ಬೆಂಗಳೂರು: ತೀವ್ರ ಕುತೂಹಲ ಕೆರಳಿಸಿರುವ ರಾಜ್ಯಸಭಾ ಚುನಾವಣೆಯಲ್ಲಿ( Rajya Sabha election ) ಕಾಂಗ್ರೆಸ್ ಒಂದು ಸ್ಥಾನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. 2ನೇ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದ ಮನ್ಸೂರ್ ಖಾನ್ ಗೆಲ್ಲುವಷ್ಟು ಮತಗಳು ಬಿದ್ದಿಲ್ಲ. ಅತ್ತ ಕಡೆ ಜೆಡಿಎಸ್ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಕೂಡ ಸೋಲು ಕಂಡಿದ್ದಾರೆ. ಕಾಂಗ್ರೆಸ್- ಜೆಡಿಎಸ್ ಜಿದ್ದಾಜಿದ್ದಿಯ ಲಾಭ ಬಿಜೆಪಿಯ ಮೂರೇ ಅಭ್ಯರ್ಥಿಗೆ ಆಗಿದೆ.
ಕಾಂಗ್ರೆಸ್‌ನ 2ನೇ ಅಭ್ಯರ್ಥಿ ಸೋತರೂ ಹಠ ಸಾಧಿಸಿ ಗೆಲ್ಲುವಲ್ಲಿ ಸಿದ್ದರಾಮಯ್ಯ (Siddaramaiah ) ಯಶಸ್ವಿಯಾಗಿದ್ದಾರೆ. ಕಾಂಗ್ರೆಸ್ ಬೆಂಬಲದಿಂದ ಜೆಡಿಎಸ್ ಅಭ್ಯರ್ಥಿ ಗೆಲ್ಲುವುದು ಸಿದ್ದರಾಮಯ್ಯ ನವರಿಗೆ ಸುತಾರಾಂ ಇಷ್ಟವಿರಲಿಲ್ಲ. ಇದೇ ಕಾರಣದಿಂದ ಹೈಕಮಾಂಡನ್ನು ಒಪ್ಪಿಸಿ 2ನೇ ಅಭ್ಯರ್ಥಿಯನ್ನು ಕಣಕ್ಕಿಳಿಸುವಲ್ಲಿ ಸಿದ್ದರಾಮಯ್ಯ ಯಶಸ್ವಿಯಾಗಿದ್ರು. ಕಾಂಗ್ರೆಸ್ 2ನೇ ಅಭ್ಯರ್ಥಿ ಕಣಕ್ಕಿಳಿಸಿದ ಕಾರಣ, ಜೆಡಿಎಸ್ ಅಭ್ಯರ್ಥಿ ಕೂಡ ಸೋಲು ಕಾಣುವಂತಾಗಿದೆ. ಹೀಗೆ ಜೆಡಿಎಸ್ ಅಭ್ಯರ್ಥಿಯನ್ನು ಸೋಲಿಸುವಲ್ಲಿ ಸಿದ್ದರಾಮಯ್ಯ ಯಶಸ್ವಿಯಾಗಿದ್ದಾರೆ.
ಜೆಡಿಎಸ್ ಜೊತೆ ಮೈತ್ರಿಗೆ ಒಪ್ಪದೆ ದೂರ ಉಳಿದ ಸಿದ್ದರಾಮಯ್ಯ ನಿರ್ಧಾರದ ಹಿಂದೆ ಹಲವು ಲೆಕ್ಕಾಚಾರಗಳಿವೆ. ಜೆಡಿಎಸ್’ಗೆ ಹತ್ತಿರವಾದಷ್ಟೂ ಕಾಂಗ್ರೆಸ್”ಗೆ ಲಾಭಕ್ಕಿಂತ ನಷ್ಟವೇ ಹೆಚ್ಚು. ಈ ಕಟು ಸತ್ಯ 2019ರ ಲೋಕಸಭಾ ಚುನಾವಣೆಯಲ್ಲಿ ಸಾಬೀತಾಗಿದೆ. ಆ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸಿದ್ದ ಕಾಂಗ್ರೆಸ್ ಕೇವಲ ಒಂದು ಸ್ಥಾನ ಗೆದ್ದಿತ್ತು. ಬೆಂಗಳೂರು ಗ್ರಾಮಾಂತರದಲ್ಲಿ ಡಿ.ಕೆ ಸುರೇಶ್ ಹೊರತು ಪಡಿಸಿದರೆ ಉಳಿದೆಲ್ಲಾ ಕೈ ಅಭ್ಯರ್ಥಿಗಳು ಸೋಲು ಕಂಡಿದ್ದರು.
