ಮೈಸೂರು : KS Eshwarappa :ಅಧಿಕಾರಿಗಳ ಮೇಲೆ ಒತ್ತಡವನ್ನು ಹೇರಿ ಬಿಜೆಪಿ ಸರ್ಕಾರವು ದಾಖಲೆಗಳನ್ನು ತೆಗೆಸುತ್ತಿದೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆರೋಪಕ್ಕೆ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ತಿರುಗೇಟು ನೀಡಿದ್ದಾರೆ. ಮೈಸೂರಿನಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು ನಿಮ್ಮ ದಾಖಲೆ ತೆಗೆಸಬಾರದಾ..? ನಿಮ್ಮನ್ನು ಹಾಗೇ ಬಿಟ್ಟು ಬಿಡಬೇಕಾ..? ದಾಖಲೆ ಕೊಡು ಅಂತಾ ಅಧಿಕಾರಿಗಳಿಗೆ ಒತ್ತಡ ಹೇರುವ ಪ್ರಶ್ನೆಯೇ ಉದ್ಭವಿಸೋದಿಲ್ಲ. ದಾಖಲೆಗಳನ್ನು ಕೇಳಿದಾಗ ಅವರು ಕೊಡಬೇಕಾಗುತ್ತದೆ. ದಾಖಲೆಗಳನ್ನು ಬಚ್ಚಿಡುವಂತಹ ಕೆಲಸ ಡಿಕೆಶಿ ಏನು ಮಾಡಿದ್ದಾರೆ. ದಾಖಲೆ ಬಚ್ಚಿಟ್ಟಿದ್ದಾರೆ ಅಂದರೆ ಡಿಕೆಶಿ ಏನೋ ತಪ್ಪು ಮಾಡಿದ್ದಾರೆ ಎಂಬರ್ಥವಲ್ಲವೇ ಎಂದು ಟಾಂಗ್ ನೀಡಿದ್ದಾರೆ.
ನಾನು ಮಂತ್ರಿ ಆಗಲಿಲ್ಲ ಅದಕ್ಕೆ ಬೇಸರಗೊಂಡು ಅಧಿವೇಶನಕ್ಕೆ ಗೈರಾಗಿದ್ದೇನೆ ಎಂಬ ಮಾತಿನಲ್ಲಿ ಯಾವುದೇ ಅರ್ಥವಿಲ್ಲ, ಕಾಲು ನೋವಿತ್ತು, ಹೀಗಾಗಿ ವಿಧಾನಸಭಾ ಅಧಿವೇಶನದಲ್ಲಿ ಭಾಗಿಯಾಗಲಿಲ್ಲ. ವರಿಷ್ಠರು ನನ್ನನ್ನು ಮತ್ತೆ ಮಂತ್ರಿ ಮಾಡಬೇಕೆಂದು ಬಯಸಿದರೆ ಖಂಡಿತವಾಗಿ ಸಚಿವ ಸ್ಥಾನವನ್ನು ಸ್ವೀಕರಿಸುತ್ತೇನೆ. ಒಂದು ವೇಳೆ ಮಾಡಲಿಲ್ಲ ಅಂದರೂ ಪಕ್ಷಕ್ಕಾಗಿ ನಾನು ದುಡಿಯುತ್ತೇನೆ. ನನ್ನ ಮೇಲೆ ಆರೋಪ ಎದುರಾದ ತಕ್ಷಣವೇ ನಾನು ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾನೆ. ಈಗ ನಾನು ಆರೋಪ ಮುಕ್ತನಾಗಿದ್ದೇನೆಂಬ ಕ್ಲೀನ್ ಚಿಟ್ ಪಡೆದಿದ್ದೇನೆ. ಕ್ಲೀನ್ಚಿಟ್ ಸಿಕ್ಕ ಬಳಿಕವೂ ಸಚಿವನಾಗಲಿಲ್ಲ ಎಂಬ ಬೇಸರ ನನಗೆ ಖಂಡಿತವಾಗಿಯೂ ಇದೆ. ಮಂತ್ರಿ ಮಾಡ್ತಾರೆ ಅಂದುಕೊಂಡಿದ್ದೆ. ಮಾಡಿಲ್ಲ ಹೀಗಾಗಿ ಅದೊಂದು ಬೇಸರ ಇರೋದಂತೂ ಸತ್ಯ ಎಂದು ಹೇಳಿದರು .
