ಕೇರಳ : ಕೊರೊನಾ ವೈರಸ್ ಸೋಂಕು ಇನ್ನಿಲ್ಲದಂತೆ ಕಾಡುತ್ತಿದೆ. ಸಾಲದಕ್ಕೆ ಡೆಲ್ಟಾ ಫ್ಲಸ್ ಪ್ರಕರಣ ಪತ್ತೆಯಾಗುತ್ತಿದೆ. ಈ ನಡುವಲ್ಲೇ ಗರ್ಭಿಣಿ ಮಹಿಳೆಯಲ್ಲಿ ಝಿಕಾ ವೈರಸ್ ದೃಢಪಟ್ಟಿರೋದು ಆತಂಕಕ್ಕೆ ಕಾರಣವಾಗಿದೆ. ಅದ್ರಲ್ಲೂ ಸೊಳ್ಳೆಯಿಂದ ಈ ವೈರಸ್ ಹರಡುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಕೇರಳದಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದೆ.

ಕೇರಳ ರಾಜ್ಯದ ತಿರುವನಂತಪುರ ಜಿಲ್ಲೆಯ ಖಾಸಗಿ ಆಸ್ಪತ್ರೆಗೆ ದಾಖಲಾಗಿರುವ 24 ವರ್ಷದ ಗರ್ಭಿಣಿಯಲ್ಲಿ ಝಿಕಾ ವೈರಸ್ ಪತ್ತೆಯಾಗಿದೆ. ಜೂನ್ 28ರಂದು ಈ ಮಹಿಳೆಗೆ ಜ್ವರ, ತಲೆನೋವು ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಗರ್ಭಿಣಿ ಮಹಿಳೆಯನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ವೇಳೆಯಲ್ಲಿ ಮಹಿಳೆಗೆ ಝಿಕಾ ವೈರಸ್ ಸೋಂಕು ಇರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ವೈದ್ಯರು ಖಚಿತ ಪಡಿಸಿಕೊಳ್ಳುವ ಸಲುವಾಗಿ ಸ್ಯಾಂಪಲ್ ನ್ನು ಪುಣೆಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ ಗೆ ಕಳಿಸಿದ್ದರು. ಇದೀಗ ಪ್ರಯೋಗಾಲಯ ದಿಂದ ಬಂದ ವರದಿಯಲ್ಲಿ ಮಹಿಳೆಗೆ ಝಿಕಾ ಇರೋದು ದೃಢಪಟ್ಟಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ.

ಝಿಕಾ ವೈರಸ್ ಸೋಂಕಿತ ಮಹಿಳೆ ಜುಲೈ 7ರಂದು ಗಂಡು ಮಗುವಿಗೆ ಜನ್ಮ ನೀಡಿದ್ದು, ಆರೋಗ್ಯವಾಗಿದ್ದಾರೆ. ಮಹಿಳೆ ಯಾವುದೇ ಟ್ರಾವೆಲ್ ಹಿಸ್ಟರಿಯನ್ನು ಹೊಂದಿಲ್ಲ. ಅಲ್ಲದೇ ಮಹಿಳೆಯ ತಾಯಿಗೂ ಒಂದು ವಾರದ ಹಿಂದೆ ಝಿಕಾ ವೈರಸ್ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿತ್ತು. ಮಹಿಳೆಗೆ ಝಿಕಾ ವೈರಸ್ ಪತ್ತೆಯಾದ ಬೆನ್ನಲ್ಲೇ ಸೋಂಕಿನ ಲಕ್ಷಣ ಇರುವ ತಿರುವನಂತಪುರಂ ಜಿಲ್ಲೆಯ 19 ಜನರ ಸ್ಯಾಂಪಲ್ ಕೂಡಾ ಪುಣೆ ಎನ್‌ಐವಿಗೆ ರವಾನೆಯಾಗಿದೆ. ಈ ಪೈಕಿ ಕನಿಷ್ಟ 13 ಮಂದಿಯ ವರದಿ ಪಾಸಿಟಿವ್ ಬರುವ ಸಾಧ್ಯತೆಯಿದೆ.

