ಬೆಂಗಳೂರು: ತನಿಖೆಗೆ ಹೆದುರುವ ಪ್ರಶ್ನೆಯೇ ಇಲ್ಲ. ನಾವು ತನಿಖೆಯನ್ನು ಎದುರಿಸಲು ಎಲ್ಲಾ ರೀತಿಯಲ್ಲೂ ತಯಾರಾಗಿದ್ದೇವೆ ಮತ್ತು ಕಾನೂನು ರೀತಿಯಾಗಿ ಯಾವರೀತಿಯಲ್ಲಿ ಹೋರಾಟ ಮಾಡಬೇಕೋ ಅದಕ್ಕೆಲ್ಲಾ ನಾವು ತಯಾರಾಗಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಅವರು ಇಂದು ವಿಧಾನಸೌಧದಲ್ಲಿ ಜನಪ್ರತಿನಿಧಿ ನ್ಯಾಯಾಲಯದಿಂದ ತೀರ್ಪು ಬಂದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.

ಜನ ಪ್ರತಿನಿಧಿಗಳ ನ್ಯಾಯಾಲಯ ನಿನ್ನೆ ಹೈಕೋರ್ಟ್ ಆದೇಶ ನೀಡಿದಂತೆ 17 ಎ ಪ್ರಕಾರ ತನಿಖೆ ಮಾಡಲು ಲೋಕಾಯುಕ್ತಕ್ಕೆ ಅನುಮತಿ ನೀಡದೆ. ತನಿಖೆಗೆ ಅದೇಶಿಸಿದ ಆದೇಶ ಪ್ರತಿ ನನಗೆ ಇನ್ನೂ ಬಂದಿಲ್ಲ. ಹಾಗಾಗಿ ಆದೇಶವನ್ನು ಪೂರ್ಣವಾಗಿ ಓದಿದ ಬಳಿಕ ಪ್ರತಿಕ್ರಿಯೆ ನೀಡುತ್ತೇನೆ ಎಂದರು.
ನನಗೆ ಬಂದ ಮಾಹಿತಿ ಪ್ರಕಾರ ಹಗರಣದ ತನಿಖೆ ಮಾಡಲು ಮೈಸೂರು ಲೋಕಾಯುಕ್ತಕ್ಕೆ ನ್ಯಾಯಾಲಯ ಶಿಫಾರಸ್ಸು ಮಾಡಿದೆ. ಮೈಸೂರಿನಲ್ಲಿಯೇ ಈ ಪ್ರಕರಣದ ದೂರು ದಾಖಲಾಗಿದ್ದು, ದೂರುದಾರರು ಕೂಡ ಮೈಸೂರಿನವರು. ಹಾಗೂ ಮೂಡಾ ಕೂಡ ಅಲ್ಲೇ ಇರೋದ್ರಿಂದ ಮೈಸೂರಿಗೆ ಶಿಫಾರಸ್ಸು ಮಾಡಿರಬೇಕು ಎಂದು ಭಾವಿಸಿದ್ದೇನೆ ಎಂದರು.

ಇಂದಿನ ಆದೇಶದ ಪೂರ್ಣ ಆದೇಶ ಪ್ರತಿ ಸಿಕ್ಕಿದ ಮೇಲೆ ವಕೀಲರೊಂದಿಗೆ ಚರ್ಚೆ ಮಾಡಿ ಮುಂದಿನ ನಿರ್ಧಾರದ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ ಮೂಡಾ ಪ್ರಕರಣದ ತನಿಖೆಗೆ ಸರ್ಕಾರ ರಚಿಸಿದ್ದ ನಿವೃತ್ತ ನ್ಯಾ.ಪಿ.ಎನ್.ದೇಸಾಯಿಯವರ ಆಯೋಗ ಪ್ರಕರಣದ ತನಿಖೆಯನ್ನು ಮುಂದುವರೆಸುತ್ತಾ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ,, ನ್ಯಾಯಂಗ ತನಿಖೆ ಮುಂದುವರೆಯುತ್ತದೆ ಎಂದು ಉತ್ತರಿಸಿದರು.
ನಾನು ಭ್ರಷ್ಟಾಚಾರ ರಹಿತ ಆಡಳಿತ ಕೊಟ್ಟವನು. ಈಗ ನನಿಗೆ ಸಂಕಷ್ಟ ತರುವಂತಹ ಕಾರ್ಯವನ್ನು ಬಿಜೆಪಿ ಮಾಡುತ್ತಿದೆ. ಎಲ್ಲೆಲ್ಲಿ ಬಿಜೆಪಿ ಆಡಳಿತವಿಲ್ಲವೂ ಅಲ್ಲಿ ರಾಜ್ಯಪಾಲರನ್ನು ಮುಂದುಟ್ಟುಕೊಂಡು ಸರ್ಕಾರ ಕೆಡವಲು ಬಿಜೆಪಿ ಷಡ್ಯಂತರ ಮಾಡುತ್ತಿದೆ. ಇದಕ್ಕೆ ಜಗ್ಗುವ ಪ್ರಶ್ನೆಯೇ ಇಲ್ಲ. ಅದೇನಿದ್ದರು ಧೈರ್ಯವಾಗಿ ತನಿಖೆಯನ್ನು ಎದುರಿಸುತ್ತೇವೆ. ಇದು ರಾಜಕೀಯ ಪಿತೂರಿ. ಹೈಕೋರ್ಟ್‌ನಿಂದ ತೀರ್ಪು ಬಂದಿದೆ. ನಮಗೆ ಮುಂದೆ ಅನೇಕ ಆಯ್ಕೆಗಳು ಇವೆ. ನಾವು ಕಾನೂನು ಹೋರಾಟ ಮಾಡುತ್ತೇವೆ ಎಂದು ಬಿಜೆಪಿ ವಿರುದ್ಧ ಸಿಎಂ ಸಿದ್ದರಾಮಯ್ಯ ಕಿಡಿ ಕಾರಿದರು.
ಬಿಜೆಪಿಯೇತರ ಸರ್ಕಾರ ಅಸ್ಥಿರ ಮಾಡಲು ಇಂತಹ ಅಸ್ತ್ರಗಳನ್ನ ಅವರು ಬಿಡುತ್ತಿದ್ದಾರೆ. ಸರ್ಕಾರವನ್ನ ಅಸ್ಥಿರ ಮಾಡೋ ಪ್ರಯತ್ನ ಆಗುತ್ತಿದೆ. ಕರ್ನಾಟಕದ ಜನ ಕಾಂಗ್ರೆಸ್‌ಗೆ ಆಶೀರ್ವಾದ ಮಾಡಿದ್ದಾರೆ. ಇದು ಬಿಜೆಪಿ-ಜೆಡಿಎಸ್ ಅವರಿಗೆ ಸಹಿಸಲು ಆಗುತ್ತಿಲ್ಲ. ಅದಕ್ಕಾಗಿ ಇಂತಹ ನಾಟಕವನ್ನು ಮಾಡುತ್ತಿದ್ದಾರೆ ಎಂದರು.