ಬೆಂಗಳೂರು : ಕೇಂದ್ರ ಸರಕಾರ ಆರ್ಥಿಕವಾಗಿ ಹಿಂದುಳಿದಿರುವ ಮೇಲ್ವರ್ಗಕ್ಕೆ ಶೇ.10 ರಷ್ಟು ಮೀಸಲಾತಿ ಕಲ್ಪಿಸಿದೆ. ಆದರೆ ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದವರಿಗಷ್ಟೇ ಮೀಸಲಾತಿ ನೀಡಬೇಕಾಗಿದ್ದ ಸರಕಾರ ಇದೀಗ ಆರ್ಥಿಕವಾಗಿ ಹಿಂದುಳಿದವರಿಗೂ ಮೀಸಲಾತಿ ನೀಡಿರುವುದು ವಿರೋಧಕ್ಕೆ ಕಾರಣವಾಗಿದೆ. ಈ ನಡುವೆ ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಆಯೋಗ ರಚನೆಗೆ ಒತ್ತಾಯ ಕೇಳಿಬಂದಿದೆ.
ಹೌದು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳಿಗೆ ಇಷ್ಟು ದಿನ ಉದ್ಯೋಗಾವಕಾಶದಲ್ಲಿ ಮೀಸಲಾತಿಯನ್ನು ನೀಡಲಾಗುತ್ತಿತ್ತು. ಆದ್ರೀಗ ಕೇಂದ್ರ ಸರಕಾರ ಮೇಲ್ವರ್ಗಕ್ಕೆ ಶೇ.10ರ ಮೀಸಲಾತಿಯನ್ನು ಕಲ್ಪಿಸಿದೆ. ಹಿಂದುಳಿದ ವರ್ಗಗಳ ಪ್ರವರ್ಗ ಒಂದರಲ್ಲಿ ಸುಮಾರು 376 ಜಾತಿ ಉಪಜಾತಿಗಳಿದ್ದು ಶೇ.4 ಮೀಸಲಾತಿಯನ್ನು ನೀಡಲಾಗುತ್ತಿದೆ. ಇನ್ನು ಪ್ರವರ್ಗ 2(ಎ)ನಲ್ಲಿ 180 ಜಾತಿ ಉಪಜಾತಿಗಳಿದ್ದು ಶೇ.15ರ ಮೀಸಲಾತಿ, ಪ್ರವರ್ಗ 2 (ಬಿ)ಗೆ ಶೇ.4ರ ರಿಯಾಯಾತಿ ನೀಡಲಾಗುತ್ತಿದೆ. ಅಲ್ಲದೇ ಪ್ರವರ್ಗ 3(ಎ) ಯಲ್ಲಿ ಒಕ್ಕಲಿಗ, ಬಲಿಜ, ರಡ್ಡಿ, ಕಮ್ಮು ಮುಂತಾದ ಜಾತಿಗಳನ್ನು ಒಳಗೊಂಡಿದ್ದು ಶೇ.4 ಹಾಗೂ ವೀರಶೈವ, ಮರಾಠ, ಬಂಟ ಹಾಗೂ ಕ್ರೈಸ್ತರನ್ನೊಳಗೊಂಡಿರುವ ಪ್ರವರ್ಗ 3 (ಬಿ) ಗೆ ಶೇ.5 ಮೀಸಲಾತಿಯನ್ನು ನೀಡಲಾಗುತ್ತಿದೆ. ಆದ್ರೆ ಸಾಮಾನ್ಯ ವರ್ಗವೆಂದು ಕರೆಯಲ್ಪಡುವ ಬ್ರಾಹ್ಮಣ, ಆರ್ಯವೈಶ್ಯ, ಜೈನ, ನಾಯರ್ ಹಾಗೂ ಮೊದಲಿಯಾರ್ ಸಮುದಾಯಕ್ಕೆ ಕೇಂದ್ರ ಸರಕಾರ ಇದೀಗ ಶೇ.10ರ ಮೀಸಲಾತಿಯನ್ನು ಘೋಷಿಸಿದೆ. ಕೇಂದ್ರ ಸರಕಾರ ಹಿಂದುಳಿದ ವರ್ಗಕ್ಕೆ ಅನ್ಯಾಯವೆಸಗಿದೆ ಅನ್ನುವ ಆರೋಪ ಕೇಳಿಬಂದಿದೆ.

