ರಾಜ್ಯದಲ್ಲಿ ಪರಿಷತ್ ಚುನಾವಣೆ ( MLC Election)ಅಖಾಡ ರಂಗೇರುತ್ತಿರುವ ಬೆನ್ನಲ್ಲೇ ಪಕ್ಷ ರಾಜಕಾರಣ, ಪಕ್ಷಾಂತರ ಪರ್ವವೂ ಜೋರಾಗಿದೆ. ಈ ಮಧ್ಯೆ ಮಗನನ್ನು ಎಂ ಎಲ್ ಸಿ ಮಾಡಲೇಬೇಕೆಂಬ ಕಾರಣಕ್ಕೆ ಪಕ್ಷದ ಚೌಕಟ್ಟು ಮೀರಿದ್ದ ಮಾಜಿ ಸಚಿವ ಹಾಲಿ ಶಾಸಕ ಎ.ಮಂಜು ಸಂಕಷ್ಟಕ್ಕೆ ಸಿಲುಕಿದ್ದು ಬಿಜೆಪಿಯಿಂದ ಗೇಟ್ ಪಾಸ್ (BJP Gate Pass) ಶಾಕ್ ಎದುರಾಗಿದೆ. ಶತಾಯ ಗತಾಯ ಮಗನನ್ನು ಪರಿಷತ್ ಮೆಟ್ಟಿಲೇರಿಸಲೇಬೇಕೆಂದು ಪಣತೊಟ್ಟಿದ್ದ ಎ.ಮಂಜು ಇದಕ್ಕಾಗಿ ಸಾಕಷ್ಟು ಸರ್ಕಸ್ ನಡೆಸಿದ್ದರು. ಬಿಜೆಪಿಯಲ್ಲಿದ್ದುಕೊಂಡು ಮಗನಿಗೆ ಕಾಂಗ್ರೆಸ್ ಟಿಕೇಟ್ ಕೊಡಿಸಲು ಎ.ಮಂಜು ಪ್ರಯತ್ನ ನಡೆಸಿದ್ದರು.
ಕಮಲ ಪಾಳಯದಲ್ಲೇ ಇದ್ದುಕೊಂಡು ಮಾಜಿಸಿಎಂ ಸಿದ್ಧರಾಮಯ್ಯನವರನ್ನು ಭೇಟಿ ಮಾಡಿದ್ದ ಎ.ಮಂಜು ಮಗನಿಗೆ ಟಿಕೇಟ್ ನೀಡುವಂತೆ ಮನವಿ ಮಾಡಿದ್ದರು. ಅಷ್ಟೇ ಅಲ್ಲ ಕಾಂಗ್ರೆಸ್ ನ ತೀವ್ರ ಲಾಭಿಯ ನಡುವೆಯೂ ಮಗನಿಗೆ ಟಿಕೇಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದರು. ಕೊಡಗು ವಿಧಾನಪರಿಷತ್ ಸ್ಥಾನಕ್ಕೆ ಕಾಂಗ್ರೆಸ್ ಮಂಥರ್ ಗೌಡಗೆ ಟಿಕೇಟ್ ನೀಡಿತ್ತು. ಮಗನಿಗೆ ಟಿಕೇಟ್ ಸಿಕ್ಕ ಸಂಭ್ರಮದಲ್ಲಿ ಮಾಜಿ ಸಚಿವ ಎ.ಮಂಜು ಚುನಾವಣೆ ಸಿದ್ಧತೆಯಲ್ಲಿದ್ದರು.
