ಚಾಮರಾಜನಗರ : (Modi Bandipura visit) ರಾಜ್ಯದಲ್ಲಿ ಮುಂಬರುವ ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಪ್ರಚಾರ ಕಾರ್ಯ ಭರದಿಂದ ಸಾಗುತ್ತಿದೆ. ಚುನಾವಣೆ ಬೆನ್ನಲ್ಲೇ ಕೇಂದ್ರ ನಾಯಕರುಗಳು ರಾಜ್ಯಕ್ಕೆ ಮೇಲಿಂದ ಮೇಲೆ ಪ್ರವಾಸ ಕೈಗೊಳ್ಳುತ್ತಿದ್ದು, ರ್ಯಾಲಿ, ಸಾರ್ವಜನಿಕ ಸಭೆ, ರೋಡ್ ಶೋ ಇನ್ನಿತರ ಕಾರ್ಯಕ್ರಮಗಳ ಮೂಲಕ ಚುನಾವಣಾ ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ. ಚುನಾವಣಾ ಹಿನ್ನಲೆಯಲ್ಲಿ ಈಗಾಗಲೇ ರಾಜ್ಯಕ್ಕೆ ಏಳು ಬಾರಿ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇದೀಗ ಮತ್ತೊಮ್ಮೆ ರಾಜ್ಯಕ್ಕೆ ಆಗಮಿಸುತ್ತಿದ್ದು, ಬಂಡೀಪುರ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡಲಿದ್ದಾರೆ.
ಬಂಡೀಪುರ ಅರಣ್ಯವನ್ನು ಹುಲಿ ಸಂರಕ್ಷಿತಾರಣ್ಯವೆನ್ನುವುದಾಗಿ ಘೋಷಿಸಿ ಐವತ್ತು ವರ್ಷಗಳು ಸಂದಿದ್ದು, ಈ ಹಿನ್ನಲೆಯಲ್ಲಿ ಪ್ರಧಾನಿ ಮೋದಿ ಅವರು ನಾಳೆ ಬಂಡೀಪುರ ಅಭಯಾರಣ್ಯಕ್ಕೆ ಭೇಟಿ ನೀಡಲಿದ್ದಾರೆ. ಬಂಡೀಪುರ ಅರಣ್ಯ ಹುತಾತ್ಮರ ಸ್ಮಾರಕಕ್ಕೆ ನಮನ ಸಲ್ಲಿಸಿ ಬಳಿಕ ಅದೇ ಸ್ಥಳದಲ್ಲಿ ಅಂಚೆ ಲಕೋಟೆಯನ್ನು ಬಿಡುಗಡೆಗೊಳಿಸಲಿದ್ದಾರೆ. ಇದಾದ ಬಳಿಕ ಬಂಡೀಪುರದ ಕಾಡಿನಲ್ಲಿ ಎರಡು ಗಂಟೆಗಳಿಗೂ ಹೆಚ್ಚು ಕಾಲ ಸಫಾರಿ ನಡೆಸಲಿದ್ದಾರೆ. ಇನ್ನು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಫಾರಿ ನಡೆಸಿ ನಂತರ ಮುದುಮಲೈ ಅರಣ್ಯಪ್ರದೇಶಕ್ಕೆ ಭೇಟಿ ನೀಡಲಿದ್ದು, ಅಲ್ಲಿಯ ತೆಪ್ಪಕಾಡು ಆನೆಕ್ಯಾಂಪ್‌ನಲ್ಲಿ ಬೊಮ್ಮ ಮತ್ತು ಬೆಳ್ಳಿ ದಂಪತಿಯನ್ನು ಸನ್ಮಾನ ಮಾಡಲಿದ್ದಾರೆ.
