ನವದೆಹಲಿ : ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ದೆಹಲಿ ಭೇಟಿಯ ಬೆನ್ನಲ್ಲೇ ರಾಜ್ಯದಲ್ಲಿ ಸಿಎಂ ಬದಲಾವಣೆಯ ಕುರಿತು ಮಾತುಗಳು ಕೇಳಿಬಂದಿತ್ತು. ಆದ್ರೀಗ ಪ್ರಧಾನಿ ಮೋದಿ ಅವರು ಯಡಿಯೂರಪ್ಪಗೆ ಅಭಯ ನೀಡಿದ್ದು, ಮುಂದಿನ ಮೂರು ವರ್ಷ ನೀವೇ ಸಿಎಂ ಆಗಿ ಮುಂದುವರಿಯುತ್ತೀರಿ. ಯಾವುದೇ ಕಾರಣಕ್ಕೂ ನಾಯಕತ್ವ ಬದಲಾವಣೆ ಮಾಡುವುದಿಲ್ಲ ಎಂದಿದ್ದಾರೆ.

ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದ ಕೆಲವೇ ದಿನಗಳಲ್ಲಿ ಸಿಎಂ ಬದಲಾವಣೆಯ ಮಾತುಗಳು ಕೇಳಿಬಂದಿತ್ತು. ಇದೀಗ ಮತ್ತೆ ಯಡಿಯೂರಪ್ಪ ದೆಹಲಿಗೆ ಭೇಟಿ ನೀಡುತ್ತಲೇ ಸಿಎಂ ಬದಲಾಗ್ತಾರೆ ಎನ್ನಲಾಗಿತ್ತು. ಉತ್ತರ ಕರ್ನಾಟಕ ಭಾಗದ ಮೂವರು ಲಿಂಗಾಯಿತ ಶಾಸಕರು ರಾಜ್ಯದ ಮುಖ್ಯಮಂತ್ರಿಯಾಗ್ತಾರೆ ಅನ್ನೋ ಮಾತುಗಳು ಕೇಳಿಬಂದಿತ್ತು. ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ಅವರು ಎಲ್ಲಾ ಕಾರ್ಯಗಳಲ್ಲಿಯೂ ಹಸ್ತಕ್ಷೇಪ ಮಾಡುತ್ತಾರೆನ್ನುವ ಆರೋಪವನ್ನು ಬಿಜೆಪಿಯ ಹಿರಿಯ ನಾಯಕರು ಹೈಕಮಾಂಡ್ ಮುಂದಿಟ್ಟಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸಿಎಂ ಬದಲಾವಣೆ ಖಚಿತ ಎನ್ನಲಾಗಿತ್ತು.

ಒಂದೊಮ್ಮೆ ಮಕ್ಕಳಿಗೆ ಪಕ್ಷದಲ್ಲಿ ಉನ್ನತ ಸ್ಥಾನವನ್ನು ನೀಡಿ, ಯಡಿಯೂರಪ್ಪ ಸೂಚಿಸುವ ನಾಯಕನನ್ನೇ ಮುಖ್ಯಮಂತ್ರಿಯನ್ನಾಗಿ ಘೋಷಣೆಯನ್ನು ಮಾಡಿದ್ರೆ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯಬಹುದು ಅನ್ನೋ ಮಾತುಗಳು ಕೇಳಿಬಂದಿತ್ತು. ಆದ್ರೀಗ ಮೋದಿ ನೀಡಿದ ಅಭಯ ಬಿಎಸ್ ವೈಗೆ ಆನೆಬಲ ಬಂದಂತಾಗಿದೆ.

ಯಡಿಯೂರಪ್ಪ ಇಂದು ದೆಹಲಿಯಲ್ಲಿ ಪ್ರಧಾನಿ ಮೋದಿ ಅವರನ್ನು ಭೇಟಿಯಾಗುತ್ತಲೇ, ಆಲಂಗಿಸಿಕೊಂಡ ಮೋದಿ, ಯಾವುದೇ ಕಾರಣ ಕ್ಕೂ ನಿಮ್ಮನ್ನು ಸಿಎಂ ಸ್ಥಾನದಿಂದ ಕೆಳಗಿಳಿಸುವುದಿಲ್ಲ. ಮುಂದಿನ ಮೂರು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಮುಂದುವರಿಯಲಿ ದ್ದೀರಿ. ಕೊರೊನಾ, ಪ್ರವಾಹ ಸಂದರ್ಭದಲ್ಲಿಯೂ ಉತ್ತಮವಾಗಿ ಕಾರ್ಯನಿರ್ವಹಣೆಯನ್ನು ಮಾಡಿದ್ದೀರಿ. ನಮ್ಮಿಬ್ಬರು ಸುಮಾರು 25 ವರ್ಷಗಳ ಕಾಲದ ಸ್ನೇಹ. ಗೃಹ ಸಚಿವ ಅಮಿತ್ ಶಾ ಅವರು ಹುಷಾರಾಗಿ ಬಂದ ಮೇಲೆ ಎಲ್ಲವನ್ನೂ ಸರಿ ಮಾಡ್ತಾರೆ. ಸಚಿವ ಸಂಪುಟ ವಿಸ್ತರಣೆಯ ಬಗ್ಗೆ ಕಾರ್ಯೋನ್ಮುಖರಾಗಿ ಎಂದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಅಭಯ ನೀಡುತ್ತಲೇ, ಯಡಿಯೂರಪ್ಪ ವಿರೋಧಿಗಳಿಗೆ ಬಿಗ್ ಶಾಕ್ ಎದುರಾಗಿದೆ. ಮುಖ್ಯಮಂತ್ರಿ ಹುದ್ದೆಯ ಕನಸು ಕಾಣುತ್ತಿದ್ದ ನಾಯಕರಿಗೆ ನಿರಾಸೆಯಾಗಿದೆ. ಹೈಕಮಾಂಡ್ ಬೆನ್ನಿಗೆ ನಿಲ್ಲುತ್ತಿದ್ದಂತೆಯೇ ಯಡಿಯೂರಪ್ಪ ಸಖತ್ ಖುಷಿಯಾಗಿದ್ದಾರೆ.