹಂತವಾಗಿ ತೆರವು ಮಾಡುವ ಕಾರ್ಯವನ್ನು ಮಾಡುತ್ತಿದೆ.