- ಹೇಮಂತ್ ಚಿನ್ನು
ಆಂಧ್ರ ಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ರಾಜಮಂಡ್ರಿಯಿಂದ 30 ಕಿಮೀ ದೂರದಲ್ಲಿ ಬಿಕ್ಕವೋಲು ಎಂಬಲ್ಲಿ ಈ ಗಣಪನ ಆಲಯ ಇದೆ. ಈ ಪ್ರಾಂತ್ಯವನ್ನು ಆಳಿದ ವಿಕ್ರಮಾದಿತ್ಯನ ಹೆಸರೇ ಬಿಕ್ಕವೋಲು ಆಗಿದೆ.

ಈ ದೇಗುಲ ಕ್ರಿಶ 840ರಲ್ಲಿ ನಿರ್ಮಿತವಾಗಿದೆ ಎಂದು ಶಾಸನಗಳಲ್ಲಿ ಉಲ್ಲೇಖಗಳಿವೆ. ಇದು ಸ್ವಯಂ ಭೂ ಗಣೇಶ ಆಗಿದ್ದು , ಭಕ್ತನೊಬ್ಬನಿಗೆ ಕನಸಿನಲ್ಲಿ ಬಂದು ನಾನು ಇಂತಹ ಸ್ಥಳದಲ್ಲಿ ಇದ್ದೇನೆ, ನನಗೊಂದು
ಆಲಯ ನಿರ್ಮಿಸು ಎಂದು ಆದೇಶಿಸುತ್ತಾನೆ. ಆ ಭಕ್ತನು ಈ ವಿಷಯವನ್ನು ಊರಿನಲ್ಲಿ ಎಲ್ಲರಿಗೂ ತಿಳಿಸಿ ಆ ಸ್ಥಳದಲ್ಲಿ ಅಗೆಯಲು ಗಣಪ ಕಾಣುತ್ತಾನೆ.

ಹೊರತೆಗೆದ ಮೇಲೆ ಗಣಪ ದೊಡ್ಡದಾಗಿ ಬೆಳೆದನೆಂದು ಪ್ರತೀತಿ. ಆನಂತರ ಭಕ್ತರು ಗುಡಿ ಸಣ್ಣದಾಗಿ ನಿರ್ಮಾಣ ಮಾಡಿ ಪೂಜಿಸುತ್ತಿ ರುತ್ತಾರೆ. ಹಾಗೂ ಈ ಗಣಪನನ್ನು ಲಕ್ಷೀ ಗಣಪತಿ ಎಂದು ಕರೆಯುತ್ತಾರೆ. ಮುಂದಿನ ದಿನಗಳಲ್ಲಿ ಚಾಲುಕ್ಯರು ಒಳ್ಳೆಯ ದೇಗುಲ ನಿರ್ಮಿಸುತ್ತಾರೆ.

ಎಲ್ಲಾ ಗಣಪನ ಆಲಯಗಳಲ್ಲಿ ಗಣಪನ ಸೊಂಡಿಲು ಎಡಗಡೆಗೆ ಇರುತ್ತದೆ ಆದರೆ ಇಲ್ಲಿ ಸೊಂಡಿಲು ಬಲಗಡೆಗೆ ತಿರುಗಿದೆ.11 ಅಡಿ ಎತ್ತರವಿರುವ ಗಣಪನನ್ನು ನೋಡಿದ ತಕ್ಷಣ ಭಕ್ತಿ ಭಾವ ಉಕ್ಕುತ್ತದೆ. ಈ ಆಲಯದಲ್ಲಿ ಶಿವ ಪಾರ್ವತಿಯರು ಆಲಿಂಗನ ಸ್ಥಿತಿಯಲ್ಲಿರುವ ಶಿಲ್ಪವಿದೆ. ಬಹಳ ಸುಂದರವಾದ ಈ ಶಿಲ್ಪ ನೋಡುಗರನ್ನು ಸೆಳೆಯುತ್ತಿದೆ.

ಈ ಆಲಯದ ಆವರಣದಲ್ಲಿ ಭೂಲಿಂಗೇಶ್ವರ, ಸುಬ್ರಮಣ್ಯ, ನಂದೀಶ್ವರ ಗುಡಿಗಳಿವೆ. ರಾಜ ರಾಜೇಶ್ವರ, ಚಂದ್ರಶೇಖರ ದೇವಾಲಯವೂ ಇದೆ. ಇದಲ್ಲದೆ ಬಿಕ್ಕವೋಲು ಊರಿನ ಸುತ್ತಲೂ ಮೂರು ಭಾರೀ ಶಿವಾಲಯಗಳಿವೆ. ಹಲವಾರು ಜೈನದೇಗುಲಗಳೂ ಇವೆ. ಇಲ್ಲಿ ನಡೆಯುವ ಗಣಪತಿ ನವರಾತ್ರಿ ಉತ್ಸವ, ಸುಬ್ರಮಣ್ಯ ಉತ್ಸವಗಳಲ್ಲಿ ಸಾವಿರಾರು ಜನ ಪಾಲ್ಗೊಳ್ಳುತ್ತಾರೆ. ಇಲ್ಲಿ ಗಣಪತಿ ಹೋಮ ಮಾಡಿಸಿದರೆ ಗಣಪ ನಮ್ಮ ಕುಟುಂಬಕ್ಕೆ ಆಸರೆಯಾಗು ತ್ತಾನೆಂದು ಪ್ರತೀತಿ.

ಬೇರೆ ದೇಗುಲಗಳಂತೆ ಅರ್ಚಕರು ಪೂಜೆ ಮಾಡಿ ಮಂಗಳಾರತಿ ಕೊಡುವುದಿಲ್ಲ. ಅರ್ಚಕರು ಇರುತ್ತಾರಾದರೂ ಅಭಿಷೇಕ ಪೂಜೆ ಆದ ನಂತರ ನಾವೂ ಗಣಪನಿಗೆ ಪೂಜೆ ಮಾಡ ಬಹುದು ಹಾಗೂ ಗಣಪನ ಕಿವಿಯಲ್ಲಿ ನಮ್ಮ ಕೋರಿಕೆಗಳನ್ನು ಕೇಳಿಕೊಳ್ಳಬಹುದು. ಗಣಪನ ಕಿವಿಯಲ್ಲಿ ನಾವು ಕೇಳಿಕೊಂಡ ಕೋರಿಕೆಯನ್ನು ಗಣಪ ತಪ್ಪದೆ ಈಡೇರಿಸುತ್ತಾನೆಂದು ಇಲ್ಲಿಗೆ ಬರುವ ಭಕ್ತರ ನಂಬಿಕೆ, ನಾವೂ ಪ್ರಯತ್ನಿಸೋಣವೇ ?
ಇದನ್ನೂ ಓದಿ : ಜ್ಯುವೆಲ್ಲರಿ ಶಾಪ್ ಮಾಲೀಕರ ಮಗ ಆತ್ಮಹತ್ಯೆ : ಬ್ರಹ್ಮಾವರದಲ್ಲಿ ಶಿಕ್ಷಕ ದಂಪತಿಗೆ ಮಗನಿಂದ ಜೀವ ಬೆದರಿಕೆ
ಇದನ್ನೂ ಓದಿ : Booster Drive :ಕೋವಿಶೀಲ್ಡ್, ಕೋವ್ಯಾಕ್ಸಿನ್ ಬೂಸ್ಟರ್ ಡೋಸ್ಗಳ ದರ ಇಳಿಕೆ
biccavolu Ganesha temple god will listen your Request