ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಮುಡಾ ಸೈಟ್ ಪ್ರಕರಣದ ಲೋಕಾಯುಕ್ತ ತನಿಖೆಗೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಆದೇಶ ನೀಡಿದ ಬೆನ್ನಲ್ಲೇ ರಾಜ್ಯ ಸರ್ಕಾರ ಮಹತ್ವದ ತೀರ್ಮಾನವೊಂದನ್ನು ತೆಗೆದುಕೊಂಡಿದೆ.
ರಾಜ್ಯದಲ್ಲಿ ತನಿಖೆ ನಡೆಸಲು ಸಿಬಿಐಗೆ ಮುಕ್ತ ಅವಕಾಶ ನೀಡಿದ್ದ ಅಧಿಸೂಚನೆಯನ್ನು ವಾಪಸ್ ಪಡೆಯಲು ರಾಜ್ಯ ಸರ್ಕಾರ ನಿರ್ಧರಿಸಿದೆ. ವಿಧಾನಸೌಧದಲ್ಲಿ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ತೀರ್ಮಾನ ತೆಗೆದುಕೊಳ್ಳಲಾಗಿದೆ.

ಇದುವರೆಗೂ ಭ್ರಷ್ಟಾಚಾರ ತಡೆ ಕಾಯ್ದೆ ಅಡಿಯಲ್ಲಿ ರಾಜ್ಯದಲ್ಲಿ ಮುಕ್ತವಾಗಿ ಸಿಬಿಐ ತನಿಖೆ ನಡೆಸಬಹುದಾಗಿತ್ತು. ಈ ಹಿಂದೆ ಕರ್ನಾಟಕ ಸರ್ಕಾರವೇ ಅಧಿಸೂಚನೆ ಹೊರಡಿಸುವ ಮೂಲಕ ಮುಕ್ತ ತನಿಖೆಗೆ ಸಿಬಿಐಗೆ ಅವಕಾಶ ಮಾಡಿಕೊಟ್ಟಿತ್ತು. ಈ ಅಧಿಸೂಚನೆಯ ಪ್ರಕಾರ ರಾಜ್ಯದಲ್ಲಿ ಅಪರಾಧ ಪ್ರಕರಣಗಳನ್ನು ತನಿಖೆ ಮಾಡಲು ಸಿಬಿಐ ಮುಕ್ತ ಅವಕಾಶವನ್ನು ಹೊಂದಿತ್ತು. ಡೆಲ್ಲಿ ಸ್ಟೆಷಲ್ ಪೊಲೀಸ್ ಎಸ್ಟಾಬ್ಲಿಷ್ ಮೆಂಟ್ ಆ್ಯಕ್ಟ್ 1946 ರ ಅಡಿಯಲ್ಲಿ ಈ ಅವಕಾಶವನ್ನು ಸಿಬಿಐ ಹೊಂದಿತ್ತು.
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಲೋಕಾಯುಕ್ತ ತನಿಖೆಗೆ ಕೋರ್ಟ್ ಆದೇಶ ನೀಡಿದ ಮರುದಿನವೇ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸಿಎಂ ವಿರುದ್ಧದ ದೂರುದಾರರು ಸಿಬಿಐಗೆ ದೂರು ಸಲ್ಲಿಸಬಹುದು ಎಂಬ ಅನುಮಾನದ ಹಿನ್ನೆಲೆಯಲ್ಲಿ ಇಂದು ರಾಜ್ಯ ಸರ್ಕಾರ ಈ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಹೇಳಲಾಗಿದೆ.

ನ್ಯಾಯಾಲಯದ ಅನುಮತಿ ಪಡೆದು ಮುಡಾ ಸೈಟ್ ಪ್ರಕರಣದ ತನಿಖೆ ನಡೆಸುವಂತೆ ಒಂದು ವೇಳೆ ದೂರುದಾರರು ಸಿಬಿಐಗೆ ಮನವಿ ಸಲ್ಲಿಸಿದರೆ ಸಿಬಿಐ ತನಿಖೆ ನಡೆಸಲು ಅವಕಾಶ ಸಿಕ್ಕಿ ಅದು ಸಿದ್ದರಾಮಯ್ಯ ಅವರಿಗೆ ಕಂಟಕವಾಗುವ ಸಾಧ್ಯತೆ ಇತ್ತು. ಈ ಮಧ್ಯೆ ಲೋಕಾಯುಕ್ತ ತನಿಖೆಯಿಂದ ನ್ಯಾಯ ಸಿಗುವ ನಿರೀಕ್ಷೆ ಇಲ್ಲದಿರುವುದರಿಂದ ಸಿಬಿಐ ಮೊರೆ ಹೋಗುವುದಾಗಿ ಪ್ರಕರಣದ ದೂರುದಾರರಲ್ಲೊಬ್ಬರಾಗಿರುವ ಸ್ನೇಹಮಯಿ ಕೃಷ್ಣ ನಿನ್ನೆ ಮೈಸೂರಿನಲ್ಲಿ ಹೇಳಿಕೆ ನೀಡಿದ್ದರು.
ಇತ್ತೀಚೆಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ದಾಖಲಾಗಿದ್ದ ಅಕ್ರಮ ಆಸ್ತಿ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಹಿಂದಿನ ಬಿಜೆಪಿ ಸರ್ಕಾರ ಸಿಬಿಐ ತನಿಖೆಗೆ ನೀಡಿದ್ದ ಅನುಮತಿಯನ್ನು ಸಿದ್ದರಾಮಯ್ಯ ಸರ್ಕಾರ ವಾಪಸ್ ಪಡೆದಿತ್ತು. ಆಗ ಸಚಿವ ಸಂಪುಟದ ನಿರ್ಣಯದ ಮೂಲಕವೇ ಸಿಬಿಐಗೆ ಕೊಟ್ಟಿದ್ದ ಅನುಮತಿಯನ್ನು ವಾಪಸ್ ಪಡೆಯಲಾಗಿತ್ತು.