ಸೊರಬ : ಅದು ರಾಜ್ಯ ಕಂಡ ಶ್ರೇಷ್ಟ ಮುಖ್ಯಮಂತ್ರಿಯೋರ್ವರ ತವರು ಕ್ಷೇತ್ರ. ಖಡಕ್ ನಿಲುವು, ಭ್ರಷ್ಟಾಚಾರ ಮುಕ್ತ ಆಡಳಿತದಿಂದಲೇ ಜನಮನ ಗೆದ್ದವರು. ಆದ್ರೀಗ ಮಾಜಿ ಮುಖ್ಯಮಂತ್ರಿಗಳು ತಮ್ಮ ಜೊತೆಗಿಲ್ಲಾ ಅನ್ನೋ ಕೊರಗನ್ನು ನೀಗಿಸಿದ್ದಾರೆ ಅವರ ಪುತ್ರ. ಅಪ್ಪನ ಹಾದಿಯಲ್ಲಿಯೇ ಮುನ್ನಡೆಯುತ್ತಿರೋ ಶಾಸಕರ ಕಾರ್ಯವೈಖರಿಯನ್ನ ನೋಡಿದ್ರೆ ನೀವೂ ಫೀದಾ ಆಗೋದು ಗ್ಯಾರಂಟಿ.

ಸಾರೇಕೊಪ್ಪ ಬಂಗಾರಪ್ಪ. ಕರ್ನಾಟಕ ರಾಜ್ಯದ 12ನೇ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದವರು. ರಾಜ್ಯ ಕಂಡ ಅತೀ ವರ್ಣರಂಜಿತ ರಾಜಕಾರಣಿ, ಬಡವರ ಬಂಧು, ಹಿಂದುಳಿದ ವರ್ಗಗಳ ನೇತಾರ, ಬಡವರ ಪಾಲಿನ ಆಶಾಕಿರಣ. ಈಡಿಗರ ಸಮುದಾಯದ ಪ್ರಭಾವಿ ರಾಜಕಾರಣಿ. ಇಂತಹ ಸಾರೇಕೊಪ್ಪ ಬಂಗಾರಪ್ಪ ಇಂದು ಜನರೊಂದಿಗಿಲ್ಲ ಆದರೂ ಅವರನ್ನು ಜನ ಇಂದಿಗೂ ಕೊಂಡಾಡುತ್ತಿದ್ದಾರೆ. ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಕುಬಟೂರು ಗ್ರಾಮದಲ್ಲಿ ಜನಿಸಿದ್ದ ಬಂಗಾರಪ್ಪ ರಾಷ್ಟ್ರಮಟ್ಟದಲ್ಲಿ ಬೆಳೆದ ಹಿಂದುಳಿದ ವರ್ಗಗಳ ನಾಯಕ.

ಸೊರಬ ಕ್ಷೇತ್ರದಿಂದ ರಾಜಕೀಯಕ್ಕೆ ಧುಮುಕಿದ್ದ ಬಂಗಾರಪ್ಪ ರಾಜಕೀಯದಲ್ಲಿ ಸೋಲಿಲ್ಲದ ಸರದಾರರಾಗಿ ಮೆರೆದವರು. ಬಂಗಾರಪ್ಪನವರ ಕಾರ್ಯವೈಖರಿಗೆ ಅಧಿಕಾರಿಗಳು ನಡುಗಿ ಹೋಗುತ್ತಿದ್ರು. ಜನರ ಸಮಸ್ಯೆಗಳಿಗೆ ನಿಂತಲ್ಲಿಯೇ ಪರಿಹಾರವನ್ನು ದೊರಕಿಸಿಕೊಡುತ್ತಿದ್ದ ಜನನಾಯಕರಾಗಿ ಮೆರೆದವರು.

