ರಾಮನಗರ : ಹೆತ್ತು ಹೊತ್ತು ಕೂಲಿ ಮಾಡಿ ಮಗನಿಗೆ ಉತ್ತಮ ವಿದ್ಯಾಭ್ಯಾಸವನ್ನು ಕೊಡಿಸಿದ್ರು. ಆದ್ರೆ ಸರಕಾರಿ ಹುದ್ದೆ, ಕೈ ತುಂಬಾ ಸಂಬಳ ಬರುತ್ತಿದ್ದಂತೆಯೇ ಮಗ ಆಸ್ತಿಗಾಗಿ ತಂದೆಯನ್ನೇ ಮನೆಯಿಂದ ಹೊರದಬ್ಬಿದ್ದಾನೆ. ಮಗನ ಅಮಾನವೀಯ ಕೃತ್ಯ ಇದೀಗ ಮೊಬೈಲ್ ನಲ್ಲಿ ಸೆರೆಯಾಗಿದೆ.
ರಾನಗರ ಜಿಲ್ಲೆಯ ಸಿಂಗ್ರಬೋವಿದೊಡ್ಡಿ ಗ್ರಾಮದ ನಿವಾಸಿಯಾಗಿರುವ ತಿಮ್ಮಯ್ಯ ಎಂಬವರೇ ಮಗನಿಂದ ಹಿಂಸೆಗೆ ಒಳಗಾದವರು. ಮಗ ಕುಮಾರ್ ಕೆಎಸ್‌ಆರ್‌ಟಿಸಿಯಲ್ಲಿ ಉದ್ಯೋಗದಲ್ಲಿದ್ದಾನೆ. ತಂದೆ ಇರುವ ಮನೆಯನ್ನು ತನ್ನ ಹೆಸರಿಗೆ ಮಾಡಿಕೊಡುವಂತೆ ಕುಮಾರ ತಂದೆಯ ಬಳಿ ಕೇಳಿದ್ದಾನೆ. ಇದಕ್ಕೆ ತಿಮ್ಮಯ್ಯ ನಿರಾಕರಿಸಿದ್ದಾರೆ. ಇದಕ್ಕೆ ಕೆರಳಿದ ಕುಮಾರ್ ತನ್ನ ತಂದೆಯೇ ಮೇಲೆ ಹಲ್ಲೆಯನ್ನು ನಡೆಸಿ, ಮನೆಯಿಂದ ಹೊರಗೆ ಎಸೆದಿದ್ದಾನೆ.
ತಿಮ್ಮಯ್ಯಗೆ ಒಟ್ಟು ಮೂರು ಮಂದಿ ಗಂಡು ಮಕ್ಕಳು. ಇಬ್ಬರು ಬೇರೆ ಕಡೆಯಲ್ಲಿ ವಾಸವಾಗಿದ್ದಾರೆ. ಕುಮಾರ ತಂದೆಯೇ ಜೊತೆಗೆ ಉಳಿದುಕೊಂಡಿದ್ದು, ತಂದೆ ಹೆಸರಲ್ಲಿರುವ ಮನೆಯನ್ನು ತನ್ನ ಹೆಸರಿಗೆ ಬರೆದುಕೊಡುವಂತೆ ಪದೇ ಪದೇ ಪೀಡಿಸುತ್ತಿದ್ದ. ಅಲ್ಲದೇ ನಿತ್ಯವೂ ಮನೆಗೆ ಬಂದು ಹಲ್ಲೆ ನಡೆಸುತ್ತಿದ್ದ. ಈ ಕುರಿತು ಪೊಲೀಸರಿಗೆ ದೂರು ನೀಡಿದ್ರೂ ಯಾವುದೇ ಪ್ರಯೋಜನವಾಗಲಿಲ್ಲ.
ಇದೀಗ ಕುಮಾರ ತನ್ನ ತಂದೆ ಮೇಲೆ ನಡೆಸಿರೋ ಹಲ್ಲೆಯನ್ನ ಸ್ಥಳೀಯರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ. ಘಟನೆಯ ಕುರಿತು ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ಕೂಡ ಸೂಕ್ತಕ್ರಮಕೈಗೊಂಡು ನ್ಯಾಯ ಒದಗಿಸುವುದಾಗಿ ಭರವಸೆ ನೀಡಿದ್ದಾರೆ. ಒಟ್ಟಿನಲ್ಲಿ ಪಾಪಿ ಮಗನ ಕೃತ್ಯಕ್ಕೆ ಜನರು ಹಿಡಿಶಾಪ ಹಾಕುತ್ತಿದ್ದಾರೆ.