ನವದೆಹಲಿ : ಸಾಗರ್ ರಾಣಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತದ ಖ್ಯಾತ ಕುಸ್ತಿಪಟು ಸುಶೀಲ್ ಕುಮಾರ್ ಅವರನ್ನು ದೆಹಲಿಯ ವಿಶೇಷ ಪೊಲೀಸರು ಬಂಧಿಸಿದ್ದಾರೆ.
ದೆಹಲಿಯ ಛತ್ರಾಸಲ್ ಕ್ರೀಡಾಂಗಣದಲ್ಲಿ ಮೇ 4 ರಂದು ಸಾಗರ್ ರಾಣಾ ಕೊಲೆಯಾಗಿದ್ದರು. ಸುಶೀಲ್ ಹಾಗೂ ಸಾಗರ್ ನಡುವಣ ಘರ್ಷಣೆ ನಡೆದಿತ್ತು. ಖ್ಯಾತ ಜೂನಿಯರ್ ಕುಸ್ತಿ ಪಟು ಸಾಗರ್ ರಾಣಾ ಅವರನ್ನು ಸುಶೀಲ್ ಕುಮಾರ್ ಹಾಗೂ ಇತರ ಸಹಚರರು ಸೇರಿಕೊಂಡು ಹತ್ಯೆ ಮಾಡಿದ್ದಾರೆಂಬ ಆರೋಪ ಕೇಳಿಬಂದಿತ್ತು. ಘಟನೆಯ ಬೆನ್ನಲ್ಲೇ ಆರೋಪಿಗಳು ತಲೆ ಮರೆಯಿಸಿಕೊಂಡಿದ್ದರು. ನ್ಯಾಯಾಲಯ ಸುಶೀಲ್ ಕುಮಾರ್ ಅವರು ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾ ಮಾಡಿತ್ತು. ಅಲ್ಲದೇ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿತ್ತು. ಇದರ ಬೆನ್ನಲ್ಲೇ ಸುಶೀಲ್ ಕುಮಾರ್ ತಲೆ ಮರೆಯಿಸಿಕೊಂಡಿದ್ದರು.
ದೆಹಲಿ ಪೊಲೀಸರು ಸುಶೀಲ್ ಕುಮಾರ್ ಅವರ ಬಗ್ಗೆ ಸುಳಿವು ನೀಡಿದವರಿಗೆ 1 ಲಕ್ಷ ಹಾಗೂ ಸಹಚರರ ಬಗ್ಗೆ ಸುಳಿವು ನೀಡಿದವರಿಗೆ 50 ಸಾವಿರ ರೂಪಾಯಿ ಬಹುಮಾನ ಘೋಷಣೆ ಮಾಡಿತ್ತು. ನಿನ್ನೆಸುಶೀಲ್ ಕುಮಾರ್ ಅವರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆನ್ನುವ ಸುದ್ದಿ ಹರಿದಾಡಿತ್ತು. ಆದ್ರೆ ದೆಹಲಿ ಪೊಲೀಸರು ಬಂಧನವಾಗಿಲ್ಲ ಎಂದು ಸ್ಪಷ್ಟನೆಯನ್ನು ನೀಡಿದ್ದರು. ಆದ್ರೀಗ ದೆಹಲಿ ಪೊಲೀಸ್ ಇಲಾಖೆಯ ವಿಶೇಷ ಸೆಲ್ ಅಧಿಕಾರಿಗಳ ತಂಡ ಸುಶೀಲ್ ಕುಮಾರ್ ಅವರನ್ನು ಬಂಧಿಸಿದೆ.
ಇನ್ಸ್‌ಪೆಕ್ಟರ್ ಶಿವಕುಮಾರ್, ಇನ್ಸ್‌ಪೆಕ್ಟರ್ ಕರಂಬೀರ್ ನೇತೃತ್ವದ ವಿಶೇಷ ಸೆಲ್ ಎಸ್‌ಆರ್ ತಂಡ ಮತ್ತು ಎಸಿಪಿ ಅತ್ತಾರ್ ಸಿಂಗ್ ಅವರ ನೇತೃತ್ವದ ತಂಡ ದೆಹಲಿಯ ಮುಂಡ್ಕಾ ಪ್ರದೇಶದಲ್ಲಿ ಸುಶೀಲ್ ಕುಮಾರ್ ಮತ್ತು ಅಜಯ್ ಅವರನ್ನು ಬಂಧಿಸಲಾಗಿದೆ. ಸುಶೀಲ್ ಕುಮಾರ್ ಬಂಧನವನ್ನು ದೆಹಲಿ ಪೊಲೀಸರು ಕೂಡ ಖಚಿತ ಪಡಿಸಿದ್ದಾರೆ.