ಕೇಂದ್ರ ಸರ್ಕಾರ ಯಾವುದೇ ಆಯೋಗದ ಸಲಹೆ ಅಥವಾ ಶಿಫಾರಸ್ಸು ಇಲ್ಲದೆ, ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಚರ್ಚೆಯೂ ಆಗದೆ ಬಿಲ್ ಮಂಡಿಸಿ, ಆತುರಾತುರವಾಗಿ ಮೇಲ್ಜಾತಿಗಳಿಗೆ ಹತ್ತು ಪರ್ಸೆಂಟ್ ಮೀಸಲಾತಿಯನ್ನು ಘೋಷಿಸಿದೆ. ಇದರಿಂದಾಗಿ ಹಿಂದುಳಿದ ವರ್ಗಗಳಿಗೆ ಸಾಕಷ್ಟು ಅನ್ಯಾಯವಾಗಲಿದೆ. ಕರ್ನಾಟಕದಲ್ಲಿ ಲೆಸ್ಲಿ ಮಿಲ್ಲರ್, ಹಾವನೂರು, ಜಸ್ಟೀಸ್ ಚಿನ್ನಪ್ಪರೆಡ್ಡಿ ಆಯೋಗಗಳಿಂದ ಹಿಡಿದು ವೆಂಕಟಸ್ವಾಮಿ, ದ್ವಾರಕಾನಾಥ್ ಆಯೋಗಗಳವರೆಗೆ ಸತತವಾಗಿ ಹಿಂದುಳಿದ ವರ್ಗಗಳ ಅಭಿವೃದ್ಧಿ ಮತ್ತು ಉನ್ನತಿಗೆ ನೀಡಿದಂತಹ ಅತ್ಯಂತ ವೈಜ್ಞಾನಿಕ ವಿಶ್ಲೇಷಣಾತ್ಮಕ ವರದಿಗಳು ಇಡೀ ದೇಶಕ್ಕೇ ಮಾದರಿಯಾಗಿದೆ, ಇನ್ನು ಮಂಡಲ್ ವರದಿಗೂ ಪೂರಕವಾಗಿ ಹಾಗೂ ಆಧಾರವಾಗಿಯೇ ಉಳಿದುಕೊಂಡಿದೆ. ಆದರೆ ಕರ್ನಾಟಕದಲ್ಲಿ ಹಿಂದುಳಿದ ವರ್ಗಗಳ ಆಯೋಗ ರಚನೆಯಾಗಿಲ್ಲ ಎಂಬುವುದು ಹಿಂದುಳಿದ ವರ್ಗಗಳ ಮುಖಂಡರ ಆರೋಪ.

ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಅವಧಿಯಲ್ಲಿ ಹಿಂದುಳಿದ ವರ್ಗಗಳಿಗೆ ಸುವರ್ಣ ಯುಗ ಆರಂಭವಾಯಿತು ಅಂತಾನೇ ಹಿಂದುಳಿದ ವರ್ಗಗಳ ನಾಯಕರು ಭಾವಿಸಿದ್ದರು. ಆದರೆ ಹಿಂದುಳಿದ ವರ್ಗಗಳ ಅಭಿವೃದ್ದಿಗೆ ಪೂರಕ ಕಾರ್ಯಕ್ರಮವನ್ನು ರೂಪಿಸದೆ, ಹಿಂದುಳಿದ ವರ್ಗಗಳ ಜನರು ನಿರಾಸೆ ಅನುಭವಿಸಿದ್ದರು. ದೇವರಾಜ ಅರಸು ಅವರ ನಂತರದಲ್ಲಿ ನಂತರ ಹಿಂದುಳಿದ ವರ್ಗಕ್ಕೆ ಸಿಕ್ಕ ಅವಕಾಶವೂ ಗಗನ ಕುಸುಮವಾಯಿತು. ಇನ್ನು ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಹಿಂದುಳಿದ ವರ್ಗಗಳ ಆಯೋಗಕ್ಕೆ ಕಾಂತರಾಜು ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ಐತಿಹಾಸಿಕ ಜಾತೀವಾರು ಸಮೀಕ್ಷೆಗೆಂದು ಸುಮಾರು ಇನ್ನೂರು ಕೋಟಿ ಅನುದಾನವನ್ನು ನೀಡಲಾಗಿತ್ತು. ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರ ಕಾಲಾವಧಿ ಮೂರು ವರ್ಷಕ್ಕೆ ಮುಗಿದರೂ ಕಾಂತರಾಜು ಅವರನ್ನು ಮತ್ತೂ ಎರಡು ವರ್ಷಕ್ಕೆ ಮುಂದುವರಿಸಲಾಯಿತು.