ಮೀಸಲಾತಿ ವಿಚಾರವಾಗಿಯೂ ಇದೇ ವೇಳೆ ಮಾತನಾಡಿದ ಅವರು, ಮಲ್ಲಿಕಾರ್ಜುನ ಖರ್ಗೆ ಬಹಳ ವರ್ಷಗಳಿಂದ ರಾಜಕೀಯದಲ್ಲಿದ್ದಾರೆ. ಅವರಿಗೆ ಮೀಸಲಾತಿ ಏಕೆ ಬೇಕು..? ಮಂತ್ರಿಯಾಗಿ ಆರ್ಥಿಕವಾಗಿ ಮೇಲೆ ಬಂದ ಮೇಲೂ ಅಂತವರಿಗೆ ಮೀಸಲಾತಿ ಯಾಕೆ ಕೊಡಬೇಕು..? ಆರ್ಥಿಕವಾಗಿ ಸಬಲರಾದವರಿಗೆ ಮೀಸಲಾತಿ ನಿಲ್ಲಿಸಬೇಕು. ಎಲ್ಲಾ ದಲಿತ ನಾಯಕರು ಮೀಸಲಾತಿಯನ್ನು ಸಂಪೂರ್ಣ ದುರುಪಯೋಗ ಮಾಡಿಕೊಂಡಿದ್ದಾರೆ. ನಾನು ಯಾವುದೇ ಮೀಸಲಾತಿ ಬಳಕೆ ಮಾಡಿಲ್ಲ ಎಂದು ಹೇಳಿದರು.
ಕಾಂಗ್ರೆಸ್ನ ಭಾರತ್ ಜೋಡೋ ಯಾತ್ರೆ ವಿಚಾರವಾಗಿಯೂ ಇದೇ ವೇಳೆ ಮಾತನಾಡಿದ ಅವರು, ಅಖಂಡ ಭಾರತವನ್ನು ತುಂಡು ಮಾಡಿದವರೇ ಕಾಂಗ್ರೆಸ್ಸಿಗರು. ಪಾಕಿಸ್ತಾನ, ಹಿಂದೂಸ್ತಾನ ಎಂದು ಒಡೆದವರೇ ಈ ಕಾಂಗ್ರೆಸ್ಸಿಗರು. ಪಾಕಿಸ್ತಾನ – ಹಿಂದೂಸ್ತಾನ ಬೇರೆ ಬೇರೆ ಆಗಿರಬಾರದು. ಸ್ವಾತಂತ್ರ್ಯಕ್ಕಾಗಿ ಹೋರಾಡಿದವರ ಆತ್ಮಕ್ಕೆ ಶಾಂತಿ ಸಿಗಬೇಕು ಅಂದರೆ ಪಾಕಿಸ್ತಾನ- ಹಿಂದೂಸ್ತಾನ ಒಂದಾಗಬೇಕು. ಹಿಂದೆ ಮಾಡಿದ ತಪ್ಪಿನ ಪ್ರಾಯಶ್ಚಿತ್ತವಾಗಿ ಕಾಂಗ್ರೆಸ್ಸಿಗರು ಈಗ ಭಾರತ್ ಜೋಡೋ ಯಾತ್ರೆ ಮಾಡ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಇದನ್ನು ಓದಿ : Monsoon Raga:ನಟ ಡಾಲಿ ಧನಂಜಯ ಅಭಿನಯದ “ಮಾನ್ಸೂನ್ ರಾಗ” ಸಿನಿಮಾ ಇಂದು ರಾಜ್ಯಾದ್ಯಂತ ಬಿಡುಗಡೆ
Former Minister KS Eshwarappa vented his frustration on BJP