H D Kumaraswamy; ಬೆಂಗಳೂರು: ಲೋಕಾಯುಕ್ತ ಐಜಿಪಿಯಾಗಿರುವ ಐಪಿಎಸ್ ಅಧಿಕಾರಿ ಎಂ. ಚಂದ್ರಶೇಖರ್ ವಿರುದ್ಧ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ( H D Kumaraswamy) ಗಂಭೀರ ಆರೋಪ ಮಾಡಿದ್ದಾರೆ.ಬೆಂಗಳೂರಿನಲ್ಲಿ ಇಂದು ಜೆಡಿಎಸ್ ಮುಖ್ಯ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಹೆಚ್.ಡಿ. ಕುಮಾರಸ್ವಾಮಿ, ಐಜಿಪಿ ಚಂದ್ರಶೇಖರ್ ವಿರುದ್ಧ ಕಿಡಿ ಕಿಡಿಯಾಗಿದ್ದಾರೆ.

Image credit to Original Source
ಲೋಕಾಯುಕ್ತ (Lokayukta) ಮತ್ತು ರಾಜ್ಯ ಸರ್ಕಾರಕ್ಕೆ ರಾಜ್ಯಪಾಲರು ಮಾಹಿತಿ ಕೋರಿ ಬರೆದಿದ್ದ ಗೌಪ್ಯ ಪತ್ರಗಳು ಬಹಿರಂಗವಾಗಿದ್ದ ಪ್ರಕರಣದಲ್ಲಿ ರಾಜ್ಯಪಾಲರ ಕಚೇರಿ ಅಧಿಕಾರಿಗಳು ಮತ್ತು ಸಿಬ್ಬಂದಿ ತನಿಖೆಗೆ ಅನುಮತಿ ಕೋರಿದ್ದ ಐಜಿಪಿ ಚಂದ್ರಶೇಖರ್ ಬಗ್ಗೆ ಸಿಟ್ಟಾಗಿರುವ ಕುಮಾರಸ್ವಾಮಿ,ಈ ಅಧಿಕಾರಿ ಸರಣಿ ಅಪರಾಧ, ಅಕ್ರಮಗಳಲ್ಲಿ ಶಾಮೀಲಾಗಿದ್ದು, ರಾಜಕಾಲುವೆ ಮೇಲೆ 38 ಮಹಡಿ ನಿರ್ಮಾಣ ಮಾಡುತ್ತಿರುವುದಲ್ಲದೇ, ಅಧೀನ ಅಧಿಕಾರಿಗೆ 20 ಕೋಟಿ ರೂಪಾಯಿ ಕೊಡುವಂತೆ ಬೇಡಿಕೆ ಇರಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಸರಣಿ ಅಪರಾಧಗಳನ್ನು ಮಾಡಿರುವ ಭ್ರಷ್ಟ ಐಪಿಎಸ್ ಅಧಿಕಾರಿಯೊಬ್ಬ ರಾಜ್ಯಪಾಲರ ಕಚೇರಿಯ ಸಿಬ್ಬಂದಿಯನ್ನು ತನಿಖೆ ಮಾಡುವ ಅನುಮತಿ ಕೇಳಿದ್ದಾನೆ. ಈತನಿಗೆ ರಾಜ್ಯ ಕಾಂಗ್ರೆಸ್ ಸರ್ಕಾರದ ಪೂರ್ಣ ಕೃಪಾಕಟಾಕ್ಷವಿದೆ ಎಂದು ನೇರ ಆರೋಪ ಮಾಡಿರುವ ಕುಮಾರಸ್ವಾಮಿ, ಇಂತಹ ದರೋಡೆಕೋರ ಅಧಿಕಾರಿಗಳನ್ನು ಇಟ್ಟುಕೊಂಡು ರಾಜ್ಯ ಸರ್ಕಾರ ತನಿಖೆ ಮಾಡಿಸುತ್ತಿದೆ ಎಂದು ಟೀಕಿಸಿದ್ದಾರೆ.
