ಪುತ್ತೂರು : ಕರಾವಳಿಯಲ್ಲೀಗ ಕೋಟಿ – ಚೆನ್ನಯ್ಯರ ಹುಟ್ಟು ವಿವಾದಕ್ಕೆ ಕಾರಣವಾಗಿದೆ. ಅದ್ರಲ್ಲೂ ಕಾರಣೀಕ ವೀರಪುರುಷರಾದ ಕೋಟಿ – ಚೆನ್ನಯ್ಯರು ಹುಟ್ಟಿ ಬೆಳೆದ ಸ್ಥಳಗಳು ಈಗ ವಿವಾದವನ್ನು ಹುಟ್ಟುಹಾಕಿವೆ.
ದಕ್ಷಿಣ ಕನ್ನಡ ಜಿಲ್ಲೆಯ ಪಡುಮನೆ, ಏಣ್ಮೂರು, ಗೆಜ್ಜೆಗಿರಿ ಎಂಬ ಮೂರು ಸ್ಥಳಗಳಲ್ಲಿ ಕೋಟಿ – ಚೆನ್ನಯ್ಯರ ಜೀವನಗಾಥೆಯ ಕಥನಗಳಿವೆ, ಕುರುಹುಗಳಿವೆ. ಆದರೆ ಕೆಲವು ಸ್ವಾರ್ಥ ಜನರ ಮನಸ್ಥಿತಿ, ಮತ್ಸರ, ಅಧಿಕಾರದ ಲಾಲಸೆ, ದ್ವೇಷದ ಮನೋಭಾವನೆಯಿಂದ ಈ ಕ್ಷೇತ್ರಗಳು ವಿವಾದದ ಕೇಂದ್ರ ಬಿಂದುವಾಗಿರುವುದು ದುರಂತವೇ ಸರಿ.

ಪಡುಮಲೆ, ಗೆಜ್ಜೆಗಿರಿ ವಿವಾದ ಕಳೆದ 15 ದಿನಗಳಿಂದ ಜಿಲ್ಲೆಯಲ್ಲಿ ಬಹಳಷ್ಟು ಚರ್ಚೆಯನ್ನು ಹುಟ್ಟು ಹಾಕಿದೆ. ಅದ್ರಲ್ಲೂ ಹರಿಕೃಷ್ಣ ಬಂಟ್ವಾಳ್ ವಿವಾದದ ಕೇಂದ್ರದಂತೆ ಗೋಚರ ವಾಗುತ್ತಿದ್ದರೂ ಸತ್ಯ ಬೇರೆಯದೇ ಇದೆ. ಗೆಜ್ಜೆಗಿರಿ ಹಾಗೂ ಬೆಳ್ತಂಗಡಿಯ ತಂಡಗಳ ನಡುವೆ ವೈಮನಸ್ಸಿದ್ದು, ಈ ತಂಡಗಳ ವೈಮನಸ್ಸೇ ಪಡುಮಲೆ ಹಾಗೂ ಗೆಜ್ಜೆಗಿರಿಯಲ್ಲಿಂದು ವಿವಾದಕ್ಕೆ ಕಾರಣವಾಗಿದೆ. ನಂತರದ ದಿನಗಳಲ್ಲಿ ಹರಿಕೃಷ್ಣ ಬಂಟ್ವಾಳ್ ವಿವಾದ ಸೃಷ್ಟಿಸುತ್ತಾ ಸಾಗಿದ್ದಾರೆ ಅನ್ನೋ ಆರೋಪವಿದೆ.

