ಮಂಗಳವಾರ, ಏಪ್ರಿಲ್ 29, 2025
Homepoliticsಉಡುಪಿಗೂ ಒಬ್ಬರು ಸಂಸದರಿದ್ದಾರಾ ? ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ

ಉಡುಪಿಗೂ ಒಬ್ಬರು ಸಂಸದರಿದ್ದಾರಾ ? ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ

- Advertisement -

ಉಡುಪಿ : ಕೊರೊನಾ ಹೊಡೆತಕ್ಕೆ ಕೃಷ್ಣನಗರಿ ಉಡುಪಿ ತತ್ತರಿಸಿದೆ. ಜಿಲ್ಲೆಯೊಂದರಲ್ಲಿಯೇ 12 ಸಾವಿರಕ್ಕೂ ಅಧಿಕ ಮಂದಿಗೆ ಸೋಂಕು ಕಾಣಿಸಿಕೊಂಡಿದೆ. ಇನ್ನೊಂದೆಡೆ ಕೊರೊನಾ ವಿಚಾರದಲ್ಲಿ ಜಿಲ್ಲೆಯಲ್ಲಿ ಸಾಕಷ್ಟು ಗೊಂದಲ ಏರ್ಪಟ್ಟಿದೆ. ಆದರೆ ಸಮಸ್ಯೆಯನ್ನು ಪರಿಹರಿಸ ಬೇಕಾದ ಸಂಸದರು ಮಾತ್ರ ನಾಪತ್ತೆಯಾಗಿದ್ದಾರೆ. ಈ ಹಿನ್ನೆಲೆಯಲ್ಲೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ಶುರುವಾಗಿದೆ.

ಶೋಭಾ ಕರಂದ್ಲಾಜೆ. ಬಿಜೆಪಿಯ ಪ್ರಭಾವಿ ರಾಜಕಾರಣಿ ಮಾಜಿ ಸಚಿವರಾಗಿ, ಸಂಸದರಾಗಿ ಹಲವು ವರ್ಷಗಳ ಕಾಲ ರಾಜಕೀಯದ ಅನುಭವವನ್ನು ಹೊಂದಿದವರು. ದಕ್ಷಿಣ ಕನ್ನಡ ಮೂಲದವರಾಗಿರುವ ಶೋಭಾ ಕರಂದ್ಲಾಜೆ ಕಳೆದೆರಡು ಅವಧಿಯಿಂದಲೂ ಉಡುಪಿ ಹಾಗೂ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಸಚಿವರಾಗಿ ಮಾದರಿ ಕಾರ್ಯಗಳನ್ನು ಮಾಡುವ ಮೂಲಕ ಜನಮೆಚ್ಚುಗೆಯನ್ನು ಗಳಿಸಿದವರು ಶೋಭಾ ಕರಂದ್ಲಾಜೆ. ಆದ್ರೆ ಅದೇನಾಯ್ತೋ ಗೊತ್ತಿಲ್ಲ ಸಚಿವರರಾಗಿ ಶೋಭಾ ಕರಂದ್ಲಾಜೆ ಅವರು ಮಾಡಿದ ಸಾಧನೆ ಇದೀಗ ಸಂಸದರಾದ ಮೇಲೆ ಕಾಣಿಸುತ್ತಿಲ್ಲ.

ಮೊದಲ ಅವಧಧಿಯಲ್ಲಿ ಸಂಸದರಾಗಿ ಆಯ್ಕೆಯಾಗಿದ್ದ ಶೋಭಾ ಕರಂದ್ಲಾಜೆ ಅವರ ವಿರುದ್ದ ಜಿಲ್ಲೆಯಲ್ಲಿ ಅಪಸ್ವರ ಕೇಳಿಬಂದಿತ್ತು. ಅಷ್ಟೇ ಅಲ್ಲಾ ಕಳೆದ ಚುನಾವಣೆಯ ಹೊತ್ತಲ್ಲೂ ಶೋಭಾ ಕರಂದ್ಲಾಜೆ ಅವರಿಗೆ ಟಿಕೆಟ್ ಅನುಮಾನವೆನ್ನುವ ಮಾತುಗಳು ಕೇಳಿಬಂದಿತ್ತು. ಆದ್ರೀಗ ಸಂಸದೆ ಶೋಭಾ ಕರಂದ್ಲಾಜೆ ವಿರುದ್ದ ಮತ್ತದೇ ಮುನಿಸು ಸ್ಪೋಟಗೊಳ್ಳುತ್ತಿದೆ. ಅಲ್ಲದೇ ಜಿಲ್ಲೆಯ ವಿಚಾರದಲ್ಲಿ ಶೋಭಾ ಕರಂದ್ಲಾಜೆ ಅವರು ತೋರಿದ ನಿರ್ಲಕ್ಷ್ಯದ ವಿರುದ್ದ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ.

ಉಡುಪಿ ಜಿಲ್ಲೆಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿದ್ದಂತೆಯೇ ಜಿಲ್ಲಾಡಳಿತ ಅಲರ್ಟ್ ಆಗಿತ್ತು. ಆದರೆ ಜಿಲ್ಲಾಡಳಿತಕ್ಕೆ ಮಾರ್ಗದರ್ಶನ ನೀಡಬೇಕಾದ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ್ ಬೊಮ್ಮಾಯಿ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಅವರು ಮಾತ್ರ ಜಿಲ್ಲೆಯತ್ತ ಮುಖಮಾಡಿರಲಿಲ್ಲ.