ಅಲ್ಲದೇ, ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಯಾವ ತನಿಖೆಯೂ ಪಾರದರ್ಶಕವಾಗಿ ನಡೆಯುತ್ತಿಲ್ಲ. ರಾಜಕೀಯ ಸೇಡಿಗಾಗಿ ತನಿಖೆ ನಡೆಸಲಾಗುತ್ತಿದೆ. ಅದಕ್ಕೆ ಚಂದ್ರಶೇಖರ್ ಅವರಂತಹ ಕಳಂಕಿತ ಅಧಿಕಾರಿಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಈ ಅಧಿಕಾರಿಯ ವಿರುದ್ಧ ಕೇಂದ್ರ ಗೃಹ ಸಚಿವಾಲಯಕ್ಕೆ ದೂರು ನೀಡಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಕುಮಾರಸ್ವಾಮಿ ಹೇಳಿದ್ದಾರೆ.
ಇದೇ ವೇಳೆ, ಮೊದಲೇ ಸರಣಿ ಅಪರಾಧಗಳನ್ನು ಮಾಡಿ ಸಿಕ್ಕಿ ಹಾಕಿಕೊಂಡಿರುವ ಐಜಿಪಿ ಚಂದ್ರಶೇಖರ್ ಅವರಿಗೆ ರಾಜ್ಯ ಸರ್ಕಾರ ಆಮಿಷಗಳನ್ನು ಒಡ್ಡಿ ಇಂತಹ ಕಾನೂನು ಬಾಹಿರ ಕೃತ್ಯ ಮಾಡಿಸುತ್ತಿದೆ. ಅವರಿಗೆ ಬೆಂಗಳೂರು ನಗರದ ಪೊಲೀಸ್ ಆಯುಕ್ತರ ಹುದ್ದೆಯ ಆಮಿಷ ಒಡ್ಡಲಾಗಿದೆ. ಈ ಸರ್ಕಾರ ಒಬ್ಬರಿಗೆ ಈ ರೀತಿಯ ಆಮಿಷ ಒಡ್ಡಿಲ್ಲ.. ಬಿ.ಕೆ.ಸಿಂಗ್, ಎಂ.ಚಂದ್ರಶೇಖರ್, ಗುಪ್ತದಳ ಮುಖ್ಯಸ್ಥರು ಸೇರಿದಂತೆ ಅನೇಕರಿಗೆ ಕಮಿಷನರ್ ಮಾಡುತ್ತೇವೆ ಎಂದು ಟೋಪಿ ಹಾಕಿದ್ದಾರೆ. ಇಂಥ ಸರ್ಕಾರದಲ್ಲಿ ತನಿಖೆಗಳು ಪಾರದರ್ಶಕವಾಗಿ ನಡೆಯುತ್ತವೆ ಎನ್ನುವ ನಂಬಿಕೆ ಇಲ್ಲ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಹೇಳಿದ್ದಾರೆ.

Image credit to Original Source
ಇದೇ ವೇಳೆ, ಐಪಿಎಸ್ ಅಧಿಕಾರಿ ಚಂದ್ರಶೇಖರ್ ಮೂಲತಃ ಹಿಮಾಚಲ ಪ್ರದೇಶದ ಕೇಡರ್ ನವರಾಗಿದ್ದು, ಐದು ವರ್ಷಗಳ ಅವಧಿಗೆ ನಿಯೋಜನೆ ಮೇಲೆ ಕರ್ನಾಟಕಕ್ಕೆ ಬಂದ ಚಂದ್ರಶೇಖರ್ ಹಿಮಾಚಲ ಪ್ರದೇಶದಲ್ಲಿ ಹವಾಮಾನ ಸರಿಯಾಗಿಲ್ಲ ಎಂದು ಸುಳ್ಳು ದಾಖಲೆ ಸೃಷ್ಟಿ ಮಾಡಿ ಕರ್ನಾಟಕದಲ್ಲೇ ಅಧಿಕಾರದಲ್ಲಿ ಮುಂದುವರೆದಿದ್ದಾರೆ ಎಂದೂ ಕುಮಾರಸ್ವಾಮಿ ಆರೋಪಿಸಿದ್ದಾರೆ.
Union minister Kumaraswamy allegation against IPS officer