ತಂದೆ ಹಾಕಿಕೊಟ್ಟ ಹಾದಿಯಲ್ಲಿಯೇ ಇದೀಗ ಹಿರಿಯ ಮಗ ಕುಮಾರ ಬಂಗಾರಪ್ಪ ಮುನ್ನಡೆಯುತ್ತಿದ್ದಾರೆ. ಸೊರಬ ಕ್ಷೇತ್ರದ ಬಿಜೆಪಿ ಶಾಸಕರಾಗಿ ಆಯ್ಕೆಯಾಗಿರುವ ಕುಮಾರ ಬಂಗಾರಪ್ಪ ತಮ್ಮ ಕಾರ್ಯವೈಖರಿಯಿಂದಲೇ ಕ್ಷೇತ್ರದ ಜನರ ಮನಗೆದ್ದಿದ್ದಾರೆ. ಅಭಿವೃದ್ದಿಯಿಂದ ಹಿಂದುಳಿದ್ದ ಸೊರಬ ಕ್ಷೇತ್ರ ಅಭಿವೃದ್ದಿ ಪಥದತ್ತ ಮುನ್ನಡೆಯುವಂತೆ ಮಾಡುತ್ತಿದ್ದಾರೆ. ಮಾತ್ರವಲ್ಲ ಜಡ್ಡುಕಟ್ಟಿರುವ ಆಡಳಿತ ಯಂತ್ರಕ್ಕೆ ಬಿಸಿಮುಟ್ಟಿಸುವ ಕಾರ್ಯವನ್ನು ಕುಮಾರ ಬಂಗಾರಪ್ಪ ಮಾಡುತ್ತಿದ್ದಾರೆ. ಅಧಿಕಾರಿಗಳ ಚಳಿ ಬಿಡಿಸುವ ಮೂಲಕ ಸಮಸ್ಯೆ ಹೇಳಿಕೊಂಡು ತಮ್ಮ ಬಳಿಗೆ ಬರುವ ಜನರಿಗೆ ಪರಿಹಾರವನ್ನು ದೊರಕಿಸಿಕೊಡುವ ಕಾರ್ಯದಲ್ಲಿ ತಮ್ಮನ್ನ ತೊಡಗಿಸಿಕೊಂಡಿದ್ದಾರೆ.

ಸಿನಿಮಾ ನಟರಾಗಿ ಅಶ್ವಮೇಧ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಕುಮಾರ ಬಂಗಾರಪ್ಪ ಕನ್ನಡ ಚಿತ್ರರಂಗ ಕಂಡ ಶ್ರೇಷ್ಟ ನಟರೂ ಹೌದು, ಸುಮಾರು 19 ಕನ್ನಡ ಸಿನಿಮಾಗಳಲ್ಲಿ ನಟಿಸಿ ಮನೆ ಮಾತಾಗಿದ್ದಾರೆ. 1996ರಲ್ಲಿ ರಾಜಕೀಯಕ್ಕೆ ಎಂಟ್ರಿಕೊಟ್ಟ ಕುಮಾರ ಬಂಗಾರಪ್ಪ ಸತತವಾಗಿ ಮೂರು ಬಾರಿ ಶಾಸಕರಾಗಿ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ. ತದನಂತರದ ರಾಜಕೀಯದಲ್ಲಿ ಹಲವು ಏಳುಬೀಳುಗಳನ್ನು ಕಂಡಿದ್ದಾರೆ. ಒಟ್ಟು 4 ಬಾರಿ ಶಾಸಕರಾಗಿ, ಒಂದು ಬಾರಿ ಸಚಿವರಾದ ಹೆಗ್ಗಳಿಕೆಯೂ ಇವರದ್ದು.

ಕಾಂಗ್ರೆಸ್ ಪಕ್ಷದ ವಿರುದ್ದ ಮುನಿಸಿಕೊಂಡು 2018ರಲ್ಲಿ ಬಿಜೆಪಿ ಸೇರಿದ್ದ ಕುಮಾರ ಬಂಗಾರಪ್ಪ ಶಾಸಕರಾಗಿ ಆಯ್ಕೆಯಾಗಿದ್ದಾರೆ. ತಾವಾಯ್ತು ತಮ್ಮ ಕ್ಷೇತ್ರವಾಯ್ತು ಅಂತಾ ಸೊರಬ ಕ್ಷೇತ್ರದಲ್ಲಿಯೇ ಹೆಚ್ಚಾಗಿ ಕಾಣಿಸಿಕೊಳ್ಳುವ ಕುಮಾರ ಬಂಗಾರಪ್ಪ ತಮ್ಮ ಕ್ಷೇತ್ರದ ಸಮಸ್ಯೆಗಳನ್ನು ಪರಿಹರಿಸುವತ್ತ ಮುನ್ನೆಡೆಯುತ್ತಿದ್ದಾರೆ.