ಸಾಮಾನ್ಯ ಜ್ವರದ ಲಕ್ಷಣಗಳೇ ಝಿಕಾ ವೈರಸ್ ಸೋಂಕಿನಲ್ಲಿಯೂ ಕಾಣಿಸಿಕೊಳ್ಳುತ್ತದೆ. ಜ್ವರ, ತಲೆನೋವು, ಕೀಲು ನೋವು, ಸ್ನಾಯು ಸೆಳೆತ ಸೇರಿದಂತೆ ಹಲವು ಲಕ್ಷಣಗಳನ್ನು ತೋರಿಸುತ್ತದೆ. ಸೊಳ್ಳೆ ಕಚ್ಚಿದ ಕೂಡಲೇ ಲಕ್ಷಣ ತೋರಿಸುವುದಿಲ್ಲ. ಸಾಮಾನ್ಯವಾಗಿ ಮೂರು ದಿನಗಳ ನಂತರವೇ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ. ಆದ್ರೆ ನಿರ್ಲಕ್ಷ್ಯವಹಿಸಿದ್ರೆ ಸಾವನ್ನು ತರುವಷ್ಟು ಈ ವೈರಸ್ ಅಪಾಯಕಾರಿ. ಝಿಕಾ ವೈರಸ್ ಸೋಂಕಿಗೆ ತುತ್ತಾಗುವವರಿಗೆ ನಿಖರವಾದ ಔಷಧವಿಲ್ಲ. ಲಕ್ಷಣಗಳು ಕಾಣಿಸಿಕೊಂಡ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು. ಅಲ್ಲದೇ ಸೊಳ್ಳೆ ಕಡಿತದಿಂದ ಸಾಧ್ಯವಾದಷ್ಟು ತಪ್ಪಿಸಿಕೊಳ್ಳಬೇಕು.

ಝಿಕಾ ವೈರಸ್ 1947ರಲ್ಲಿ ಮೊದಲ ಬಾರಿಗೆ ಉಗಾಂಡದಲ್ಲಿ ಪತ್ತೆಯಾಗಿತ್ತು. ಆರಂಭದಲ್ಲಿ ಕೋತಿಯಲ್ಲಿ ಕಾಣಿಸಿಕೊಂಡಿದ್ದ ವೈರಸ್ ಕ್ರಮೇಣ ಮನುಷ್ಯನಲ್ಲಿ ಪತ್ತೆಯಾಗಿದೆ. ಫೆಸಿಫಿಕ್ ಯಾಪ್ ದ್ವೀಪ, ಬ್ರೆಜಿಲ್ ಸಾಕಷ್ಟು ಅಪಾಯವನ್ನು ತಂದೊಡ್ಡಿದೆ. ಅಲ್ಲದೇ 2017ರಲ್ಲಿ ಭಾರತದಲ್ಲಿ ಮೊದಲ ಬಾರಿಗೆ ಝಿಕಾ ವೈರಸ್ ಪತ್ತೆಯಾಗಿತ್ತು. ಗುಜರಾತ್ ರಾಜ್ಯದ ಅಹಮದಾಬಾದ್ ಜಿಲ್ಲೆಯ ಬಾಪೂನಗರದಲ್ಲಿ ತಮಿಳುನಾಡಿನ ಕೃಷ್ಣಗಿರಿಯಲ್ಲಿಯೂ ಜಿಲ್ಲೆಗಳಲ್ಲಿ ಝಿಕಾ ವೈರಸ್ ಪ್ರಕರಣ ಪತ್ತೆಯಾಗಿದ್ರೆ, 2018ರಲ್ಲಿ ರಾಜಸ್ಥಾನ ಜೈಪುರದಲ್ಲಿ ಬರೋಬ್ಬರಿ 80 ಮಂದಿಗೆ ಝಿಕಾ ವೈರಸ್ ಬಾಧಿಸಿದೆ.

ಕೇರಳದಲ್ಲಿ ಒಂದೆಡೆ ಕೊರೊನಾ ವೈರಸ್ ಸೋಂಕು ನಿಯಂತ್ರಣಕ್ಕೆ ಬರುತ್ತಿಲ್ಲ. ಇನ್ನೊಂದೆಡೆ ಡೆಲ್ಟಾ ಫ್ಲಸ್ ಪ್ರಕರಣ ದಾಖಲಾಗುತ್ತಿದೆ. ಈ ನಡುವಲ್ಲೇ ಝಿಕಾ ವೈರಸ್ ಪತ್ತೆಯಾಗಿರೋದು ಆತಂಕಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿಯೇ ಕೇರಳ ಆರೋಗ್ಯ ಇಲಾಖೆ ಅಲರ್ಟ್ ಆಗಿದ್ದು, ರೋಗ ಲಕ್ಷಣ ಕಾಣಿಸಿಕೊಂಡವರ ಮಾದರಿಯನ್ನು ಸಂಗ್ರಹಿಸುವ ಕಾರ್ಯವನ್ನು ಮಾಡುತ್ತಿದೆ. ಅಲ್ಲದೇ ತಿರುವನಂತಪುರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಹೈಅಲರ್ಟ್ ಘೋಷಿಸಲಾಗಿದೆ.