ನವದೆಹಲಿ : ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಮಾತು ಕೇಳಿಬರುತ್ತಿರೋ ಬೆನ್ನಲ್ಲೇ ಬಿಜೆಪಿ ಹೈಕಮಾಂಡ್ ಯಡಿಯೂರಪ್ಪ ಬೆಂಬಲಕ್ಕೆ ನಿಂತಿದೆ. ಅಲ್ಲದೇ ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವ ಜವಾಬ್ದಾರಿಯನ್ನು ಯಡಿಯೂರಪ್ಪ ಹೆಗಲಿಗೇರಿಸಿದೆ.

ಕಳೆದ ಎರಡು ದಿನಗಳ ಕಾಲ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ದೆಹಲಿ ಪ್ರವಾಸ ಕೈಗೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಗೆ ಸುಮಾರು ಇಪತ್ತು ನಿಮಿಷಗಳ ಕಾಲ ಚರ್ಚೆ ನಡೆಸಿದ್ದಾರೆ. ಅಲ್ಲದೇ ಇಂದು ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರ ಜೊತೆಗೂ ರಾಜ್ಯ ರಾಜಕೀಯದ ಕುರಿತು ಮಾತುಕತೆ ನಡೆಸಿದ್ದಾರೆ. ಆದರೆ ಚರ್ಚೆಯ ವೇಳೆಯಲ್ಲಿ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರಿಸುವ ಕುರಿತು ಬಿಜೆಪಿ ಹೈಕಮಾಂಡ್ ಭರವಸೆಯನ್ನು ನೀಡಿದೆ ಎನ್ನಲಾಗುತ್ತಿದೆ.

ಯಡಿಯೂರಪ್ಪ ಅವರಿಗೆ ವಯಸ್ಸಿನ ಸಮಸ್ಯೆಯಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಯಡಿಯೂರಪ್ಪಗೆ ಬದಲಿ ನಾಯಕನ ಹುಡುಕಾಟವನ್ನು ಬಿಜೆಪಿ ನಡೆಸುತ್ತಿದೆ. ಆದರೆ ಹೈಕಮಾಂಡ್ ನಿರೀಕ್ಷೆಯ ನಾಯಕ ಇನ್ನೂ ಸಿಕ್ಕಿಲ್ಲ. ಹೀಗಾಗಿಯೇ ಯಡಿಯೂರಪ್ಪ ಅವರನ್ನೇ ಸಿಎಂ ಆಗಿ ಮುಂದುವರಿಸುವ ತೀರ್ಮಾನಕ್ಕೆ ಬಿಜೆಪಿ ಹೈಕಮಾಂಡ್ ಬಂದಂತೆ ಇದೆ. ಇನ್ನೊಂದೆಡೆಯಲ್ಲಿ ಯಡಿಯೂರಪ್ಪ ಈ ಬಾರಿಯ ದೆಹಲಿ ಭೇಟಿಯ ವೇಳೆಯಲ್ಲಿ ಸಾಕಷ್ಟು ರಿಲ್ಯಾಕ್ಸ್ ಆಗಿದ್ದಂತೆ ಕಂಡುಬಂದಿದ್ದಾರೆ.

ಇನ್ನು ಪತ್ರಕರ್ತರ ಜೊತೆಗೆ ಮಾತನಾಡುವ ವೇಳೆಯಲ್ಲಿಯೂ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡುವಂತೆ ರಾಷ್ಟ್ರೀಯ ನಾಯಕರು ಹೇಳಿಲ್ಲ. ಹೀಗಾಗಿ ನಾನು ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ. ರಾಜ್ಯದ ಅಭಿವೃದ್ದಿಯ ಬಗ್ಗೆ ಪ್ರಧಾನಿ ಅವರ ಜೊತೆಗೆ ಚರ್ಚಿಸಿದ್ದೇನೆ. ನಾನು ಇನ್ಮುಂದೆ ಪ್ರತೀ ತಿಂಗಳು ದೆಹಲಿಗೆ ಭೇಟಿ ನೀಡುತ್ತೇನೆ. ಅಲ್ಲದೇ ರಾಜ್ಯದಲ್ಲಿ ಪಕ್ಷ ಸಂಘಟನೆಯನ್ನು ಮಾಡುವಂತೆ ರಾಷ್ಟ್ರೀಯ ನಾಯಕರು ತಿಳಿಸಿದ್ದು, ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವ ಜವಾಬ್ದಾರಿಯನ್ನು ತನ್ನ ಹೆಗಲಿಗೆ ಹಾಕಿದ್ದಾರೆ ಎಂದು ಖುದ್ದು ಬಿ.ಎಸ್.ಯಡಿಯೂರಪ್ಪನವರೇ ಹೇಳಿದ್ದಾರೆ.