ಈಗಾಗಲೇ ಏಳು ಬಾರಿ ರಾಜ್ಯಕ್ಕೆ ಆಗಮಿಸಿದ ಪ್ರಧಾನಿ ಮೋದಿ ಅವರು ಚುನಾವಣೆ ದಿನಾಂಕ ಹಾಗೂ ನೀತಿ ಸಂಹಿತೆ ಬಿಡುಗಡೆಯಾದ ನಂತರದಲ್ಲಿ ಮೊದಲ ಬಾರಿಗೆ ರಾಜ್ಯಕ್ಕೆ ಭೇಟಿ ನೀಡುತ್ತಿದ್ದು, ಚುನಾವಣೆ ದೃಷ್ಟಿಯಲ್ಲಿ ಜನರನ್ನು ಮೋದಿ ಮೋಡಿ ಮಾಡಲಿದ್ದಾರೆ. ಇದಲ್ಲದೇ ಇತ್ತೀಚಿನ ಹುಲಿ ಗಣತಿ ವರದಿ, ಹುಲಿ ಸಂರಕ್ಷಣೆಗಾಗಿ ಸರಕಾರ ಕೈಗೊಂಡ ಕ್ರಮಗಳ ವರದಿ ಹಾಗೂ ನಾಣ್ಯ ಸ್ಮರಣಿಕೆಗಳನ್ನು ಬಿಡುಗಡೆ ಮಾಡಲಿದ್ದಾರೆ. ಇದಾದ ಬಳಿಕ ದೇಶದ 12 ಹುಲಿಯೋಜನೆ ನಿರ್ದೇಶಕರ ಜೊತೆ ಮೋದಿ ಅವರು ಸಂವಾದವನ್ನು ನಡೆಸಲಿದ್ದು, ಈ ಹಿನ್ನಲೆಯಲ್ಲಿ ಭದ್ರತೆಯ ನಿಟ್ಟಿನಲ್ಲಿ ಬಂಡೀಪುರ ಹಾಗೂ ಮಧುಮಲೈ ಮಾರ್ಗವಾಗಿ ಸಂಚರಿಸುತ್ತಿರುವ ಎಲ್ಲಾ ವಾಹನಗಳ ತಪಾಸಣೆಗಳು ನಡೆಯುತ್ತಿದೆ.
ಪ್ರಧಾನಿ ಮೋದಿ ಅವರ ಬಂಡೀಪುರ ಪ್ರವಾಸದ ಸಂಪೂರ್ಣ ವಿವರ :
ಏ. 8 ರಂದು ರಾತ್ರಿ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಅಗಮಿಸುವ ಮೋದಿ ಅವರು ಇಲ್ಲಿನ ರ್ಯಾಡಿಸನ್ ಬ್ಲೂ ಹೋಟೆಲ್ ನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಮರುದಿನ ಬೆಳಿಗ್ಗೆ ಮಂಡಕಳ್ಳಿ ವಿಮಾನ ನಿಲ್ದಾಣದಿಂದ ಹೆಲಿಕಾಫ್ಟರ್ ಮೂಲಕವಾಗಿ ಬಂಡೀಪುರಕ್ಕೆ ತೆರಳಲಿದ್ದಾರೆ. ಬೆಳಿಗ್ಗೆ 7 ಗಂಟೆಯಿಂದ 9:30 ರವರೆಗೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಭೇಟಿ ನೀಡಿದ ಬಳಿಕ ತಮಿಳುನಾಡಿನ ನೀಲಗಿರಿಗೆ ಪ್ರಯಾಣ ಬೆಳೆಸಲಿದ್ದು, ಆನೆ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ. ನಂತರ ಪುನಃ ಮೈಸೂರಿಗೆ ಅಗಮಿಸಲಿರುವ ಮೋದಿ ಕೆಎಸ್‌ಒಯು ನ ಘಟಿಕೋತ್ಸವ ಭವನದಲ್ಲಿ ನಡೆಯುವ ಹುಲಿ ಯೋಜನೆಯ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ನಂತರದಲ್ಲಿ ದೆಹಲಿಗೆ ವಾಪಾಸ್ ತೆರಳಲಿದ್ದಾರೆ.
ಸಂಚಾರ ಬಂದ್, ಪೊಲೀಸ್ ಬಿಗಿ ಭದ್ರತೆ ;
ಇಂದು ಸಂಜೆ 4 ಗಂಟೆಯಿಂದ ನಾಳೆ ಮಧ್ಯಾಹ್ನ 12 ಗಂಟೆಯವರೆಗೆ ಬಂಡೀಪುರ ಮಾರ್ಗವಾಗಿ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 766 ನ್ನು ಸಂಪೂರ್ಣವಾಗಿ ಬಂದ್ ಮಾಡಲಾಗುತ್ತಿದೆ. ಈ ಹಿನ್ನಲೆಯಲ್ಲಿ ಬಂಡೀಪುರದಲ್ಲಿ ಸಕಲ ಸಿದ್ದತೆಗಳು ನಡೆದಿದ್ದು, ಭದ್ರತಾ ಕಾರ್ಯಗಳು ನಡೆಯುತ್ತಿವೆ. ಬಂಡೀಪುರದ ಸುತ್ತಮುತ್ತ ಮೂರು ದಿನಗಳಿಂದ ಸರ್ಪಗಾವಲು ರೂಪಿಸಿದ್ದು, ಸೇನಾ ಹೆಲಿಕಾಫ್ಟರ್ ಅನ್ನು ಹಾರಾಟ ನಡೆಸಿ ಪರೀಕ್ಷೆ ನಡೆಸಲಾಗಿದೆ.
Modi Bandipura visit: Modi’s arrival in the cultural city today: Here is the complete program details