ಬೆಂಗಳೂರು : ಸಿಡಿ ಪ್ರಕರಣದ ಕಿಂಗ್ ಪಿನ್ ಎನ್ನಲಾಗುತ್ತಿರುವ ಪತ್ರಕರ್ತ ನರೇಶ್ ಹೌಡ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜೊತೆಗಿರುವ ಪೋಟೋವನ್ನು ಬಿಜೆಪಿ ಟ್ವೀಟ್ ಮಾಡೋ ಮೂಲಕ ಡಿಕೆಶಿಗೆ ಟಾಂಗ್ ಕೊಟ್ಟಿದೆ.
ಹೆಗಲು ಮುಟ್ಟಿ ನೋಡಿಕೊಂಡಿದ್ದಕ್ಕೂ ಈ ಚಿತ್ರಕ್ಕೂ ಸಂಬಂಧವಿರಬಹುದೇ ? ʼಮಾಸ್ಟರ್ ಮೈಂಡ್ʼ ಮತ್ತು ʼರಿಂಗ್ ಮಾಸ್ಟರ್ʼ ಒಂದೇ ಫ್ರೇಮ್‌ನಲ್ಲಿ ಸಿಲುಕಿಕೊಂಡಿರುವುದಕ್ಕೂ ʼನನ್ನನ್ನು ಸಿಲುಕಿಸುವ ಕುತಂತ್ರʼ ಎನ್ನುವ ಸ್ವ-ರಕ್ಷಣಾ ಆಟ ಆಡಿರುವುದಕ್ಕೂ ಸಂಬಂಧವಿರಬಹುದೇ ? ಎಂದು ಬಿಜೆಪಿ ತನ್ನ ಟ್ವೀಟರ್ ಖಾತೆಯ ಮೂಲಕ ಪ್ರಶ್ನಿಸಿದೆ.
ರಾಸಲೀಲೆ ಸಿಡಿ ಪ್ರಕರಣ ಬಯಲಾಗುತ್ತಿದ್ದಂತೆಯೇ ಬಿಜೆಪಿ ಟ್ವೀಟ್ ವಾರ್ ಶುರುಮಾಡಿದೆ. ಅದ್ರಲ್ಲೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕುರಿತು ನಿತ್ಯವೂ ಒಂದಿಲ್ಲೊಂದು ಟ್ವೀಟ್ ಮಾಡೋ ಮೂಲಕ ಡಿಚ್ಚಿ ನೀಡುತ್ತಿದೆ. ಜೈಲಿನಿಂದ ಬಂದ ಮಹಾನಾಯಕನ ಕೈವಾಡವಿದೆ ಎಂದು ಆರೋಪಿಸಿದ್ದ ಬಿಜೆಪಿ, ಇದೀಗ ನನ್ನನ್ನು ಸಿಲುಕಿಸೋ ಕುತಂತ್ರವಿದೆ ಎಂದಿರುವ ಡಿಕೆಶಿ ಕುರಿತು, ಕುಂಬಳಕಾಯಿ ಕಳ್ಳ ಅಂದಕೂಡಲೇ ನೀವೇಕೆ ಹೆಗಲು ಮುಟ್ಟಿ ನೋಡಿಕೊಳ್ಳುತ್ತೀರಿ ? ಭ್ರಷ್ಟಾಚಾರದಲ್ಲಿ ಸಿಲುಕಿಕೊಂಡಾಗಲೂ ನನ್ನ ವಿರುದ್ಧ ಸಂಚು ನಡೆಯುತ್ತಿದೆ ಎಂದು ಹೇಳಿದ್ದೀರಿ ಎಂದು ಪ್ರಶ್ನಿಸಿದೆ.
ಬಿಜೆಪಿ ಮಾಡಿರುವ ಟ್ವೀಟ್ ಆರೋಪಕ್ಕೆ ಡಿಕೆಶಿ ಟ್ವಿಟ್ ಮೂಲಕವೇ ಉತ್ತರ ಕೊಡ್ತಾರಾ ಅನ್ನೋ ಕುತೂಹಲ ಮೂಡಿದೆ.