ಆದರೆ ಇವರ ಇನ್ನೂರು ಕೋಟಿ ವೆಚ್ಚದ ಜಾತಿವಾರು ಸಮೀಕ್ಷೆಯ ಕುರಿತು ಯಾರೂ ಚಕಾರವೆತ್ತಿಲ್ಲ. ಸಿದ್ದರಾಮಯ್ಯ ಅಧಿಕಾರವಧಿ ಮುಕ್ತಾಯಗೊಂಡು ಎಚ್.ಡಿ.ಕುಮಾರಸ್ವಾಮಿ ರಾಜ್ಯದ ಅಧ್ಯಕ್ಷರಾದರೂ ಕೂಡ ಸಿದ್ದರಾಮಯ್ಯ ತಮ್ಮ ಪ್ರಭಾವ ಬಳಸಿ ಕಾಂತರಾಜು ಅವರನ್ನೇ ಅಧ್ಯಕ್ಷರನ್ನಾಗಿ ಉಳಿಸಿಕೊಂಡರು. ಆದರೆ ಇನ್ನೂರು ಕೋಟಿ ವೆಚ್ಚದ ಜಾತೀವಾರು ಸಮೀಕ್ಷೆಯ ವರದಿಯ ಕುರಿತು ಕೊನೆಗೂ ಚಕಾರವೆತ್ತಲೇ ಇಲ್ಲ. ಇದೀಗ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದು ವರ್ಷವಾಗುತ್ತಾ ಬಂದರೂ ಕೂಡ ಹಿಂದುಳಿದ ವರ್ಗಗಳ ಆಯೋಗಕ್ಕೆ ಅಧ್ಯಕ್ಷರನ್ನು ಮತ್ತು ಸದಸ್ಯರನ್ನು ಈವರೆಗೂ ನೇಮಕ ಮಾಡಿಲ್ಲ.

ಬಿಜೆಪಿಯಲ್ಲಿ ಹಿಂದುಳಿದ ವರ್ಗಗಳ ಕುರಿತು ಅಧ್ಯಯನ ಮಾಡಿದವರು ವಿರಳಾತಿ ವಿರಳ. ಹೀಗಾಗಿಯೇ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷರಾಗಿರುವ ಸಿ.ಎಸ್.ದ್ವಾರಕನಾಥ್ ಅವರನ್ನೇ ಪಕ್ಷಕ್ಕೆ ಕರೆತರುವ ನಿಟ್ಟಿನಲ್ಲಿ ಪ್ರಯತ್ನಗಳು ತೆರೆಮರೆಯಲ್ಲಿಯೇ ನಡೆಯುತ್ತಿದೆ. ಮೇಲ್ವರ್ಗಕ್ಕೆ ಮೀಸಲಾತಿ ನೀಡಿರುವ ಬೆನ್ನಲ್ಲೇ ಮುನಿಸಿಕೊಂಡಿರುವ ಹಿಂದುಳಿದ ವರ್ಗದ ಜನರ ಮತಗಳನ್ನು ಬಿಜೆಪಿಯತ್ತ ಸೆಳೆಯುವ ನಿಟ್ಟಿನಲ್ಲಿ ರಾಜ್ಯ ಸರಕಾರ ಚಿಂತನೆ ನಡೆಸಿದೆ. ಹಿಂದುಳಿದ ವರ್ಗಗಳ ಆಯೋಗಕ್ಕೆ ದ್ವಾರಕನಾಥ್ ಸೂಕ್ತ ವ್ಯಕ್ತಿ ಅನ್ನುವ ಕುರಿತು ಕೆಲ ಬಿಜೆಪಿ ನಾಯಕರು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿಯೇ ಆಯೋಗದ ಅಧ್ಯಕ್ಷರಾಗಿದ್ದವರು ಕೂಡ ಸಿ.ಎಸ್.ದ್ವಾರಕನಾಥ್. ಹೀಗಾಗಿ ಈ ಬಾರಿಯೂ ದ್ವಾರಕನಾಥ್ ಅವರನ್ನೇ ಆಯೋಗದ ಅಧ್ಯಕ್ಷರನ್ನಾಗಿ ನೇಮಕ ಮಾಡುವ ಮೂಲಕ ಹಿಂದುಳಿದ ವರ್ಗಗಳ ಅಭಿವೃದ್ದಿಗೆ ಪೂರಕವಾಗುವ ಯೋಜನೆಯನ್ನು ಘೋಷಿಸುವ ಪ್ಲ್ಯಾನ್ ಸಿಎಂ ಯಡಿಯೂರಪ್ಪ ಅವರದ್ದು ಎನ್ನಲಾಗುತ್ತಿದೆ. ಒಟ್ಟಿನಲ್ಲಿ ಹಿಂದುಳಿದ ವರ್ಗಗಳ ಅಭಿವೃದ್ದಿಗಾಗಿ ಆಯೋಗವನ್ನು ಶೀಘ್ರದಲ್ಲಿಯೇ ರಾಜ್ಯ ಸರಕಾರ ರಚನೆ ಮಾಡಬೇಕಾದ ಅಗತ್ಯವಿದೆ.