ಉಡುಪಿ : ಕೃಷ್ಣನಗರಿ ಉಡುಪಿಯಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿದ್ದಂತೆಯೇ ಕರಾವಳಿಗರು ಆತಂಕಕ್ಕೆ ಒಳಗಾಗಿದ್ರು. ರಾಜ್ಯದಲ್ಲಿಯೇ ಅತೀ ಹೆಚ್ಚು ಕೊರೊನಾ ಸೋಂಕಿತರನ್ನು ಹೊಂದಿರುವ ಜಿಲ್ಲೆ ಅನ್ನೋ ಅಪಖ್ಯಾತಿಗೂ ಪಾತ್ರವಾಗಿತ್ತು. ಆದ್ರೀಗ ಜಿಲ್ಲೆಯ ಜನತೆ ಖುಷಿ ಪಡುವ ಸುದ್ದಿಯೊಂದು ಹೊರಬಿದ್ದಿದ್ದು, ಕೊರೊನಾ ಸೋಂಕಿನಿಂದ ಗುಣಮುಖರಾದವರ ಪಟ್ಟಿಯಲ್ಲಿಯೂ ಉಡುಪಿ ಜಿಲ್ಲೆ ಅಗ್ರಸ್ಥಾನಕ್ಕೇರಿದೆ.

ರಾಜ್ಯಕ್ಕೆ ಕೊರೊನಾ ಹೆಮ್ಮಾರಿ ಕಾಲಿಡುತ್ತಿದ್ದಂತೆಯೇ ಜಿಲ್ಲೆಯಲ್ಲಿ ಮೂವರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಆದರೆ ಜಿಲ್ಲಾಡಳಿತ ಮೂವರಿಗೆ ಚಿಕಿತ್ಸೆಯನ್ನು ಕೊಡಿಸಿ ಗುಣಮುಖರನ್ನಾಗಿಸಿತ್ತು. ತದನಂತರದಲ್ಲಿ 40 ದಿನಗಳ ಕಾಲ ಜಿಲ್ಲೆಯಲ್ಲಿ ಯಾವುದೇ ಕೊರೊನಾ ಪ್ರಕರಣಗಳು ದಾಖಲಾಗದೆ ಉಡುಪಿ ಜಿಲ್ಲೆ ಗ್ರೀನ್ ಝೋನ್ ವ್ಯಾಪ್ತಿಗೆ ಒಳಪಟ್ಟಿತ್ತು. ಆದರೆ ಮುಂಬೈ ನಿವಾಸಿಗಳು ತವರಿಗೆ ಮರಳುತ್ತಿದ್ದಂತೆಯೇ ಕೊರೊನಾ ವೈರಸ್ ಸೋಂಕು ವ್ಯಾಪಕವಾಗಿ ಹರಡುವುದಕ್ಕೆ ಶುರುವಾಗಿತ್ತು. ಕೇವಲ ಮುಂಬೈ ನಿವಾಸಿಗಳಿಗೆ ಮಾತ್ರವಲ್ಲ ಕ್ವಾರಂಟೈನ್ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪೊಲೀಸರಿಗೂ ಕೊರೊನಾ ವ್ಯಾಪಿಸಿತ್ತು. ನಿತ್ಯವೂ ಸೋಂಕಿತರ ಸಂಖ್ಯೆಯಲ್ಲಿ ಶತಕ, ದ್ವಿಶತಕ ಹಾಗೂ ತ್ರಿಶತಕವನ್ನೂ ಬಾರಿಸಿ, ಸೋಂಕಿತರ ಸಂಖ್ಯೆ ಬರೋಬ್ಬರಿ 1039ಕ್ಕೆ ಏರಿಕೆಯನ್ನು ಕಂಡಿತ್ತು.

