ಹಿಂದೆಲ್ಲಾ ಪರಿಶುದ್ದಗಾಳಿ, ನೀರು ನಮಗೆ ಉಚಿತವಾಗಿ ಸಿಗುತ್ತಿತ್ತು. ಆದ್ರೀಗ ಶುದ್ದ ನೀರನ್ನು ಬಾಟಲಿಗಳ ಮೂಲಕ ಮಾರಾಟ ಮಾಡಲಾಗುತ್ತಿದೆ. ಹಣಕೊಟ್ಟು ನೀರು ಕುಡಿಯೋ ಕಾಲ ಬಂದು ಹಲವು ವರ್ಷಗಳೇ ಕಳೆದುಹೋಗಿದೆ. ನೀರಿನ ನಂತರ ಇದೀಗ ಶುದ್ದಗಾಳಿ ಮಾರಾಟಕ್ಕೆ ರೆಡಿಯಾಗಿದೆ. ಆಮ್ಲಜನಕ ಬಾರ್ ಗಳ ಮೂಲಕ ಜನ ಹಣ ನೀಡಿ ಶುದ್ದ ಗಾಳಿ ಸೇವನೆ ಮಾಡ್ತಿದ್ದಾರೆ.

ಇದು ಯಾವುದೋ ದೇಶದ ಸ್ಪೋರಿ ಅಲ್ಲಾ. ಬದಲಾಗಿ ರಾಷ್ಟ್ರ ರಾಜಧಾನಿ ನವದೆಹಲಿಯ ದುಸ್ಥಿತಿ. ದೆಹಲಿಯಲ್ಲಿ ಮಾಲಿನ್ಯದ ಮಟ್ಟ ಅಪಾಯದ ಸ್ಥಿತಿಯನ್ನು ತಲುಪಿದೆ. ದೆಹಲಿ ಸುತ್ತಮುತ್ತಲೂ ದಟ್ಟ ಹೊಗೆ ಮಂಜು ಸಾಮಾನ್ಯವಾಗಿದೆ. ಆರೋಗ್ಯ ತುರ್ತು ಪರಿಸ್ಥಿತಿ ಸೃಷ್ಟಿಯಾಗಿದ್ದು, ಜನರಿಗೆ ‘ಆಕ್ಸಿಜನ್ ಬಾರ್’ ತಕ್ಷಣದ ಪರಿಹಾರವಾಗಿ ಗೋಚರಿಸಿದೆ. ಆಕ್ಸಿಪ್ಯೂರ್ ಮಳಿಗೆಯಲ್ಲಿ ಗ್ರಾಹಕರು ನಳಿಕೆಗಳ ಮೂಲಕ ಆಮ್ಲಜನಕ ಹೀರಬಹುದಾಗಿದೆ. ನವದೆಹಲಿಯಲ್ಲಿ ಆರಂಭಗೊಂಡಿರೋ ಆಮ್ಲಜನಕದ ಬಾರ್ ಗಳಿಗೆ ಬಾರೀ ಬೇಡಿಕೆ ಉಂಟಾಗಿದ್ದು, ಗಾಳಿ ಸೇವನೆಗಾಗಿ ಜನ ಸಾಲುಗಟ್ಟಿ ನಿಂತಿದ್ದಾರೆ.

ವಾಯು ಮಾಲಿನ್ಯದ ದುಷ್ಪರಿಣಾಮದಿಂದಾಗಿ ಕಣ್ಣಿನ ಉರಿ, ತುರಿತ, ಮೂಗಿನಲ್ಲಿ ನೀರು ಸೋರುವುದು, ಗಂಟಲು ಊತದಂತಹ ಆರೋಗ್ಯ ಸಮಸ್ಯೆಗಳು ದೆಹಲಿಯ ನಿವಾಸಿಗಳಿಗೆ ಮಾಮೂಲು. ಆರೋಗ್ಯದ ಸಮಸ್ಯೆಯನ್ನು ಪರಿಹರಿಸಿಕೊಳ್ಳುವ ಸಲುವಾಗಿ ಮೂಗಿನ ನಳಿಕೆ ಮೂಲಕ 15 ನಿಮಿಷ ಆಮ್ಲಜನಕ ಸೇವಿಸಲು 299 ರಿಂದ 499 ರೂಪಾಯಿ ನೀಡಬೇಕು. ಏಳು ಬಗೆಯ ಸುಗಂಧ ಮಿಶ್ರಿತ ಆಮ್ಲಜನಕ ಲಭ್ಯವಿದ್ದು, . ಲ್ಯಾವೆಂಡರ್ ಮತ್ತು ಸುಗಂಧ ಹೊಂದಿರುವ ನಿಂಬೆ ಗರಿಕೆಗಳ ಸುವಾಸನೆಗಳ ಸಹಿತ ಶುದ್ಧ ಗಾಳಿಯು ಸೇವನೆ ಮಾಡುತ್ತಿದ್ದಾರೆ.