ಈ ಮಧ್ಯೆ ಎ.ಮಂಜು ಮಗನಿಗೆ ಕಾಂಗ್ರೆಸ್ ಟಿಕೇಟ್ ಸಿಕ್ಕಿರೋದು ಹಾಗೂ ಎ.ಮಂಜು ಅವರ ಚಟುವಟಿಕೆಗಳನ್ನು ಗಮನಿಸಿದ ಬಿಜೆಪಿ ಮಾಜಿ ಸಚಿವ,ಮಾಜಿ ಶಾಸಕ ಎ.ಮಂಜು ವಿರುದ್ಧ ಶಿಸ್ತುಕ್ರಮ ಜರುಗಿಸಿದೆ. ಇತ್ತೀಚಿನ ಕೆಲವು ಬೆಳವಣಿಗೆಗಳಿಂದ ಕೆಲವು ಸಂಶಯ ಉಂಟಾಗಿದೆ. ಹೀಗಾಗಿ ಮಂಡ್ಯ ಜಿಲ್ಲೆ ಪ್ರಭಾರಿ ಹಾಗೂ ಇನ್ನುಳಿದ ಜವಾಬ್ದಾರಿಗಳಿಂದ ನಿಮ್ಮನ್ನು ಮುಕ್ತಗೊಳಿಸಲಾಗುತ್ತಿದೆ ಎಂದು ರಾಜ್ಯ ಬಿಜೆಪಿ ಶಿಸ್ತು ಸಮಿತಿ ಪತ್ರದಲ್ಲಿ ಉಲ್ಲೇಖಿಸಿದೆ.
ರಾಜ್ಯ ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷರಾದ ಲಿಂಗರಾಜ್ ಪಾಟೀಲ್ ಶಿಸ್ತುಕ್ರಮದ ಆದೇಶ ಹೊರಡಿಸಿದ್ದಾರೆ. ಮೂಲಗಳ ಮಾಹಿತಿ ಪ್ರಕಾರ ಎ.ಮಂಜು ಮತ್ತೆ ಕಾಂಗ್ರೆಸ್ ನತ್ತ ಒಲವು ತೋರಿದ್ದಾರೆ ಎನ್ನಲಾಗುತ್ತಿದೆ. ಮಗ ಮಂಥರ್ ಗೌಡನನ್ನು ಗೆಲ್ಲಿಸಿಕೊಂಡ ಬಳಿಕ ಕಾಂಗ್ರೆಸ್ ಸೇರ್ಪಡೆಗೊಳ್ಳುವುದು ಬಹುತೇಕ ಖಚಿತ ಎನ್ನಲಾಗಿದ್ದು ಈಗಾಗಲೇ ಸಿದ್ಧು ಜೊತೆ ಒಂದು ಸುತ್ತಿನ ಮಾತುಕತೆ ಕೂಡ ನಡೆದಿದೆ ಎನ್ನಲಾಗಿದೆ.

ಒಟ್ಟಿನಲ್ಲಿ ಕಾಂಗ್ರೆಸ್ ನಿಂದ ಮನಸ್ಸು ಮುರಿದು ಕೊಂಡು ಹೊರಬಂದಿದ್ದ ಎ.ಮಂಜು ಮತ್ತೆ ಮಗನನ್ನು ಎಮ್.ಎಲ್.ಸಿ ಮಾಡಿಸಿಕೊಂಡು ಕಾಂಗ್ರೆಸ್ ಮರಳುವ ಲೆಕ್ಕಾಚಾರದಲ್ಲಿ ದ್ದಾರೆ. ಕೊಡಗಿನಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನೇರ ಹಣಾಹಣಿ ನಡೆಯಲಿದ್ದು ಪರಿಷತ್ ರಿಸಲ್ಟ್ ಎ.ಮಂಜು ಭವಿಷ್ಯ ನಿರ್ಧರಿಸಲಿದೆ.
ಇದನ್ನೂ ಓದಿ : ಮಲ್ಪೆಯಲ್ಲಿ 1.80 ಲಕ್ಷಕ್ಕೆ ಮಾರಾಟವಾಯ್ತು ಅಪರೂಪದ ಗೋಳಿ ಮೀನು
ಇದನ್ನೂ ಓದಿ : ಕಾಂಗ್ರೆಸ್ 17 ಅಭ್ಯರ್ಥಿಗಳ ಪಟ್ಟಿ ಪ್ರಕಟ
( Congress MLC ticket for son: BJP gate pass for father )