ಈಗ ಮತ್ತೆ ಜೆಡಿಎಸ್ ಜೊತೆ ದೋಸ್ತಿ ಮಾಡಿಕೊಂಡರೆ ಮತ್ತೊಮ್ಮೆ ಕೈ ಸುಟ್ಟುಕೊಳ್ಳುವ ಭಯ ಕಾಂಗ್ರೆಸ್ ನಾಯಕರನ್ನು ಕಾಡುತ್ತಿತ್ತು. ಅದರಲ್ಲೂ ಮುಖ್ಯವಾಗಿ ಜೆಡಿಎಸ್ ಜೊತೆಗಿನ ಮೈತ್ರಿ 2023ರ ವಿಧಾನಸಭಾ ಚುನಾವಣೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಗಳಿತ್ತು. ಮುಖ್ಯವಾಗಿ ಹಳೇಮೈಸೂರು ಭಾಗದಲ್ಲಿ ಕಾಂಗ್ರೆಸ್’ಗೆ ಜೆಡಿಎಸ್ ಪಕ್ಷವೇ ಪ್ರಮುಖ ಎದುರಾಳಿ. ಹೀಗಾಗಿ ರಾಜ್ಯಸಭಾ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಮೈತ್ರಿಗೆ ಮುಂದಾಗಿದ್ರೆ, ಕಾರ್ಯಕರ್ತರ ಮಟ್ಟದಲ್ಲಿ ಗೊಂದಲ ಶುರುವಾಗುತ್ತಿತ್ತು. ಜೆಡಿಎಸ್’ಗೆ ಕಾಂಗ್ರೆಸ್ ಹತ್ತಿರವಾದಷ್ಟೂ ಬಿಜೆಪಿಗೆ ಲಾಭ ಎಂಬ ಪರಮ ಸತ್ಯ ಸಿದ್ದರಾಮಯ್ಯನವರಿಗೆ ಗೊತ್ತಿದ್ದರಿಂದಲೇ ಜೆಡಿಎಸ್’ನಿಂದ ಅಂತರ ಕಾಯ್ದುಕೊಂಡಿದ್ದಾರೆ. ಜೆಡಿಎಸ್ ಶಕ್ತಿ ಕಳೆದು ಕೊಂಡಷ್ಟೂ ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್”ಗೆ ಲಾಭ. ಹೀಗಾಗಿ ಚುನಾವಣೆಗೆ ಒಂದು ವರ್ಷ ಮೊದಲೇ ಜೆಡಿಎಸ್ಸನ್ನು ದುರ್ಬಲಗೊಳಿಸಲು ಸಿದ್ದು ಪ್ಲಾನ್ ಮಾಡಿ ಯಶಸ್ವಿಯಾಗಿದ್ದಾರೆ.
ಆತ್ಮಸಾಕ್ಷಿ ಮತಗಳ ಹೆಸರಿನಲ್ಲಿ ವಿಧಾನಸಭಾ ಚುನಾವಣೆಗೂ ಮೊದಲೇ ಜೆಡಿಎಸ್’ನಿಂದ ಇಬ್ಬರು ಶಾಸಕರನ್ನು ಕಾಂಗ್ರೆಸ್’ಗೆ ಸೆಳೆಯುವಲ್ಲಿ ಸಿದ್ದರಾಮಯ್ಯ ಯಶಸ್ವಿಯಾಗಿದ್ದಾರೆ. ಕೋಲಾರ ವಿಧಾನಸಭಾ ಕ್ಷೇತ್ರದ ಶಾಸಕ ಶ್ರೀನಿವಾಸ್ ಗೌಡ ಕಾಂಗ್ರೆಸ್ ಪರ ಅಡ್ಡ ಮತದಾನ ಮಾಡಿದ್ರೆ, ತುಮಕೂರಿನ ಗುಬ್ಬಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಶಾಸಕ ಎಸ್.ಆರ್ ಶ್ರೀನಿವಾಸ್ ಖಾಲಿ ಬ್ಯಾಲೆಟ್ ಹಾಕುವ ಮೂಲಕ ಜೆಡಿಎಸ್’ಗೆ ಶಾಕ್ ಕೊಟ್ಟಿದ್ದಾರೆ. ಈ ಇಬ್ಬರೂ ಶಾಸಕರು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್’ನಿಂದ ಸ್ಪರ್ಧಿಸುವುದು ಖಚಿತ.
ಇನ್ನು ರಾಜ್ಯಸಭಾ ಚುನಾವಣೆಯಲ್ಲಿ ಜೆಡಿಎಸ್’ಗೆ ಮತ ಹಾಕಿರುವ ಅರಸೀಕೆರೆ ಶಾಸಕ ಶಿವಲಿಂಗೇಗೌಡ, ಚಾಮುಂಡೇಶ್ವರಿ ಶಾಸಕ ಜಿ.ಟಿ ದೇವೇಗೌಡ ಮತ್ತು ಅರಕಲಗೂಡು ಶಾಸಕ ಎ.ಟಿ ರಾಮಸ್ವಾಮಿ ಜೆಡಿಎಸ್’ನಿಂದ ಒಂದು ಕಾಲು ಹೊರಗಿಟ್ಟಿದ್ದು, ಕಾಂಗ್ರೆಸ್’ಗೆ ಹತ್ತಿರವಾಗುತ್ತಿದ್ದಾರೆ.
ಇದನ್ನೂ ಓದಿ : ಇನ್ನೂ 10 ವರ್ಷ ನನ್ನದೇ ನಾಯಕತ್ವ: ಬಿಜೆಪಿಗೆ ಬಿ.ಎಸ್.ಯಡಿಯೂರಪ್ಪ ಸ್ಪಷ್ಟ ಸಂದೇಶ
ಇದನ್ನೂ ಓದಿ : ಆರ್‌ಎಸ್‌ಎಸ್ ವಿರುದ್ಧ ಮುಂದುವರಿದ ಸಮರ : ಪ್ರತಿಯೊಬ್ಬ ಭಾರತಿಯನಿಗೂ RSS ಅಂದ್ರೆ ಭಯ ಎಂದ ಸಿದ್ದರಾಮಯ್ಯ
Congress Lost But Siddaramaiah won the Rajya Sabha election