ನವದೆಹಲಿ : NHAI Toll Tax Increase : ಕಳೆದ ಕೆಲವು ವರ್ಷಗಳಿಂದಲೂ ಟೋಲ್ ಗಳಿಂದ ಸಂಕಷ್ಟ ಎದುರಿಸುತ್ತಿರುವ ವಾಹನ ಸವಾರರಿಗೆ ಮತ್ತೊಂದು ಶಾಕಿಂಗ್ ಸುದ್ದಿ ಹೊರಬಿದ್ದಿದೆ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ದೇಶಾದ್ಯಂತ ರಾಷ್ಟ್ರೀಯ ಹೆದ್ದಾರಿಗಳು ಮತ್ತು ಎಕ್ಸ್‌ಪ್ರೆಸ್‌ವೇಗಳಲ್ಲಿ ಟೋಲ್‌ಗಳ ಬೆಲೆಯನ್ನು ಹೆಚ್ಚಿಸಲು ಯೋಜಿಸಿದೆ. ಏಪ್ರಿಲ್ 1 ರಿಂದಲೇ ರಾಷ್ಟ್ರೀಯ ಹೆದ್ದಾರಿ ಹಾಗೂ ಎಕ್ಸ್‌ಪ್ರೆಸ್ ಟೋಲ್‌ಗಳಲ್ಲಿ ಟೋಲ್ ದರ ಏರಿಕೆ ಮಾಡಲಿದ್ದು, ವಾಹನ ಸವಾರರು ಹಾಗೂ ಜನಸಾಮಾನ್ಯರು ಸಂಕಷ್ಟದ ಸುಳಿಗೆ ಸಿಲುಕಲಿದ್ದಾರೆ.
ಎಪ್ರಿಲ್ ಒಂದರಿಂದ ಟೋಲ್ ದರದಲ್ಲಿ 5 ರೂಪಾಯಿಯಿಂದ 10 ರೂಪಾಯಿಯ ವರೆಗೆ ಏರಿಕೆಯಾಗುವ (NHAI Toll Tax Increase) ನಿರೀಕ್ಷೆಯಿದೆ. ಮಾಸಿಕ ಟೋಲ್ ಪಾಸ್ ದರವೂ ಶೇ.10 ರಷ್ಟು ಏರಿಕೆ ಯಾಗಲಿದೆ. ಆದರೆ ರಾಜ್ಯ ಹೆದ್ದಾರಿಗಳಲ್ಲಿ ಟೋಲ್ ದರ ಏರಿಕೆ ಬಗ್ಗೆ ಇದುವರೆಗೂ ಯಾವುದೇ ಮಾಹಿತಿಗಳು ಲಭ್ಯವಾಗಿಲ್ಲ. ವರ್ಷಂಪ್ರತಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ದಿ ಪ್ರಾಧಿಕಾರ ಟೋಲ್ ರದ ಪರಿಷ್ಕರಣೆ ಮಾಡುತ್ತದೆ. ರಸ್ತೆ ಮತ್ತು ಸಾರಿಗೆ ಸಚಿವಾಲಯದ ಅನುಮೋದನೆಯ ನಂತರ ಹೊಸ ಟೋಲ್ ದರಗಳು ಮುಂದಿನ ಹಣಕಾಸು ವರ್ಷಕ್ಕೆ ಜಾರಿಗೆ ಬರಲಿವೆ. ಮೂಲಗಳ ಪ್ರಕಾರ, ಕಾರುಗಳು ಮತ್ತು ಲಘು ವಾಹನಗಳ ಟೋಲ್ ದರವು ರೂ. 5 ಹೆಚ್ಚಾಗುವ ನಿರೀಕ್ಷೆಯಿದೆ. ಭಾರೀ ವಾಹನಗಳ ಟೋಲ್ ದರವನ್ನು ಶೇಕಡಾ 10 ರಷ್ಟು ಹೆಚ್ಚಿಸುವ ಸಾಧ್ಯತೆಯಿದೆ.