‘ವಾಯುಮಾಲಿನ್ಯ ವಿಶೇಷ’ವಾಗಿ ನಾಲ್ಕು ಅವಧಿಗೆ ನೀಡುವ ಹಣದಲ್ಲಿ ಐದು ಬಾರಿ ಆಮ್ಲಜನಕ ಸೇವನೆ ಕೊಡುಗೆಯನ್ನು ಆಕ್ಸಿ ಪ್ಯೂರ್ ನೀಡುತ್ತಿದೆ. ಮುಂದಿನ ದಿನಗಳಲ್ಲಿ ದೆಹಲಿ ಮಾತ್ರವಲ್ಲದೇ ಮುಂಬೈ, ಬೆಂಗಳೂರಿನಲ್ಲಿಯೂ ಆಮ್ಲಜನಕದ ಬಾರ್ ತೆರೆಯೋ ಉದ್ದೇಶವನ್ನು ಆಕ್ಸಿಪ್ಯೂರ್ ಕಂಪೆನಿ ಹೊಂದಿದೆ. ದೆಹಲಿಯೊಂದರಲ್ಲಿಯೇ ಸುಮಾರು 4.6 ಕೋಟಿ ಜನರಿದ್ದಾರೆ. ಮಾಲಿನ್ಯ ನಿಯಂತ್ರಣಕ್ಕೆ ಮಾಡಿದ ಪ್ರಯತ್ನಗಳೆಲ್ಲಾ ವಿಫಲವಾಗುತ್ತಿದೆ. ಕೃತಕ ಮಳೆಯ ಸೃಷ್ಟಿಗೂ ಸರಕಾರ ಮುಂದಾಗುತ್ತಿದೆ. ಆದರೆ ಹೇರಳ ಪ್ರಮಾಣದಲ್ಲಿ ತ್ಯಾಜ್ಯಗಳನ್ನು ಸುಡುವುದರಿಂದ ಉಂಟಾಗುತ್ತಿರೋ ದಟ್ಟ ಹೊಗೆ ಮಹಾನಗರದಾದ್ಯಂತ ಮಾಲಿನ್ಯವನ್ನುಂಟು ಮಾಡುತ್ತಿದೆ. ಮಕ್ಕಳು, ವೃದ್ದರೂ ತೀವ್ರ ತರಹದ ಆರೋಗ್ಯ ಸಮಸ್ಯೆಗೆ ತತ್ತರಿಸಿದ್ದಾರೆ. ಅಕ್ಸಿಜನ್ ಬಾರ್ ಗಳ ಮೂಲಕ 15 ನಿಮಿಷಗಳ ಕಾಲ ಶುದ್ದಗಾಳಿಯನ್ನು ಜನ ಸೇವನೆ ಮಾಡುತ್ತಿದ್ರೆ. ಮುಂದಿನ ದಿನಗಳಲ್ಲಿ ಆಕ್ಸಿಜನ್ ಇಲ್ಲದೆ ಮನೆಯಿಂದ ಹೊರ ಬರಲಾರದ ಕಾಲ ದೂರವಿಲ್ಲಾ.

ಇದು ಕೇವಲ ರಾಷ್ಟ್ರರಾಜಧಾನಿ ದೆಹಲಿ ಸ್ಥಿತಿಯಷ್ಟೇ ಅಲ್ಲಾ, ದೇಶದ ಇತರ ಕಡೆಗಳಲ್ಲಿಯೂ ಮಾಲಿನ್ಯದ ಪ್ರಮಾಣ ಹೆಚ್ಚುತ್ತಿದ್ದು, ಈಗಲೇ ಎಚ್ಚೆತ್ತುಕೊಳ್ಳದಿದ್ರೆ, ಶುದ್ದಗಾಳಿಗೆ ಬಂಗಾರ ಬೆಲೆ ತೆರಬೇಕಾದ ಸ್ಥಿತಿ ಬಂದೊದಗೋ ಸಾಧ್ಯತೆಯಿದೆ. ಈ ನಿಟ್ಟಿನಲ್ಲಾದ್ರೂ ಪರಿಸರ ಸಂರಕ್ಷಣೆಗೆ ಒತ್ತುನೀಡಬೇಕು ಅನ್ನುತ್ತಿದ್ದಾರೆ ಪರಿಸರ ಸಂರಕ್ಷಕರು.
ಸ್ಪೆಷಲ್ ಡೆಸ್ಕ್ NEWS NEXT ಕನ್ನಡ