ಅದ್ಯಾವಾಗ ಜನರ ಆಕ್ರೋಶ ಶುರುವಾಯ್ತೋ ಆವಾಗ್ಲೆ ಉಸ್ತುವಾರಿ ಸಚಿವ ಬೊಮ್ಮಾಯಿ ಅವರು ಜಿಲ್ಲಾಧಿಕಾರಿಗಳ ಜೊತೆಗೆ ವಿಡಿಯೋ ಕಾನ್ಪರೆನ್ಸ್ ಮಾಡಿದ್ರೆ, ಸಂಸದೆ ಶೋಭಾ ಕರಂದ್ಲಾಜೆ ಆಹಾರದ ಕಿಟ್ ವಿತರಿಸೋ ಕಾರ್ಯವನ್ನು ಮಾಡಿದ್ದಾರೆ. ಆಗೊಮ್ಮೆ ಈಗೊಮ್ಮೆ ಜಿಲ್ಲೆಯಲ್ಲಿ ಕಾಣಿಸಿಕೊಳ್ಳುವ ಸಂಸದರನ್ನು ಜಿಲ್ಲೆಯ ಜನತೆ ಮರೆಯುವಷ್ಟರ ಮಟ್ಟಿಗೆ ಜಿಲ್ಲೆಯಿಂದ ಅವರು ದೂರವಾದಂತಿದೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.

ಹಿರಿಯ ಪ್ರಭಾವಿ ರಾಜಕಾರಣಿಯೋರ್ವರು ತಮ್ಮ ಜಿಲ್ಲೆಯನ್ನು ಪ್ರತಿನಿಧಿಸುತ್ತಾರೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ಸಮಗ್ರ ಅಭಿವೃದ್ದಿಗೆ ಸಹಕಾರವಾಗುತ್ತೆ ಅನ್ನೋ ಕಾರಣದಿಂದಲೇ ಜಿಲ್ಲೆಯ ಜನರು ಶೋಭಾ ಕರಂದ್ಲಾಜೆ ಅವರಿಗೆ ಮಣೆ ಹಾಕಿದ್ದರು. ಆದರೆ ಸಂಸದರಾಗಿ ಆಯ್ಕೆಯಾದ ಮೇಲೆ ಜಿಲ್ಲೆಯಲ್ಲಿ ಸಂಸದರ ಸಾಧನೆ ಅಷ್ಟಕ್ಕಷ್ಟೇ.

ಕೇಂದ್ರದಲ್ಲಿ ಪ್ರಭಾವಿ ಹುದ್ದೆಯನ್ನು ಅಲಂಕರಿಸುವಷ್ಟರ ಮಟ್ಟಿಗೆ ಸಾಮರ್ಥ್ಯವನ್ನು ಹೊಂದಿದ್ದ ಶೋಭಾ ಮೇಡಂ ಅದ್ಯಾವ ಕಾರಣಕ್ಕೆ ಜಿಲ್ಲೆಯಿಂದ ದೂರವಾಗಿದ್ದಾರೆ ಅನ್ನೋ ಪ್ರಶ್ನೆ ಜನರನ್ನು ಕಾಡುತ್ತಿದೆ. ಜಿಲ್ಲೆಯಲ್ಲಿ ಕೊರೊನಾ ವೈರಸ್ ಸೋಂಕಿನ ವಿಚಾರದಲ್ಲಿ ಜನರು ಸಾಕಷ್ಟು ಗೊಂದಲಕ್ಕೆ ಸಿಲುಕಿದ್ದಾರೆ.

ಈ ನಡುವಲ್ಲೇ ಕೊರೊನಾ ವಿಚಾರದಲ್ಲಿ ನಡೆದ ಸಾವು, ಅಂತ್ಯಕ್ರೀಯೆಯ ಗೊಂದಲ, ತಪಾಸಣಾ ವರದಿಯ ಎಡವಟ್ಟು ಹೀಗೆ ಹಲವು ರೀತಿಯಲ್ಲಿಯೂ ಜನರು ಅನುಮಾನ ಪಡುವ ಸ್ಥಿತಿ ನಿರ್ಮಾಣವಾಗಿದೆ. ಆದರೆ ಸಂಸದರಾಗಲಿ, ಜಿಲ್ಲಾ ಉಸ್ತುವಾರಿ ಸಚಿವರಾಗಲಿ ಕ್ಯಾರೇ ಅನ್ನುತ್ತಿಲ್ಲ. ಇದೇ ಕಾರಣಕ್ಕೆ ಜಿಲ್ಲೆಯ ಶಾಸಕರಿಗೆ ಸಚಿವ ಸ್ಥಾನ ನೀಡಬೇಕೆಂಬ ಕೂಗು ಕೇಳಿಬಂದಿತ್ತು. ಹೀಗೆ ಮುಂದುವರಿದ್ರೆ ಜಿಲ್ಲೆಯಲ್ಲಿ ಜನಪ್ರತಿನಿಧಿಗಳ ವಿರುದ್ದ ಆಕ್ರೋಶ ಎದುರಾದ್ರು ಅಚ್ಚರಿ ಪಡುವಂತಿಲ್ಲ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular