ನವದೆಹಲಿ : ಹಲವು ರಾಜ್ಯಗಳ ವಿಧಾನಪರಿಷತ್ ಚುನಾವಣೆಯ ಹಿನ್ನೆಲೆಯಲ್ಲಿ ಕೇಂದ್ರ ಸಚಿವರ ಸಂಪುಟ ಪುನರಚನೆ ಮಾಡಲು ಮುಂದಾಗಿದೆ. ಇಂದು ಸಂಜೆ 5.30ರಿಂದ 6 ಗಂಟೆ ನಡುವೆ ರಾಷ್ಟ್ರಪತಿ ಭವನದಲ್ಲಿ ಕಾರ್ಯಕ್ರಮ ನಡೆಯಲಿದ್ದು, ರಾಜ್ಯದಿಂದ ಯಾರಿಗೆ ಸಚಿವ ಸ್ಥಾನ ಸಿಗುತ್ತೆ ಅನ್ನೋ ಕುತೂಹಲ ಮೂಡಿಸಿದೆ.
ಕೇಂದ್ರ ಸಚಿವ ಸಂಪುಟ ಪುನರಚನೆಯ ಹಿನ್ನೆಲೆಯಲ್ಲಿ ರಾಜ್ಯದಲ್ಲಿನ ಸಂಸದರು ಕೂಡ ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದಾರೆ. ಪ್ರಮುಖವಾಗಿ ವಿಜಯಪುರ ಸಂಸದ ರಮೇಶ್ ಜಿಗಜಿಣಗಿ, ಚಿತ್ರದುರ್ಗ ಸಂಸದ ನಾರಾಯಣ ಸ್ವಾಮಿ, ಕಲಬುರಗಿ ಸಂಸದ ಉಮೇಶ್ ಜಾಧವ್, ಹಾವೇರಿ ಸಂಸದ ಶಿವಕುಮಾರ್ ಉದಾಸಿ, ಚಿಕ್ಕಮಗಳೂರು – ಉಡುಪಿ ಸಂಸದೆ ಶೋಭಾ ಕರಂದ್ಲಾಜೆ, ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ, ಮೈಸೂರು – ಕೊಡಗು ಸಂಸದ ಪ್ರತಾಪ್ ಸಿಂಹ, ಬೀದರ್ ಸಂಸದ ಭಗವಂತ ಖೂಬಾ ಹಾಗೂ ಬಾಗಲಕೋಟೆ ಸಂಸದ ಪಿ.ಸಿ.ಗದ್ದಿಗೌಡರ್ ಹೆಸರು ಪ್ರಬಲವಾಗಿ ಕೇಳಿಬರುತ್ತಿದೆ. ಈ ಪೈಕಿ ರಾಜ್ಯದಲ್ಲಿ ಲಿಂಗಾಯಿತ, ಒಕ್ಕಲಿಗ ಹಾಗೂ ದಲಿತ ಕೋಟಾದಡಿಯಲ್ಲಿ ಸಚಿವ ಸ್ಥಾನ ಲಭಿಸುವ ಸಾಧ್ಯತೆಯಿದೆ. ಈಗಾಗಲೇ ಚಿಕ್ಕಮಗಳೂರು ಉಡುಪಿ ಸಂಸದೆ ಶೋಭಾ ಕರಂದ್ಲಾಜೆ, ರಮೇಶ್ ಜಿಗಜಿಣಗಿ, ಉಮೇಶ್ ಜಾಧವ್ ದೆಹಲಿಗೆ ತೆರಳಿರುವುದು ಕುತೂಹಲ ಮೂಡಿಸಿದೆ.
ಮುಂದಿನ ಬಾರಿ ನಡೆಯಲಿರುವ ಉತ್ತರ ಪ್ರದೇಶ, ಪಂಜಾಬ್, ಗುಜರಾತ್ , ಉತ್ತರಾಖಂಡ ವಿಧಾನ ಸಭಾ ಚುನಾವಣೆಯ ದೃಷ್ಟಿಯಿಂದ ಸಂಪುಟದಲ್ಲಿ ಬದಲಾವಣೆಯನ್ನು ಮಾಡಲಾಗುತ್ತಿದೆ. ಹಲವರಿಗೆ ಈ ಬಾರಿ ಸಂಪುಟದಲ್ಲಿ ಕೋಕ್ ಕೊಡುವ ಸಾಧ್ಯತೆಯಿದೆ. ಅಲ್ಲದೇ ಚುನಾವಣೆ ನಡೆಯಲಿರುವ ರಾಜ್ಯಗಳಿಗೆ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡುವ ಸಾಧ್ಯತೆಯಿದೆ. ಕೇಂದ್ರ ಸಚಿವ ಸಂಪುಟದಲ್ಲಿ 81 ಮಂದಿಗೆ ಸಚಿವ ಸ್ಥಾನ ಪಡೆಯಲು ಅವಕಾಶವಿದ್ದು, ಇದೀಗ ಕೇವಲ 53 ಮಂದಿಗಷ್ಟೇ ಖಾತೆಯನ್ನು ಹಂಚಿಕೆ ಮಾಡಲಾಗಿದೆ. ಈ ಬಾರಿ ಹೆಚ್ಚು ಸಂಸದರಿಗೆ ಸಚಿವ ಸ್ಥಾನ ಲಭಿಸುವ ಸಾಧ್ಯತೆಯಿದೆ.