Tirupathi Laddu Scam; ನವದೆಹಲಿ: ಆಂಧ್ರಪ್ರದೇಶದ ತಿರುಮಲ ತಿರುಪತಿ ದೇವಸ್ಥಾನದಲ್ಲಿ ಲಡ್ಡು ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬು ಬಳಸಲಾಗಿತ್ತು ಎಂಬ ವಿವಾದಕ್ಕೆ ಸಂಬಂಧಿಸಿದಂತೆ ತನಿಖೆಗಾಗಿ ಸ್ವತಂತ್ರ ವಿಶೇಷ ತನಿಖಾ ತಂಡ ರಚನೆ ಮಾಡಲು ಸುಪ್ರೀಂಕೋರ್ಟ್ ಇಂದು ಆದೇಶಿಸಿದೆ.
ತಿರುಪತಿ ಲಡ್ಡು ವಿವಾದ ಕುರಿತಾದ ಅರ್ಜಿಯ ವಿಚಾರಣೆಯು ಇಂದು ಸುಪ್ರೀಂ ಕೋರ್ಟ್ (Supreme Court) ನಲ್ಲಿ ಜಸ್ಟೀಸ್ ಬಿ.ಆರ್. ಗವಾಯಿ ಮತ್ತು ಜಸ್ಟೀಸ್ ಕೆ.ವಿ. ವಿಶ್ವನಾಥನ್ ಅವರ ಪೀಠದಲ್ಲಿ ನಡೆಯಿತು.
ವಿಚಾರಣೆ ಬಳಿಕ ಪ್ರಕರಣ ಸಂಬಂಧ ತನಿಖೆಗೆ ಸ್ವತಂತ್ರ ವಿಶೇಷ ತನಿಖಾ ತಂಡ ರಚಿಸಲು ಸುಪ್ರೀಂ ಕೋರ್ಟ್ ಆದೇಶಿಸಿದ್ದು, ಸಿಬಿಐ, ಆಂಧ್ರ ಪ್ರದೇಶ ರಾಜ್ಯ ಪೊಲೀಸ್ ಮತ್ತು ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳನ್ನು ಒಳಗೊಂಡಿರುವ ಐದು ಸದಸ್ಯರ ಸ್ವತಂತ್ರ ವಿಶೇಷ ತನಿಖಾ ತಂಡ ರಚಿಸಲು ನಿರ್ದೇಶನ ನೀಡಿದೆ.

Image Credit to Original Source
ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಸಿಬಿಐ ನಿರ್ದೇಶಕರ ನೇತೃತ್ವದಲ್ಲಿ ಇಬ್ಬರು ಸಿಬಿಐ ಅಧಿಕಾರಿಗಳು, ಇಬ್ಬರು ಆಂಧ್ರಪ್ರದೇಶ ರಾಜ್ಯದ ಪೊಲೀಸ್ ಅಧಿಕಾರಿಗಳು ಮತ್ತು ಆಹಾರ ಸುರಕ್ಷತಾ ಇಲಾಖೆಯ ಓರ್ವ ಅಧಿಕಾರಿಯನ್ನು ಒಳಗೊಂಡ ವಿಶೇಷ ತನಿಖಾ ತಂಡ ರಚನೆಯಾಗಬೇಕಿದೆ.
ಈ ಮೊದಲು ಲಡ್ಡು ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬು ಬಳಲಾಗಿದೆ ಎಂಬುದು ಬಯಲಿಗೆ ಬಂದ ಬಳಿಕ ಪ್ರಕರಣ ಕುರಿತು ತನಿಖೆಗೆ ಆಂಧ್ರ ಪ್ರದೇಶ ಸರ್ಕಾರ ಎಸ್ ಐಟಿ ರಚನೆ ಮಾಡಿತ್ತು. ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಗುಂಟೂರು ವಲಯದ ಐಜಿಪಿ ನೇತೃತ್ವದಲ್ಲಿ ಒಂಬತ್ತು ಸದಸ್ಯರ ಎಸ್‌ಐಟಿಯನ್ನು ರಚಿಸಿದ್ದರು.

Image Credit to Original Source
ಕಲಬೆರಕೆ ತುಪ್ಪ ಸರಬರಾಜು ಮಾಡಿದ ಆರೋಪದ ಮೇಲೆ ಎಆರ್ ಡೈರಿ ವಿರುದ್ಧ ತಿರುಪತಿಯ ವೆಂಕಟೇಶ್ವರ ದೇವಸ್ಥಾನದ ಆಡಳಿತ ಮಂಡಳಿ ತಿರುಪತಿ ಪೂರ್ವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿತ್ತು. ಈ ದೂರಿನ ಅನ್ವಯ ಆಂಧ್ರ ಪ್ರದೇಶ ಎಸ್ ಐಟಿ ಪ್ರಕರಣವನ್ನು ತನಿಖೆಗೆ ಕೈಗೆತ್ತಿಕೊಂಡಿತ್ತು.
ಅನಂತರ ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತಿದ ಬಳಿಕ ಆಂಧ್ರಪ್ರದೇಶ ಎಸ್ ಐಟಿ ತನಿಖೆಯನ್ನು ಕಳೆದ ಮಂಗಳವಾರ ಅಕ್ಟೋಬರ್ 3ರವರೆಗೆ ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ಸ್ಥಗಿತಗೊಳಿಸಿರುವುದಾಗಿ ಆಂಧ್ರಪ್ರದೇಶ ಪೊಲೀಸ್ ಮಹಾ ನಿರ್ದೇಶಕ ದ್ವಾರಕಾ ತಿರುಮಲ ರಾವ್ ತಿಳಿಸಿದ್ದು, ಸುಪ್ರೀಂ ಕೋರ್ಟ್ ನಿರ್ದೇಶನದ ಬಳಿಕ ತನಿಖೆ ಮುಂದುವರಿಯಲಿದೆ ಎಂದು ಹೇಳಿದ್ದರು