ನಿತ್ಯವೂ ಕೊರೊನಾ ಸೋಂಕು ಹೆಮ್ಮಾರಿಯಂತೆ ವ್ಯಾಪಿಸುತ್ತಿರುವುದು ಜಿಲ್ಲೆಯ ಜನರಿಗೆ ಮಾತ್ರವಲ್ಲ ಜಿಲ್ಲಾಡಳಿತಕ್ಕೂ ಆತಂಕವನ್ನು ತಂದೊಡ್ಡಿತ್ತು. ಜಿಲ್ಲೆಯಲ್ಲಿ 550ಕ್ಕೂ ಅಧಿಕ ಪ್ರದೇಶಗಳನ್ನು ಸೀಲ್ ಡೌನ್ ಮಾಡಲಾಗಿತ್ತು. ಕುಂದಾಪುರ, ಬೈಂದೂರು, ಉಡುಪಿ, ಕಾರ್ಕಳ ತಾಲೂಕುಗಳಲ್ಲಿ ಕೋವಿಡ್ ಆಸ್ಪತ್ರೆಯನ್ನು ತೆರೆಯಲಾಗಿದ್ದು, ಖಾಸಗಿ ಆಸ್ಪತ್ರೆಗಳನ್ನೂ ಕೊರೊನಾ ಚಿಕಿತ್ಸೆ ಬಳಸಿಕೊಳ್ಳಲಾಗಿತ್ತು. ಆದ್ರೀಗ ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ ತುತ್ತಾಗಿದ್ದ ಶೇ.90ರಷ್ಟು ಜನರು ಗುಣಮುಖರಾಗಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ಒಟ್ಟು 1,039 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಇದುವರೆಗೆ 904 ಮಂದಿ ಕೊರೊನಾ ಸೋಂಕಿನಿಂದ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಉಳಿದಂತೆ 134 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಡುಪಿ ಜಿಲ್ಲೆ ಸೋಂಕಿತರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ, ಇದೀಗ ಗುಣಮುಖರಾದವರ ಸಂಖ್ಯೆಯಲ್ಲಿಯೂ ಅಗ್ರಸ್ಥಾನಕ್ಕೇರಿದೆ.

ಇದು ಜಿಲ್ಲಾಡಳಿತಕ್ಕೆ ಸಮಾಧಾನ ತಂದಿದ್ದು, ಜನತೆಗೆ ಖುಷಿಯಾಗಿದೆ. ಕೆಲವೇ ದಿನಗಳಲ್ಲಿ ಎಲ್ಲಾ ಸೋಂಕಿತರು ಗುಣಮುಖರಾಗುವ ಸಾಧ್ಯತೆಯಿದೆ. ಜಿಲ್ಲಾಡಳಿತ ಕೇವಲ ಒಂದೇ ತಿಂಗಳಲ್ಲಿ ಜಿಲ್ಲೆಯನ್ನು ಕೊರೊನಾ ಮುಕ್ತ ಮಾಡುವುದಾಗಿ ಹೇಳಿತ್ತು. ಹೇಳಿದಂತೆಯೇ ಜಿಲ್ಲಾಧಿಕಾರಿ ಜಿ.ಜಗದೀಶ್ ನಡೆದುಕೊಳ್ಳುತ್ತಿದ್ದಾರೆ.

ಒಟ್ಟಿನಲ್ಲಿ ಇಷ್ಟುದಿನ ಶೈಕ್ಷಣಿಕವಾಗಿ, ಆಡಳಿತಾತ್ಮಕವಾಗಿ ಅಗ್ರಸ್ಥಾನಕ್ಕೇರುತ್ತಿದ್ದ ಉಡುಪಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿಯೂ ಅಗ್ರಸ್ಥಾನಕ್ಕೇರಿತ್ತು. ಇದರಿಂದಾಗಿ ಸಾಮಾಜಿಕ ಜಾಲತಾಣಗಳಲ್ಲಿಯೂ ಬಾರೀ ಟ್ರೋಲ್ ಆಗಿತ್ತು. ಇದೀಗ ಜಿಲ್ಲಾಡಳಿತ ಗುಣಮುಖರಾದವರಲ್ಲಿಯೂ ಅಗ್ರಸ್ಥಾನವನ್ನು ಕಾಯ್ದುಕೊಂಡು, ಇತರ ಜಿಲ್ಲೆಗಳಿಗೆ ಮಾದರಿಯಾಗಿ ನಿಂತಿದೆ.