ಈ ಬಾರಿಯ ಯಡಿಯೂರಪ್ಪ ದೆಹಲಿಯ ಭೇಟಿ ಸಾಕಷ್ಟು ಕುತೂಹಲವನ್ನು ಮೂಡಿಸಿತ್ತು. ಅಲ್ಲದೇ ರಾಷ್ಟ್ರೀಯ ವಾಹಿನಿಗಳು ಯಡಿಯೂರಪ್ಪ ರಾಜೀನಾಮೆ ನೀಡಿದ್ದಾರೆ ಎನ್ನುವ ಸುದ್ದಿಯನ್ನು ಪ್ರಸಾರ ಮಾಡಿದ್ದವು. ಆದ್ರೆ ಯಡಿಯೂರಪ್ಪ ನೀಡಿರುವ ಹೇಳಿಕೆಯನ್ನು ನೋಡಿದ್ರೆ ಸದ್ಯಕ್ಕೆ ಸಿಎಂ ಸ್ಥಾನ ಭದ್ರವಾಗಿದೆ. ಮುಂದಿನ ಕೆಲವು ತಿಂಗಳ ವರೆಗೂ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯನ್ನಾಗಿ ಮುಂದುವರಿಸುವ ಸಾಧ್ಯತೆಯಿದೆ. ಅಲ್ಲದೇ ಬಿಜೆಪಿ ಅಧಿಕಾರದಲ್ಲಿ ಇರುವವರೆಗೂ ಯಡಿಯೂರಪ್ಪನವರನ್ನೇ ಮುಂದುವರಿಸುವ ಸಾಧ್ಯತೆ ತೀರಾ ಕಡಿಮೆ. ಹೀಗಾಗಿ ಮುಂದಿನ ಚುನಾವಣೆಗೆ ಯಡಿಯೂರಪ್ಪನವರನ್ನೇ ಮುಂದಿಟ್ಟು ಬಿಜೆಪಿ ಅಧಿಕಾರಕ್ಕೆ ತರಲು ಹೈಕಮಾಂಡ್ ಪ್ಲ್ಯಾನ್ ಮಾಡಿದಂತಿದೆ.

ಆದರೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಜೆ.ಪಿ.ನಡ್ಡಾ ಅವರು ಯಡಿಯೂರಪ್ಪ ಅವರು ಯಡಿಯೂರಪ್ಪ ಅವರಿಗೆ ಅಭಯ ನೀಡಿದ್ದಾರೆ. ಹೀಗಾಗಿ ಯಡಿಯೂರಪ್ಪ ಕೂಡ ದೆಹಲಿಯಿಂದಲೇ ವಿರೋಧಿಗೆ ಖಡಕ್ ಸಂದೇಶವನ್ನು ರವಾನಿಸಿದ್ದಾರೆ. ಒಟ್ಟಿನಲ್ಲಿ ರಾಜ್ಯ ನಾಯಕರು ಪದೇ ಪದೇ ದೆಹಲಿಗೆ ಭೇಟಿ ನೀಡುತ್ತಿರೋದನ್ನು ಗಮನಿಸಿದ್ರೆ, ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಗುಮ್ಮ ಬಗೆ ಹರಿದಂತೆ ಕಾಣಿತ್ತಿಲ್ಲ.