ಪ್ರಸ್ತುತ ದರದ ಪ್ರಕಾರ, ಎಕ್ಸ್‌ಪ್ರೆಸ್‌ವೇಗಳಲ್ಲಿ ಟೋಲ್ ದರವನ್ನು ಪ್ರತಿ ಕಿಲೋಮೀಟರ್‌ಗೆ 2.19 ರೂ. ಏರಿಕೆಯಾಗುವ ಸಾಧ್ಯತೆಯಿದೆ. 2022-23ರಲ್ಲಿ ಟೋಲ್ ದರಗಳನ್ನು ಶೇಕಡಾ 10 ರಿಂದ 15 ರಷ್ಟು ಹೆಚ್ಚಿಸಲಾಗುತ್ತದೆ. ಪ್ರಸ್ತುತ ವರ್ಷದಲ್ಲಿ 33,881.22 ಕೋಟಿ ರೂಪಾಯಿ ಟೋಲ್ ಸಂಗ್ರಹವಾಗಿದೆ. ಹಿಂದಿನ ವರ್ಷಗಳಿಗೆ ಹೋಲಿಕೆ ಮಾಡಿದ್ರೆ ಶೇ 21ರಷ್ಟು ಹೆಚ್ಚಳವಾಗಿದೆ. 2018 ರಿಂದ ಇದುವರೆಗೆ ದೇಶದಲ್ಲಿ ಒಟ್ಟು ಬರೋಬ್ಬರಿ ಒಂದೂವರೆ ಲಕ್ಷ ಕೋಟಿ ಟೋಲ್ ತೆರಿಗೆ ಸಂಗ್ರಹಿಸಲಾಗಿದೆ. ಫಾಸ್ಟ್ಯಾಗ್ ವ್ಯವಸ್ಥೆ ಜಾರಿಗೆ ಬಂದ ನಂತರ ಟೋಲ್ ಸಂಗ್ರಹ ಗಣನೀಯವಾಗಿ ಹೆಚ್ಚಿದೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ನೀಡಿರುವ ಮಾಹಿತಿಯ ಪ್ರಕಾರ ರಾಷ್ಟ್ರೀಯ ಹೆದ್ದಾರಿಗಳು ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಫಾಸ್ಟ್ಯಾಗ್ ಮೂಲಕ ಪ್ರತಿದಿನ ಸರಾಸರಿ 140 ಕೋಟಿ ರೂಪಾಯಿ ಸಂಗ್ರಹವಾಗುತ್ತಿದೆ.
ಮಾಸಿಕ ಟೋಲ್ ಪಾಸ್
ಇನ್ನು ಸ್ಥಳೀಯರ ನೆರವಿಗಾಗಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ದಿ ಪ್ರಾಧಿಕಾರವು ಮಾಸಿಕ ಟೋಲ್ ಪಾಸ್ ವಿತರಣೆ ಮಾಡುತ್ತಿದೆ. ಯಾವುದೇ ಟೋಲ್ ಪ್ಲಾಜಾದಿಂದ 20 ಕಿಮೀ ವ್ಯಾಪ್ತಿಯಲ್ಲಿ ವಾಸಿಸುವ ವಾಣಿಜ್ಯೇತರ ವಾಹನ ಚಾಲಕರಿಗೆ ಮಾಸಿಕ ಪಾಸ್ ನೀಡಲಾಗುತ್ತದೆ. ಈ ಪಾಸ್‌ಗಳಿಗೆ ಪ್ರಸ್ತುತ ತಿಂಗಳಿಗೆ 315 ರೂಪಾಯಿ ಹಣವನ್ನು ಪಡೆಯಲಾಗುತ್ತಿದೆ. ಇದೀಗ ಮಾಸಿಕ ಪಾಸುಗಳ ದರದಲ್ಲಿಯೂ ಶೇ.10ಕ್ಕಿಂತ ಹೆಚ್ಚು ಮಾಡಲು ಕೇಂದ್ರ ಸರ್ಕಾರ ಸಿದ್ಧವಿದೆ.
ಇದನ್ನೂ ಓದಿ : 2100 ರ ವೇಳೆಗೆ ಸಮುದ್ರ ಮಟ್ಟದಲ್ಲಿ ಏರಿಕೆ: ಅಪಾಯದಲ್ಲಿವೇ ಈ 2 ಭಾರತೀಯ ನಗರಗಳು
ಇದನ್ನೂ ಓದಿ : Modi’s arrival in Karnataka: ಮಾರ್ಚ್ 12 ರಂದು ಮತ್ತೆ ಧಾರವಾಡಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮನ