karnatakaBreakingಪ್ರಮುಖ ಸುದ್ದಿಗಳು

ಯಡಕುಮಾರಿ–ಶ್ರೀವಾಗಿಲು ನಡುವೆ ಭೀಕರ ಭೂಕುಸಿತ : ಕರಾವಳಿ- ಬೆಂಗಳೂರು ರೈಲು ಸಂಚಾರ ರದ್ದು

ಹಾಸನ : ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಭಾರೀ ಮಳೆಯಿಂದಾಗಿ ನೈಋತ್ಯ ರೈಲ್ವೆಯ ಮೈಸೂರು ವಿಭಾಗದ ಯಡಕುಮಾರಿ ಮತ್ತು ಶ್ರೀವಾಗಿಲು ರೈಲು ನಿಲ್ದಾಣಗಳ ನಡುವಿನ ಘಾಟ್ ಪ್ರದೇಶದಲ್ಲಿ ಭೀಕರ ಭೂಕುಸಿತ

By ರಶ್ಮಿ ಎಸ್. | Rashmi S

1 min read

WhatsAppPost
Bangalore - Mangalore Train Land Slide Heavy rain
Bangalore - Mangalore Train Land Slide Heavy rain

ಹಾಸನ : ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮವಾಗಿ, ನೈಋತ್ಯ ರೈಲ್ವೆಯ ಮೈಸೂರು ವಿಭಾಗದ ಯಡಕುಮಾರಿ ಮತ್ತು ಶ್ರೀವಾಗಿಲು ರೈಲು ನಿಲ್ದಾಣಗಳ ನಡುವಿನ ಘಾಟ್ ಪ್ರದೇಶದಲ್ಲಿ ಶನಿವಾರ ರಾತ್ರಿ ಭೀಕರ ಭೂಕುಸಿತ ಸಂಭವಿಸಿದೆ.

ರೈಲ್ವೆ ಹಳಿಗಳ ಮೇಲೆ ಬೃಹತ್ ಪ್ರಮಾಣದ ಮಣ್ಣು ಮತ್ತು ಬಂಡೆಗಳು ಕುಸಿದು ಬಿದ್ದಿದ್ದರಿಂದ, ಕರಾವಳಿ ಕರ್ನಾಟಕ ಹಾಗೂ ರಾಜಧಾನಿ ಬೆಂಗಳೂರನ್ನು ಸಂಪರ್ಕಿಸುವ ಪ್ರಮುಖ ರೈಲುಗಳ ಸಂಚಾರ ಸಂಪೂರ್ಣವಾಗಿ ಕಡಿತಗೊಂಡಿದೆ.

ಹಳಿಗಳ ಮೇಲೆ ಮಣ್ಣು ತುಂಬಿಕೊಂಡ ಹಿನ್ನೆಲೆ ಮುರುಡೇಶ್ವರ, ಕಾರವಾರ, ಕಾರಕಲ್ ಹಾಗೂ ಮಂಗಳೂರು ಮಾರ್ಗವಾಗಿ ಸಂಚರಿಸಬೇಕಿದ್ದ ಹಲವು ರೈಲು ಸೇವೆಗಳನ್ನು ಹಾಸನ, ಸಕಲೇಶಪುರ ಮತ್ತು ಸುಬ್ರಹ್ಮಣ್ಯ ರಸ್ತೆ ನಿಲ್ದಾಣಗಳಲ್ಲೇ ಭಾಗಶಃ ರದ್ದುಗೊಳಿಸಲಾಗಿದೆ.

ಅಲ್ಲದೆ, ಮಂಗಳೂರು ಜಂಕ್ಷನ್-ಯಶವಂತಪುರ ನಡುವಿನ ಹಗಲು ರೈಲುಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ವಾರಾಂತ್ಯದ ರಜೆಯ ಮುಗಿಸಿ ಕರಾವಳಿಯಿಂದ ಬೆಂಗಳೂರಿಗೆ ಮರಳಬೇಕಿದ್ದ ಸಾವಿರಾರು ಪ್ರಯಾಣಿಕರು ಮಧ್ಯರಾತ್ರಿಯೇ ನಿಲ್ದಾಣಗಳಲ್ಲಿ ಸಿಲುಕಿ ತೀವ್ರ ಪರದಾಡುವಂತಾಯಿತು.

ದುರಸ್ತಿ ಕಾರ್ಯಕ್ಕಾಗಿ ರೈಲ್ವೆ ಇಲಾಖೆಯು ಹೆಚ್ಚುವರಿ ಹಿಟಾಚಿ ಯಂತ್ರಗಳು ಹಾಗೂ ನೂರಾರು ಕಾರ್ಮಿಕರನ್ನು ದುರ್ಗಮ ಘಟ್ಟ ಪ್ರದೇಶಕ್ಕೆ ರವಾನಿಸಿದೆ. ಆದರೆ ನಿರಂತರವಾಗಿ ಸುರಿಯುತ್ತಿರುವ ಮಳೆಯು ಮಣ್ಣು ತೆರವು ಕಾರ್ಯಾಚರಣೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಹಳಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವವರೆಗೂ ಈ ಮಾರ್ಗದಲ್ಲಿ ಸಂಚಾರ ಪುನರಾರಂಭ ಸಾಧ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಯಾಣಿಕರು ಪರ್ಯಾಯ ರಸ್ತೆ ಮಾರ್ಗಗಳನ್ನು ಅವಲಂಬಿಸುವಂತೆ ಮತ್ತು ಇಲಾಖೆಯ ಹೆಲ್ಪ್‌ಲೈನ್ ಸಂಖ್ಯೆಗಳನ್ನು ಸಂಪರ್ಕಿಸುವಂತೆ ನೈಋತ್ಯ ರೈಲ್ವೆ ಪ್ರಕಟಣೆಯಲ್ಲಿ ವಿಷಾದ ವ್ಯಕ್ತಪಡಿಸಿದೆ.

Topics

ಸಂಬಂಧಿತ ಸುದ್ದಿಗಳು