ಪಾಟ್ನಾ : ದೇವಸ್ಥಾನದಲ್ಲಿನ ಜಾತ್ರೆಗೆ ತೆರಳಿ ವಾಪಾಸಾಗುತ್ತಿದ್ದ ವೇಳೆಯಲ್ಲಿ ನಡೆದ ದೋಣಿ ದುರಂತದಲ್ಲಿ ಐವರು ಭಕ್ತರು ಸಾವನ್ನಪ್ಪಿದ್ದು, ಇನ್ನೂ ಐವರು ನಾಪತ್ತೆಯಾಗಿರುವ ಘಟನೆ ಬಿಹಾರದ ಗೋಪಾಲಗಂಜ್ ಜಿಲ್ಲೆಯ ಗಂಡಕ್ ನದಿಯಲ್ಲಿ ನಡೆದಿದ್ದು, ನಾಪತ್ತೆಯಾಗಿರುವವರಿಗಾಗಿ ಶೋಧ ಕಾರ್ಯವನ್ನು ನಡೆಸಲಾಗುತ್ತಿದೆ.
ಆಕಾಶ್ ಕುಮಾರ್, ಪವನ್ ಕುಮಾರ್, ಬ್ರಜೇಶ್ ಗುಪ್ತಾ, ಪುಷ್ಪ ದೇವಿ ಹಾಗೂ ಮತ್ತೋರ್ವ ಎಂದು ಗುರುತಿಸಲಾಗಿದೆ. ಈ ಪೈಕಿ ಇಬ್ಬರು ಅಪ್ತಾಪ್ತರು ಹಾಗೂ ಓರ್ವ ಮಹಿಳೆ ಇದ್ದಾರೆ. ಸಂತ್ರಸ್ತರು ಜಾತ್ರೆಯನ್ನು ನೋಡಲು ಕುಚೈಕೋಟ್‌ನಿಂದ ರಾಮಜೀತಕ್ಕೆ ದೋಣಿಯಲ್ಲಿ ತೆರಳುತ್ತಿದ್ದರು. ದೋಣಿಯಲ್ಲಿ ಒಟ್ಟು10 ಜನರು ಇದ್ದರು. ಗಂಡಕ್ ನದಿಯನ್ನು ದೋಣಿ ಯಲ್ಲಿ ದಾಟುತ್ತಿರುವ ವೇಳೆಯಲ್ಲಿ ಬಲವಾದ ಗಾಳಿ ಬೀಸಿದೆ. ಅಲ್ಲದೇ ನದಿಯಲ್ಲಿ ಅಲೆಯ ಅಬ್ಬರ ಜೋರಾಗಿರುವುದರಿಂದಾಗಿ ದೋಣಿ ಸವಾರರು ನಿಯಂತ್ರಣ ಕಳೆದುಕೊಂಡಿದ್ದಾರೆ. ಇದರಿಂದಾಗಿ ದೋಣಿ ನದಿಯಲ್ಲಿ ಮಗುಚಿ ಬಿದ್ದು, ಈ ದುರಂತ ಸಂಭವಿಸಿದೆ.
ಘಟನೆಯ ಬಗ್ಗೆ ತಿಳಿಯುತ್ತಲೇ ವಿಪತ್ತು ನಿರ್ವಹಣಾ ದಳ ರಕ್ಷಣಾ ಕಾರ್ಯಾಚರಣೆಯನ್ನು ಕೈಗೊಂಡಿತ್ತು. ಇದುವರೆಗೆ ಒಟ್ಟು ಐದು ಮಂದಿಯ ಮೃತದೇಹವನ್ನು ಹೊರತೆಗೆಯ ಲಾಗಿದೆ. ಅಲ್ಲದೇ ನಾಪತ್ತೆಯಾದವರಿಗಾಗಿ ಹುಡುಕಾಟವನ್ನು ನಡೆಸಲಾಗುತ್ತಿದೆ.
ವಿದ್ಯುತ್ ಶಾಕ್ : ಮೂವರು ಅಪ್ರಾಪ್ತರು ಗಂಭೀರ
ಇನ್ನೊಂದೆಡೆ ಬಿಹಾರದ ಮುಜಾಫರ್ ಪುರ್ ಜಿಲ್ಲೆಯಲ್ಲಿ ವಿದ್ಯುತ್ ಶಾಕ್ ತಗುಲಿ ಮೂವರು ಅಪ್ರಾಪ್ತರು ತೀವ್ರವಾಗಿ ಅಸ್ವಸ್ಥಗೊಂಡಿದ್ದಾರೆ. ಬಾದಲ್ ಕುಮಾರ್, ಅವಿನಾಶ್ ಕುಮಾರ್ ಮತ್ತು ವಿಷ್ಣು ಕುಮಾರ್ ಎಂಬವರೇ ವಿದ್ಯುತ್ ಶಾಕ್ ಹೊಡೆಸಿಕೊಂಡ ಮಕ್ಕಳು. ವಿದ್ಯುತ್ ಶಾಕ್ ತಗಲುತ್ತಿದ್ದಂತೆಯೇ ಮೂವರು ಮಕ್ಕಳನ್ನು ಕೂಡ ಎಸ್.ಕೆ.ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮೂವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.
ವಿದ್ಯುತ್ ಶಾಕ್ ತಗಲುವುದಕ್ಕೆ ವಿದ್ಯುತ್ ವಿತರಣಾ ಕಂಪೆನಿಯ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎನ್ನಲಾಗುತ್ತಿದೆ. ವಿದ್ಯುತ್ ತಂತಿಯೊಂದು ತುಂಡಾಗಿ ಹಳ್ಳದಲ್ಲಿ ಬಿದ್ದಿತ್ತು. ಆದರೆ ಮಕ್ಕಳು ಇದನ್ನು ಅರಿಯದೆ ಹಳ್ಳ ದಾಟಿದ್ದಾರೆ. ಇದರಿಂದಾಗಿ ವಿದ್ಯುತ್ ಶಾಕ್ ತಗುಲಿದೆ ಎನ್ನಲಾಗುತ್ತಿದೆ. ಈ ಕುರಿತು ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.
(5 Dead, 5 Missing After Boat Capsizes Gandak River in Bihar )