ನವದೆಹಲಿ: Rozgar Mela: ದೇಶದ 10 ಲಕ್ಷ ಮಂದಿಗೆ ಉದ್ಯೋಗ ಕಲ್ಪಿಸುವ ರೋಜ್‍ಗಾರ್ ಮೇಳಕ್ಕೆ ಪ್ರಧಾನಿ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಲಿದ್ದಾರೆ. ಅಕ್ಟೋಬರ್ 22ರಿಂದ ಈ ಬೃಹತ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ. ಈ ಬಗ್ಗೆ ಪ್ರಧಾನಿ ಅವರ ಕಾರ್ಯಾಲಯ ಅಧಿಕೃತವಾಗಿ ಮಾಹಿತಿ ನೀಡಿದೆ.ಉದ್ಘಾಟನಾ ಕಾರ್ಯಕ್ರಮದ ವೇಳೆ ಹೊಸದಾಗಿ ಕೆಲಸಕ್ಕೆ ನೇಮಕಗೊಂಡಿರುವ ಸುಮಾರು 75 ಸಾವಿರ ಮಂದಿಗೆ ನೇಮಕಾತಿ ಪತ್ರವನ್ನು ವಿತರಣೆ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ಮೋದಿ ಅವರು ಜನತೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ.
ಪ್ರಧಾನಿ ಮೋದಿ ಸೂಚನೆ ಮೇರೆಗೆ ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳು ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುತ್ತಿವೆ. ಕೆಲವು ತಿಂಗಳುಗಳ ಹಿಂದೆಯೇ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುವಂತೆ ಪ್ರಧಾನಿ ನಿರ್ದೇಶನ ನೀಡಿದ್ದರು.
ಕೇಂದ್ರ ಸರ್ಕಾರದ 39 ಇಲಾಖೆ/ಸಚಿವಾಲಯಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ದೇಶಾದ್ಯಂತದ ಜನರು ಸೇರ್ಪಡೆಗೊಳ್ಳಲಿದ್ದಾರೆ. ಗ್ರೂಪ್ ಎ, ಗ್ರೂಪ್ ಬಿ (ಗೆಜೆಟೆಡ್), ಗ್ರೂಪ್ ಬಿ(ನಾನ್ ಗೆಜೆಟೆಡ್) ಮತ್ತು ಗ್ರೂಪ್ ಸಿ ಕೆಟಗರಿಯಲ್ಲಿ ನೇಮಕಾತಿ ಪ್ರಕ್ರಿಯೆ ನಡೆಯಲಿದೆ. ಕೇಂದ್ರ ಸಶಸ್ತ್ರ ಪಡೆ ಸಿಬ್ಬಂದಿ, ಸಬ್ ಇನ್ಸ್‍ಪೆಕ್ಟರ್, ಕಾನ್‍ಸ್ಟೇಬಲ್, ಎಲ್‍ಡಿಸಿ, ಸ್ಟೆನೋ, ಪಿಎ, ಆದಾಯ ತೆರಿಗೆ ಇನ್ಸ್‍ಪೆಕ್ಟರ್‍ಗಳು ಮತ್ತು ಎಂಟಿಎಸ್ ಕೂಡಾ ನೇಮಕಗೊಳ್ಳುತ್ತಿರುವ ಹುದ್ದೆಗಳಲ್ಲಿ ಸೇರ್ಪಡೆಗೊಂಡಿದೆ.
‘ಯುವಕರಿಗೆ ಉದ್ಯೋಗ ನೀಡುವುದರ ಜೊತೆಗೆ ನಾಗರಿಕರ ಕಲ್ಯಾಣವನ್ನು ಖಾತ್ರಿಪಡಿಸುವ ನಿಟ್ಟಿನಲ್ಲಿ ಇದು ಪೂರಕ ಕಾರ್ಯಕ್ರಮವಾಗಿದೆ. ಪ್ರಧಾನಿ ಮೋದಿ ಆದೇಶದ ಮೇರೆಗೆ ಈ ನೇಮಕಾತಿ ಪ್ರಕ್ರಿಯೆ ನಡೆಯಲಿದೆ ಎಂದು ಪ್ರಧಾನಿ ಕಾರ್ಯಾಲಯ ತಿಳಿಸಿದೆ.
ನೇಮಕಾತಿ ಪ್ರಕ್ರಿಯಗಳಲ್ಲಿ ಕೆಲವೊಂದನ್ನು ಸಚಿವಾಲಯಗಳು, ಇಲಾಖೆಗಳು ಖುದ್ದು ಮಾಡಿಕೊಳ್ಳಲಿದೆ. ಇನ್ನು ಕೆಲವೊಂದನ್ನು ಯುಪಿಎಸ್‍ಸಿ, ಎಸ್‍ಎಸ್‍ಸಿ, ರೈಲ್ವೆ ನೇಮಕಾತಿ ಮಂಡಳಿಯಂಥ ನೇಮಕಾತಿ ಏಜೆನ್ಸಿಗಳ ಮೂಲಕ ಮಾಡಿಕೊಳ್ಳಲಿವೆ ಎಂದು ಪ್ರಧಾನಿ ಕಾರ್ಯಾಲಯ ಹೇಳಿದೆ.
ದೇಶದಲ್ಲಿನ ನಿರುದ್ಯೋಗ ಸಮಸ್ಯೆಯನ್ನೇ ಅಸ್ತ್ರವಾಗಿಟ್ಟುಕೊಂಡು ಪ್ರತಿಪಕ್ಷಗಳು ಮೋದಿ ಸರ್ಕಾರದ ವಿರುದ್ಧ ಕಿಡಿಕಾರುತ್ತಿವೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದ ಬಳಿಕ ನಿರುದ್ಯೋಗ ಸಮಸ್ಯೆ ತಲೆಎತ್ತಿದ್ದು, ಬಡವರ ಜೀವನ ದುಸ್ತರವಾಗಿದೆ. ನಿರುದ್ಯೋಗ ಸಮಸ್ಯೆ ಹೋಗಲಾಡಿಸುವತ್ತ ಬಿಜೆಪಿ ಏನೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ವಿಪಕ್ಷಗಳು ಟೀಕೆ ಮಾಡುತ್ತಿವೆ. ಇವೆಲ್ಲದರ ನಡುವೆಯೇ ಅ.22ರಂದು ಪ್ರಧಾನಿ ಬೃಹತ್ ಉದ್ಯೋಗ ಮೇಳಕ್ಕೆ ಚಾಲನೆ ನೀಡಲಿದ್ದಾರೆ.
ಇದನ್ನೂ ಓದಿ: Rishi Sunak PM : ಬ್ರಿಟನ್ ಪ್ರಧಾನಿ ಸ್ಥಾನಕ್ಕೆ ಲಿಜ್ ಟ್ರುಸ್ ರಾಜೀನಾಮೆ: ರಿಷಿ ಸುನಕ್‍ಗೆ ಒಲಿಯುತ್ತಾ ಪಟ್ಟ..?
ಇದನ್ನೂ ಓದಿ: Jewelries : ಹಬ್ಬಗಳಲ್ಲಿ ವಿಶೇಷವಾಗಿ ಕಾಣಿಸಲು ಒಕ್ಸಿಡೈಸ್ಡ್ ಆಭರಣಗಳೇ ಬೆಸ್ಟ್..
Prime Minister Modi to inaugrate Rozgar Mela on Oct 22nd