HDK operated Drone: ಬೆಂಗಳೂರು: ಐಪಿಎಸ್ ಅಧಿಕಾರಿಯೊಂದಿಗಿನ ಸಂಘರ್ಷ, ಮುಖ್ಯಮಂತ್ರಿಗಳ ರಾಜೀನಾಮೆಗೆ ಒತ್ತಾಯ ಸೇರಿದಂತೆ ರಾಜಕಾರಣದ ನಡುವೆ ಗಾಂಧಿ ಜಯಂತಿ ದಿನವಾದ ಇಂದು ಕೇಂದ್ರ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಇಲಾಖೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ( H D Kumaraswamy) ಕೊಂಚ ಡಿಫರೆಂಟ್ ಆಗಿ ಕಂಡು ಬಂದರು.
ಮಂಗಳವಾರ ಬೆಳಗ್ಗೆ ಬೆಂಗಳೂರಿನ ಹೆಚ್ಎಂಟಿ ಕ್ಯಾಂಪಸ್ಸಿನಲ್ಲಿರುವ ಭಾರತೀಯ ವಿಜ್ಞಾನ ಸಂಸ್ಥೆಯ ಶ್ರೇಷ್ಠತಾ ಕೇಂದ್ರಕ್ಕೆ ಭೇಟಿ ನೀಡಿದ್ದ ಹೆಚ್.ಡಿ. ಕುಮಾರಸ್ವಾಮಿ, ರೋಬೋಟಿಕ್ಸ್, ಡ್ರೋನ್, ಅತ್ಯಾಧುನಿಕ ಕೃಷಿ ಸಲಕರಣೆ, ಸೇನಾ ಉಪಕರಣ ತಯಾರಿಕೆಗೆ ತಂತ್ರಜ್ಞಾನ ಅಭಿವೃದ್ಧಿಪಡಿಸುವ ಕೇಂದ್ರದಲ್ಲಿ ಸುಧೀರ್ಘ ಸಮಯ ಕಳೆದರು.

ಶ್ರೇಷ್ಠತಾ ಕೇಂದ್ರದಲ್ಲಿ ಹೊಸ ತಲೆಮಾರಿನ ಅತ್ಯಾಧುನಿಕ ಡ್ರೋನ್ (Drone) ಅನ್ನು ಹಾರಿಸಿದ ಕೇಂದ್ರ ಸಚಿವ ಕುಮಾರಸ್ವಾಮಿ ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಿದರು. ಅಲ್ಲದೇ, ವಿವಿಧ ನಮೂನೆಯ, ವಿವಿಧ ಉದ್ದೇಶಗಳಿಗೆ ಬಳಕೆಯಾಗುವ ಡ್ರೋನ್ ಗಳನ್ನು ಹಾಗೂ ರೋಬೋಟಿಕ್ ವಿಭಾಗದಲ್ಲಿ ಕೃಷಿಗೂ ಬಳಕೆ ಮಾಡಲಾಗುವ ರೋಬೋಟ್ ಗಳನ್ನು ಕೂಡಾ ಕೇಂದ್ರ ಸಚಿವರು ವೀಕ್ಷಿಸಿದರು.
ಇದೇ ವೇಳೆ, ಶ್ರೇಷ್ಠತಾ ಕೇಂದ್ರದಲ್ಲಿರುವ ಆರ್ಟ್ ಪಾರ್ಕ್ (Art park) ಗೆ ಭೇಟಿ ನೀಡಿದ ಕುಮಾರಸ್ವಾಮಿ, ಇಲ್ಲಿ ಅಭಿವೃದ್ಧಿಪಡಿಸಲಾಗಿರುವ ಅತ್ಯಾಧುನಿಕ ಕೃಷಿ ತಂತ್ರಜ್ಞಾನ ಸಲಕರಣೆಗಳನ್ನು ವೀಕ್ಷಣೆ ಮಾಡಿದರು. ಅತ್ಯಾಧುನಿಕ ಎಟಿವಿ (all terrain vehicle) ವಾಹನವನ್ನು ವೀಕ್ಷಿಸಿದ ಕೇಂದ್ರ ಸಚಿವರು, ವಾಹನದಲ್ಲಿ ಸಂಚಾರ ನಡೆಸಿದರು.
ಕೃಷಿ ಉದ್ದೇಶಕ್ಕೆ ಬಳಸಬಹುದಾದ ಈ ಎಟಿವಿ ಯನ್ನು ಯಾವುದೇ ದುರ್ಗಮ ಪ್ರದೇಶದಲ್ಲಿಯೂ ಬಳಕೆ ಮಾಡಬಹುದಾಗಿದೆ. ಪ್ರಮುಖವಾಗಿ ಅಡಿಕೆ, ಕಾಫಿ, ಚಹಾ, ತೆಂಗು ಸೇರಿದಂತೆ ವಾಣಿಜ್ಯ ಬೆಳಗಳನ್ನು ಬೆಳೆಯುವ ರೈತರಿಗೆ ಈ ವಾಹನ ಬಹಳ ಅನುಕೂಲವಾಗಲಿದೆ. ಎತ್ತರದ ಮತ್ತು ಕಡಿದಾದ ಪ್ರದೇಶಗಳಲ್ಲಿ ಕೂಡಾ ಸಲೀಸಾಗಿ ಎಟಿವಿ ಬಳಕೆ ಮಾಡಬಹುದಾಗಿದೆ.

ಈ ಮಧ್ಯೆ ಶ್ರೇಷ್ಠತಾ ಕೇಂದ್ರ (Center for Excellence)ದಲ್ಲಿ ನಡೆದ ಮಹಾತ್ಮಾ ಗಾಂಧಿ ಜಯಂತಿ ಕಾರ್ಯಕ್ರಮ ಹಾಗೂ ರಾಷ್ಟ್ರೀಯ ಸ್ವಚ್ಚತಾ ದಿನ ನಿಮಿತ್ತ ಪೌರ ಕಾರ್ಮಿಕರೊಂದಿಗೆ ಸ್ವಚ್ಚತಾ ಅಭಿಯಾನದಲ್ಲಿ ಕೂಡಾ ಕೇಂದ್ರ ಸಚಿವ ಕುಮಾರಸ್ವಾಮಿ ಭಾಗವಹಿಸಿದರು.
ಬೆಂಗಳೂರಿನಲ್ಲಿ ಹಿಂದೂಸ್ತಾನ್ ಮೆಷಿನ್ ಟೂಲ್ಸ್ ಕ್ಯಾಂಪಸ್ ನಲ್ಲಿರುವ ಶ್ರೇಷ್ಠತಾ ಕೇಂದ್ರವು ಭಾರತೀಯ ವಿಜ್ಞಾನ ಸಂಸ್ಥೆಯ ನೆರವಿನೊಂದಿಗೆ ಭಾರತ ಸರ್ಕಾರದ ಭಾರೀ ಕೈಗಾರಿಕೆ ಸಚಿವಾಲಯದ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ.
Union Minister Kumaraswamy visited HMT campus and operated Drone