ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಹದಿನಾಲ್ಕು ಸೈಟ್ ಗಳನ್ನು ಪಡೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ತನಿಖೆಗೆ ಕೋರ್ಟ್ ಆದೇಶವಾಗುತ್ತಿದ್ದಂತೆಯೇ ವಿಪಕ್ಷ ಬಿಜೆಪಿ ಸಿದ್ದರಾಮಯ್ಯ ರಾಜೀನಾಮೆಗೆ ಪಟ್ಟು ಹಿಡಿದಿದೆ.
ವಿಧಾನಸೌಧ ಆವರಣದಲ್ಲಿ ಇಂದು ಪ್ರತಿಭಟನೆ ನಡೆಸಿದ ಬಿಜೆಪಿ ಜನಪ್ರತಿನಿಧಿಗಳು ಮುಖ್ಯಮಂತ್ರಿ ಸ್ಥಾನಕ್ಕೆ ಕೂಡಲೇ ಸಿದ್ದರಾಮಯ್ಯ ರಾಜೀನಾಮೆ ಸಲ್ಲಿಸುವಂತೆ ಒತ್ತಾಯಿಸಿದರು. ಬಿಜೆಪಿ ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಮತ್ತು ಮಾಜಿ ಸಚಿವರು ಪ್ರತಿಭಟನೆ ನಡೆಸಿ ವಿಧಾನಸೌಧಕ್ಕೆ ಬೀಗ ಹಾಕಲು ಯತ್ನಿಸಿದರು.

ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಮತ್ತು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ನೇತೃತ್ವದಲ್ಲಿ ಮಹಾತ್ಮಾ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದ ಬಿಜೆಪಿ ಜನಪ್ರತಿನಿಧಿಗಳು ಬಳಿಕ ಕಾಲ್ನಡಿಗೆ ಮೂಲಕ ತೆರಳಿ ವಿಧಾನಸೌಧಕ್ಕೆ ಬೀಗ ಹಾಕಲು ಮುಂದಾಗಿದ್ದರು.
ಗಾಂಧಿ ಪ್ರತಿಮೆ ಬಳಿಯಿಂದ ವಿಧಾನಸೌಧದ ಪಶ್ಚಿಮ ದ್ವಾರದಲ್ಲಿರುವ ಕೆಂಗಲ್ ಹನುಮಂತಯ್ಯ ಪ್ರತಿಮೆವರೆಗೂ ತೆರಳಲು ಬಿಜೆಪಿ ಜನಪ್ರತಿನಿಧಿಗಳಿಗೆ ಅವಕಾಶ ನೀಡಿದ ಪೊಲೀಸರು ಅಲ್ಲಿ ಬ್ಯಾರಿಕೇಡ್ ಗಳನ್ನು ಅಳವಡಿಸಿ ತಡೆ ಒಡ್ಡಿದರು. ಈ ಸಂದರ್ಭದಲ್ಲಿ ಶಾಸಕರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ಸಂಭವಿಸಿ ನೂಕಾಟವೂ ನಡೆದು ಹೋಯಿತು.
ಈ ಮಧ್ಯೆ ವಿಧಾನಸಭೆ ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ್ ವಿಧಾನಸೌಧದ ಪಶ್ಚಿಮ ದ್ವಾರದ ಬಳಿಗೆ ಜಿಗಿದು ಓಡಿ ಗೇಟ್ ಮುಚ್ಚುವಲ್ಲಿ ಯಶಸ್ವಿಯಾದರು. ಈ ವೇಳೆ ಬೆಲ್ಲದ್ ಒಳಗೆ ತೆರಳದಂತೆ ತಡೆದ ಪೊಲೀಸರು ಬಲವಂತವಾಗಿ ವಿಧಾನಸೌಧದಿಂದ ಹೊರಗೆ ಕರೆದು ತಂದರು.

ಇದೇ ವೇಳೆ ಬೀಗ ಜಡಿಯಲು ಒಳಪ್ರವೇಶಿಸಲು ಅವಕಾಶ ನೀಡುವಂತೆ ಪ್ರತಿಭಟಿಸಿದ ವಿಪಕ್ಷ ನಾಯಕ ಆರ್. ಅಶೋಕ್, ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ, ಶಾಸಕ ಡಾ. ಅಶ್ವಥ್ ನಾರಾಯಣ ಸೇರಿದಂತೆ ಬಿಜೆಪಿ ಶಾಸಕರನ್ನು ವಶಕ್ಕೆ ಪಡೆದ ಪೊಲೀಸರು ಹೊತ್ತೊಯ್ದು ಬಸ್ ನಲ್ಲಿ ತುಂಬಿ ವಿಧಾನಸೌಧದಿಂದ ಕರೆದೊಯ್ದರು.
ಇನ್ನು ಇಂದಿನ ಪ್ರತಿಭಟನೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅನಾರೋಗ್ಯದ ಕಾರಣದಿಂದ ಗೈರಾಗಿದ್ದರು. ಇದೇ ವೇಳೆ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಇಂದಿನ ಪ್ರತಿಭಟನೆಯಿಂದ ದೂರ ಉಳಿದಿದ್ದರು.