ಸೊರಬದ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯದ ಶೌಚಾಲಯ ಕಾಮಗಾರಿಯನ್ನು ಕಾಟಾಚಾರಕ್ಕೆ ನಡೆಸಿದ್ರು. ಈ ಬಗ್ಗೆ ದೂರು ಬರ್ತಾ ಇದ್ದಂತೆಯೇ ಸೀದಾ ಕಾಲೇಜಿಗೆ ಎಂಟ್ರಿಕೊಟ್ಟು, ಗುತ್ತಿಗೆದಾರರ ಚಳಿ ಬಿಡಿಸಿದ್ರು.
ಸೊರಬ ತಾಲೂಕು ಕಚೇರಿಯಲ್ಲಿರುವ ಸಬ್ ರಜಿಸ್ಟ್ರಾರ್ ಕಚೇರಿಯಲ್ಲಿ ಹಲವು ವರ್ಷಗಳಿಂದಲೂ ಭ್ರಷ್ಟಾಚಾರ ತುಂಬಿತುಳುಕುತ್ತಿತ್ತು. ಈ ಬಗ್ಗೆ ಜನರು ಹಿರಿಯ ಅಧಿಕಾರಿಗಳಿಗೆ ದೂರು ಕೊಟ್ಟಿದ್ರು ಯಾವುದೇ ಪ್ರಯೋಜನವಾಗಿರಲಿಲ್ಲ. ಹೀಗಾಗಿಯೇ ಜನರು ಶಾಸಕರ ಬಳಿ ತಮ್ಮ ಸಮಸ್ಯೆ ಬಗೆ ಹರಿಸುವಂತೆ ಮನವಿ ಮಾಡಿಕೊಂಡಿದ್ದರು. ಸೀದಾ ಸಬ್ ರಿಜಿಸ್ಟ್ರಾರ್ ಕಚೇರಿಗೆ ಭೇಟಿಕೊಟ್ಟು ಭ್ರಷ್ಟಾಚಾರ ನಡೆಸುತ್ತಿದ್ದ ಅಧಿಕಾರಿಗಳನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದರು.

ಡಾಟಾ ಎಂಟ್ರಿ ಆಪರೇಟರ್ ವೋರ್ವರು ಬಡ ರೈತರೋರ್ವರಿಂದ 14,000 ಹಣ ಪಡೆದು ಕೇವಲ 2,660 ರಶೀದಿ ನೀಡಿದ್ರು. ಈ ಕುರಿತು ಶಾಸಕರಿಗೆ ಬಡ ರೈತ ದೂರು ನೀಡಿದ್ದಾರೆ. ಕೆರಳಿ ಕೆಂಡವಾದ ಶಾಸಕರು ಯಾವುದೇ ಮುನ್ಸೂಚನೆಯನ್ನು ನೀಡದೇ ಕಚೇರಿಗೆ ಆಗಮಿಸಿ ಡಾಟಾ ಎಂಟ್ರಿ ಆಪರೇಟರ್ ಗೆ ಚಳಿ ಬಿಡಿಸಿದ್ದು, ಮಾತ್ರವಲ್ಲ ಇತರ ಅಧಿಕಾರಿಗಳಿಗೂ ನಡುಕು ಹುಟ್ಟಿಸಿದ್ದಾರೆ.
ಇದು ಕೇವಲ ಸ್ಯಾಂಪಲ್ ಅಷ್ಟೇ. ಶಾಸಕ ಕುಮಾರ್ ಬಂಗಾರಪ್ಪ ತಮ್ಮ ಕ್ಷೇತ್ರದಲ್ಲಿ ನಿತ್ಯವೂ ಜನರ ಸಮಸ್ಯೆಗೆ ಮುಕ್ತಿ ದೊರಕಿಸಿಕೊಡುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ಕೆಲಸ ಮಾಡುವ ಅಧಿಕಾರಿಗಳನ್ನು ಬೆನ್ನು ತಟ್ಟುತ್ತಾ, ಕೆಲಸ ಮಾಡದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

ಪ್ರತಿನಿತ್ಯವೂ ಒಂದಿಲ್ಲೊಂದು ಕಚೇರಿಗೆ ಭೇಟಿಕೊಟ್ಟು ಜನರ ಸಮಸ್ಯೆಯ ಜೊತೆಗೆ ಅಧಿಕಾರಿಗಳ ಕುಂದುಕೊರತೆಗಳನ್ನು ಆಲಿಸುತ್ತಿದ್ದಾರೆ. ಇಂತಹದ್ದೇ ಕಾರ್ಯವೈಖರಿಯಿಂದಲೇ ಬಂಗಾರಪ್ಪ ಜನನಾಯಕನಾಗಿ ಗುರುತಿಸಿಕೊಂಡಿದ್ದರು. ಇದೀಗ ಶಾಸಕ ಕುಮಾರ ಬಂಗಾರಪ್ಪ ಕೂಡ ಅದೇ ಹಾದಿಯಲ್ಲಿಯೇ ಮುನ್ನಡೆಯುತ್ತಿದ್ದಾರೆ.
ಪ್ರತೀ ದಿನ ಶಾಸಕ ಕುಮಾರ್ ಬಂಗಾರಪ್ಪ ಅವರು ಮಾಡುವ ಕಾರ್ಯವನ್ನು ಪ್ರತೀ ಶಾಸಕರು ತಿಂಗಳಲ್ಲಿ ಒಮ್ಮೆ ಮಾಡಿದ್ರೆ ಸಾಕು ಜನರ ಸಮಸ್ಯೆಗೆ ಪರಿಹಾರ ದೊರಕುವುದು ಮಾತ್ರವಲ್ಲ ಕ್ಷೇತ್ರದ ಅಭಿವೃದ್ದಿಯೂ ಸಾಧ್ಯವಾಗುತ್ತೆ.