ಪಡುಮಲೆಯ ಬಗ್ಗೆ ಕರಾವಳಿಯಲ್ಲಿ ಹುಟ್ಟಿರುವ ಹಲವಾರು ಪ್ರಶ್ನೆಗಳಿಗೆ ಇಂದಿಗೂ ಸಮರ್ಪಕವಾದ ಉತ್ತರ ಇನ್ನೂ ಸಿಕ್ಕಿಲ್ಲ ಎನ್ನುತ್ತಿದ್ದಾರೆ ಕೋಟಿ – ಚೆನ್ನಯ್ಯರ ಆರಾಧಕರು. ಮಾತ್ರವಲ್ಲ ಬಲ್ಲಾಳ ಕೋಟಿ ಚೆನ್ನಯ್ಯರನ್ನು ಕೊಂದಿದ್ದಾರೆ. ಈ ಕೊಂದ ರಾಜರಿಗೆ ಯಾಕೆ ಮರ್ಯಾದಿ ಅಂತಾನೂ ಪ್ರಶ್ನಿಸುತ್ತಿದ್ದಾರೆ. 12 ವರ್ಷದ ದೇಯಿ ಬೈದಿತಿಯನ್ನು ಕೂವೆ ತೋಟದ ಮನೆಯಿಂದ ಕಣ್ಣಿಗೆ ಬಟ್ಟೆ ಕಟ್ಟಿ ಕಾಡಿಗೆ ಬಿಡಲಾಗಿತ್ತು. ಕಾಡು ಪ್ರಾಣಿಗಳಿಗೆ ಆಹಾರವಾಗ ಬೇಕಾಗಿದ್ದ ದೇಯಿ ಬೈದಿತಿಯನ್ನು ಸಾಯನ ಬೈದರು ತಂದು ಸಾಕಿದರು. ಮನೆಯಿಂದ ಕಾಡಿಗಟ್ಟಿದ್ದ ದೇಯಿ ಬೈದಿತಿ 550 ವರ್ಷದ ನಂತರ ಕೂವೆ ತೋಟದ ಮನೆಗೆ ಬೇಕಾಗಿರುವುದು ಯಾಕೆ ಅನ್ನೋದು ಹಲವರ ಪ್ರಶ್ನೆ.

ಇನ್ನೊಂದು ಬಹುಮುಖ್ಯವಾದ ಪ್ರಶ್ನೆಯೊಂದು ಕೇಳಿಬಂದಿದೆ. ದೇಯಿ ಬೈದಿತಿಯ ಸಾವಿಗೆ ಕಾರಣ ಎನ್ನಲಾಗುತ್ತಿರುವ ಮಂತ್ರಿ ಮಲ್ಲಯ್ಯ ಬುದ್ದಿವಂತನನ್ನು ಕೋಟಿ – ಚೆನ್ನಯ್ಯ ಕೊಂದಿದ್ದಾರೆ. ಇಂತಹ ವ್ಯಕ್ತಿಗೆ ಅವನಿಗೆ ಮೋಕ್ಷ ಮಾಡುವುದು ಸರಿಯೇ ? ಅನ್ನೋದು ಗೆಜ್ಜೆಗಿರಿ ತಂಡ ಪ್ರಶ್ನೆ. ಇನ್ನು ಗೆಜ್ಜೆಗಿರಿ ಜಾಗದ ಮಾಲೀಕತ್ವದ ಹೊಂದಿರುವ ಶ್ರೀಧರ ಪೂಜಾರಿಯವರ ಅವರ ಬಗ್ಗೆಯೂ ಆರೋಪ ಕೇಳಿಬಂದಿದೆ. ಹಣ ದುರ್ಬಳಕೆ ಹಾಗೂ ಜಾಗವನ್ನು ಟ್ರಸ್ಟ್ ಗೆ ವರ್ಗಾಯಿಸದ ಕುರಿತು ಆಕ್ಷೇಪಗಳನ್ನು ಪಡುಮಲೆ ತಂಡ ಎತ್ತಿದೆ.

ಸತ್ಯಧರ್ಮಕ್ಕಾಗಿ ಹೋರಾಡಿದ ಕೋಟಿ – ಚೆನ್ನಯ್ಯರ ಅಂಗಳದಲ್ಲಿ ಕೆಲವರು ಅಧರ್ಮದ ಕಾರ್ಯಕ್ಕೆ ಕೈ ಹಾಕಿದ್ದಾರೆ. ಅವರನ್ನು ಕೋಟಿ ಚೆನ್ನಯ್ಯರು ನೋಡಿಕೊಳ್ಳುತ್ತಾರೆ ಅಂತಾ ಹಿರಿಯರೊಬ್ಬರು ಅಭಿಪ್ರಾಯಪಟ್ಟಿದ್ದಾರೆ. ಒಟ್ಟಿನಲ್ಲಿ ಕೋಟಿ – ಚೆನ್ನಯ್ಯರ ವೀರ, ಸಾಹಸ ಗಾಥೆಯನ್ನು ಜನರಿಗೆ ತಲುಪಿಸುವ ಕಾರ್ಯವನ್ನು ಮಾಡುವ ಬದಲು, ಕರಾವಳಿಯ ವೀರಪುರುಷರ ಹುಟ್ಟಿದ ಸ್ಥಳ ಇದೀಗ ವಿವಾದಕ್ಕೆ ಕಾರಣವಾಗಿರೋದು ಮಾತ್ರ ದುರಂತವೇ ಸರಿ.